ADVERTISEMENT

ಭಾರತ ಕ್ರಿಕೆಟ್‌ ತಂಡವನ್ನು ಭೇಟಿ ಮಾಡಿದ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2025, 14:37 IST
Last Updated 15 ಜುಲೈ 2025, 14:37 IST
   

ಲಂಡನ್‌: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್‌ ತಂಡವನ್ನು ಇಲ್ಲಿನ ಸೆಂಟ್ ಜೇಮ್ಸ್‌ ಅರಮನೆಯಲ್ಲಿ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್ ಭೇಟಿ ಮಾಡಿದ್ದಾರೆ. ಮುಂಬರುವ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.

ಲಾರ್ಡ್ಸ್‌ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಈ ವೇಳೆ ಬಿಸಿಸಿಐ ಅಧಿಕಾರಿಗಳು ಹಾಜರಿದ್ದರು.

ಭಾರತ ಟೆಸ್ಟ್ ತಂಡದ ನಾಯಕ ಶುಭಮನ್‌ ಗಿಲ್‌ ಸೇರಿದಂತೆ ಎಲ್ಲರ ಕೈಕುಲುಕಿದ ಚಾರ್ಲ್ಸ್‌, ಆಟಗಾರರೊಂದಿಗೆ ತಮಾಷೆ ಮಾಡಿ ನಕ್ಕಿದ್ದಾರೆ. ಈ ವೇಳೆ ಕ್ರಿಕೆಟ್‌ ಬಗ್ಗೆಯೂ ಚರ್ಚಿಸಿದ್ದಾರೆ. ಕೊನೆಯಲ್ಲಿ ಭಾರತ ತಂಡದೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ADVERTISEMENT

ಕಿಂಗ್ ಚಾರ್ಲ್ಸ್‌ ಅವರನ್ನು ಭೇಟಿಯಾಗಿರುವುದರ ಬಗ್ಗೆ ಶುಭಮನ್ ಗಿಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ದೊರೆಯ ಔದಾರ್ಯವನ್ನು ಬಾಯ್ತುಂಬ ಹೊಗಳಿದ್ದಾರೆ.

‘ಈ ಪಂದ್ಯ(ಲಾರ್ಡ್ಸ್‌) ನಮ್ಮ ಪಾಲಿಗೆ ದುರದೃಷ್ಟಕರವಾಗಿತ್ತು ಎಂದು ನಾವು ಅವರಿಗೆ ಹೇಳಿದೆವು. ಮುಂದಿನ ಎರಡು ಪಂದ್ಯಗಳಲ್ಲಿ ಅದೃಷ್ಟ ನಿಮ್ಮದಾಗಲಿದೆ ಎಂದು ಅವರು ನಮಗೆ ಹೇಳಿದರು’ ಎಂದು ಗಿಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಶುಭಮನ್ ಗಿಲ್ ನೇತೃತ್ವದ ಭಾರತ ತಂಡ, ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 22 ರನ್‌ಗಳ ಸೋಲನುಭವಿಸಿದೆ. ಸರಣಿಯಲ್ಲಿ 1–2ರ ಹಿನ್ನೆಡೆಯಲ್ಲಿದೆ. ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ ಟಿ–20 ಸರಣಿಯನ್ನು 3-2 ಅಂತರದಿಂದ ಗೆದ್ದಿದ್ದು, ಬುಧವಾರದಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.