ADVERTISEMENT

IPL 2025 GT v CSK | ಚೆನ್ನೈಗೆ ಕೊನೆ ಪಂದ್ಯದಲ್ಲಿ ಗೆಲುವಿನ ಸಮಾಧಾನ

ಟೈಟನ್ಸ್‌ಗೆ ಅಗ್ರಸ್ಥಾನ ಕೈತಪ್ಪುವ ಚಿಂತೆ; ಶುಭಮನ್ ಗಿಲ್ ಬಳಗಕ್ಕೆ ನಿರಾಸೆ

ಪಿಟಿಐ
Published 25 ಮೇ 2025, 11:47 IST
Last Updated 25 ಮೇ 2025, 11:47 IST
<div class="paragraphs"><p>ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಆಟಗಾರರ ಸಂಭ್ರಮ</p></div>

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಆಟಗಾರರ ಸಂಭ್ರಮ

   

–ಪಿಟಿಐ ಚಿತ್ರ

ಅಹಮದಾಬಾದ್: ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಪಾಯಿಂಟ್ ಪಟ್ಟಿಯ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ಆಸೆಗೆ ಚೆನ್ನೈ ಸೂಪರ್ ಕಿಂಗ್ಸ್ ಅಡ್ಡಗಾಲು ಹಾಕಿತು. 

ADVERTISEMENT

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡವು 83 ರನ್‌ಗಳಿಂದ ಗುಜರಾತ್ ತಂಡವನ್ನು ಮಣಿಸಿತು. ಇದು  ಉಭಯ ತಂಡಗಳಿಗೂ ಲೀಗ್ ಹಂತದ ಕೊನೆ ಪಂದ್ಯವಾಗಿತ್ತು. ಟೈಟನ್ಸ್ ತಂಡವು ಒಟ್ಟು 14 ಪಂದ್ಯಗಳಿಂದ 18 ಅಂಕ ಗಳಿಸಿದೆ. ಸದ್ಯ ಅಗ್ರಸ್ಥಾನದಲ್ಲಿಯೂ ಇದೆ.

ಆದರೆ ತಲಾ 17 ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ 16 ಪಾಯಿಂಟ್ಸ್‌ ಗಳಿಸಿರುವ ಮುಂಬೈ ಇಂಡಿಯನ್ಸ್ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇದೆ. ಆರ್‌ಸಿಬಿಯು ಲಖನೌ ಸೂಪರ್ ಕಿಂಗ್ಸ್ ವಿರುದ್ಧ ಮತ್ತು ಪಂಜಾಬ್ ತಂಡವು ಮುಂಬೈ ವಿರುದ್ಧ ಆಡಲಿವೆ. 

ಗುಜರಾತ್ ತಂಡವು ಕೊನೆಯ ಪಂದ್ಯದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. 231 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ತಂಡವು ಪವರ್‌ಪ್ಲೇನಲ್ಲಿಯೇ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ಶೆರ್ಫೆನ್ ರುದರ್‌ಫೋರ್ಡ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 35 ರನ್‌ಗಳಿದ್ದವು. ಇದರಿಂದ ಚೇತರಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. 

ಗುಜರಾತ್  ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ (41, 28ಎ, 4X6) ಗರಿಷ್ಠ ವೈಯಕ್ತಿಕ  ಸ್ಕೋರ್ ದಾಖಲಿಸಿದ ಬ್ಯಾಟರ್ ಆದರು. ಅವರು ತಮ್ಮ ತವರು ತಮಿಳುನಾಡು ತಂಡ ಸಹಆಟಗಾರ ಶಾರೂಕ್ ಖಾನ್ (19 ರನ್) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 55 ರನ್ ಸೇರಿಸಿದರು. 

ಆದರೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ತಮ್ಮ ಎರಡನೇ ಸ್ಪೆಲ್‌ನಲ್ಲಿ ಕೈಚಳಕ ತೋರಿಸಿದರು. ಇನಿಂಗ್ಸ್‌ನ 11ನೇ ಓವರ್‌ನಲ್ಲಿ ನಾಲ್ಕು ಎಸೆತಗಳ ಅಂತರದಲ್ಲಿ ಸುದರ್ಶನ್ ಮತ್ತು ಶಾರೂಕ್ ಅವರ ವಿಕೆಟ್ ಕಬಳಿಸಿದರು. ಇದು ಗುಜರಾತ್ ಇನಿಂಗ್ಸ್‌ ಕುಸಿಯಲು ಕಾರಣವಾಯಿತು. 

ಕಾನ್ವೆ, ಬ್ರೆವಿಸ್ ಅಬ್ಬರ:

ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡವು ಕೊನೆ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸಿತು. ಆದರೂ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯಿತು. ತಂಡದ ಮಟ್ಟಿಗೆ ಇದು ಅತ್ಯಂತ ಕಳಪೆ ಸಾಧನೆಯಾಗಿದೆ. 

ಟಾಸ್ ಗೆದ್ದ ಚೆನ್ನೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಯುಷ್ ಮ್ಹಾತ್ರೆ (34; 17ಎ, 4X3, 6X3) ಮತ್ತು ಡೆವೊನ್ ಕಾನ್ವೆ  ಉತ್ತಮ ಆರಂಭ ನೀಡಿದರು. ಕಾನ್ವೆ (52; 35ಎ, 4X6, 6X2) ಮತ್ತು ಡೆವಾಲ್ಡ್ ಬ್ರೆವಿಸ್ (57; 23ಎ, 4X4, 6X5)ಅವರ ಅಬ್ಬರದ ಅರ್ಧಶತಕಗಳಿಂದಾಗಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 ರನ್ ಗಳಿಸಿತು. 

ಗುಜರಾತ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಅರ್ಷದ್ ಖಾನ್ ಅವರು ದುಬಾರಿಯಾದರು. ವಿಕೆಟ್‌ ಕೂಡ ಲಭಿಸಲಿಲ್ಲ. ಕನ್ನಡಿಗ ಪ್ರಸಿದ್ಧ ಕೃಷ್ಣ (22ಕ್ಕೆ2) ಯಶಸ್ವಿಯಾದರು.  

ಸಂಕ್ಷಿಪ್ತ ಸ್ಕೋರು:

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 230 (ಆಯುಷ್ ಮ್ಹಾತ್ರೆ 34, ಡೆವೊನ್ ಕಾನ್ವೆ 52, ಊರ್ವಿಲ್ ಪಟೆಲ್ 37, ಡೆವಾಲ್ಡ್ ಬ್ರೆವಿಸ್ 57, ರವೀಂದ್ರ ಜಡೇಜ ಔಟಾಗದೇ 21, ಪ್ರಸಿದ್ಧಕೃಷ್ಣ 22ಕ್ಕೆ2)

ಗುಜರಾತ್ ಟೈಟನ್ಸ್: 18.3 ಓವರ್‌ಗಳಲ್ಲಿ 147 (ಸಾಯಿ ಸುದರ್ಶನ್ 41, ಶಾರೂಕ್ ಖಾನ್ 19, ಅರ್ಷದ್ ಖಾನ್ 20, ರಾಹುಲ್ ತೆವಾಟಿಯಾ 14, ರವೀಂದ್ರ ಜಡೇಜ 17ಕ್ಕೆ2, ಅನ್ಷುಲ್ ಕಾಂಭೋಜ್ 13ಕ್ಕೆ3, ನೂರ್ ಅಹಮದ್ 21ಕ್ಕೆ3)

ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 83 ರನ್‌ಗಳ ಜಯ.  ಪಂದ್ಯದ ಆಟಗಾರ: ಡೆವಾಲ್ಡ್ ಬ್ರೆವಿಸ್.

‘ನಿವೃತ್ತಿ ಯೋಚಿಸಲು 4–5 ತಿಂಗಳುಗಳಿವೆ’
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ವರ್ಷದ ಅಭಿಯಾನ ಮುಗಿಸಿತು. ಆದರೆ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರ ನಿವೃತ್ತಿಯ ಕುರಿತ ‘ಸಸ್ಪೆನ್ಸ್‌’ ಮಾತ್ರ ಉಳಿಯಿತು. ಅವರಿಗೆ ಇದು ಕೊನೆಯ ಐಪಿಎಲ್ ಟೂರ್ನಿ ಎಂದು ಹೇಳಲಾಗಿತ್ತು. ಈ ಕುರಿತು ಪಂದ್ಯದ ನಂತರ ಸುದ್ದಿಗಾರರೊಂದಿಗೆ ಧೋನಿ ಮಾತನಾಡಿದರು. ‘ನಿವೃತ್ತಿ ಕುರಿತು ನಿರ್ಧರಿಸಲು ನನಗಿನ್ನೂ 4–5 ತಿಂಗಳುಗಳ ಸಮಯವಿದೆ. ಅವಸರವೇನೂ ಇಲ್ಲ. ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಉತ್ತಮ ಪ್ರದರ್ಶನ ನೀಡುವಂತಿರಬೇಕು’ ಎಂದು 43 ವರ್ಷದ ಧೋನಿ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.