ADVERTISEMENT

ICC T20 World Cup| ಅಭ್ಯಾಸದ ವೇಳೆ ರೋಹಿತ್‌ ಬಲಗೈಗೆ ಪೆಟ್ಟು: ತಂಡದಲ್ಲಿ ಆತಂಕ

ಪಿಟಿಐ
Published 8 ನವೆಂಬರ್ 2022, 17:18 IST
Last Updated 8 ನವೆಂಬರ್ 2022, 17:18 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ    

ಅಡಿಲೇಡ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಮಂಗಳವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಬಲಗೈಗೆ ಚೆಂಡು ಬಡಿದು ಪೆಟ್ಟಾಯಿತು.

ಗುರುವಾರ ಅಡಿಲೇಡ್‌ನಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಮಂಗಳವಾರ ಇಲ್ಲಿ ಭಾರತ ತಂಡವು ಅಭ್ಯಾಸ ನಡೆಸಿತು.

ನೆಟ್ಸ್‌ನಲ್ಲಿ ಥ್ರೋಡೌನ್ ಪರಿಣತ ರಾಘವೇಂದ್ರ ಅವರು ಹಾಕಿದ ಶಾಟ್ ಪಿಚ್ ಎಸೆತವನ್ನು ಪುಲ್‌ ಮಾಡಲು ಪ್ರಯತ್ನಿಸಿದ ರೋಹಿತ್ ಬಲಗೈಗೆ ಚೆಂಡು ಅಪ್ಪಳಿಸಿತು. ತೀವ್ರ ನೋವು ಅನುಭವಿಸಿದರು. ತಂಡದ ವೈದ್ಯಕೀಯ ಸಿಬ್ಬಂದಿಯು ಐಸ್‌ಪ್ಯಾಕ್ ಹಾಕಿ ಆರೈಕೆ ಮಾಡಿತು. ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ ರೋಹಿತ್ ಮತ್ತೆ ಅಭ್ಯಾಸ ಮುಂದುವರಿಸಿದರು.

ADVERTISEMENT

‘ಗಾಯ ಗಂಭೀರವಿದ್ದಂತೆ ಕಾಣುತ್ತಿಲ್ಲ. ಪ್ರಥಮ ಚಿಕಿತ್ಸೆಯ ನಂತರ ಅವರು ಬಹಳ ಹೊತ್ತು ಬ್ಯಾಟಿಂಗ್ ಮಾಡಿದ್ದಾರೆ. ಎಕ್ಸ್‌ರೇ ಅಥವಾ ಸಿ.ಟಿ ಸ್ಕ್ಯಾನಿಂಗ್ ಸದ್ಯಕ್ಕೆ ಅಗತ್ಯವಿಲ್ಲ’ ಎಂದು ತಂಡದ ಮೂಲಗಳು ತಿಳಿಸಿವೆ.

ಈ ಟೂರ್ನಿಯಲ್ಲಿ ರೋಹಿತ್ ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ಸಫಲರಾಗಿಲ್ಲ. ಐದು ಪಂದ್ಯಗಳಿಂದ ಕೇವಲ 89 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಇದೆ.

ಮಾರ್ಕ್ ವುಡ್‌ ಫಿಟ್‌ನೆಸ್‌ ಸಮಸ್ಯೆ: ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಮಾರ್ಕ್ ವುಡ್ ಅವರು ಪಂದ್ಯದಲ್ಲಿ ಆಡಲು ಇನ್ನೂ ಫಿಟ್‌ ಆಗಿಲ್ಲ.

ದೇಹದಲ್ಲಿ ಸ್ನಾಯುಗಳ ಸೆಳೆತ ಇರುವುದರಿಂದ ಅವರು ಮಂಗಳವಾರ ಓಟದ ಅಭ್ಯಾಸವನ್ನು ಮೊಟಕುಗೊಳಿಸಿ ವಿಶ್ರಾಂತಿ ಪಡೆದರು. ಇದರಿಂದಾಗಿ ಅವರು ಸೆಮಿಫೈನಲ್ ಪಂದ್ಯಕ್ಕೆ ಫಿಟ್ ಆಗುವುದು ಅನುಮಾನವಾಗಿದೆ. ಒಂದೊಮ್ಮೆ ಅವರು ಕಣಕ್ಕಿಳಿಯದಿದ್ದರೆ ಟೈಮಲ್ ಮಿಲ್ಸ್‌ ಅಥವಾ ಕ್ರಿಸ್ ಜೋರ್ಡಾನ್ ಅವರರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.