ADVERTISEMENT

ಬಾಬರ್‌ನಂತಹ ಆಟಗಾರನಿಲ್ಲವೆಂಬ ಕೊರಗು ಭಾರತಕ್ಕೂ ಕಾಡಲಿದೆ: ಪಾಕ್ ಮಾಜಿ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2021, 6:12 IST
Last Updated 20 ಡಿಸೆಂಬರ್ 2021, 6:12 IST
ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್
ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್    

ನವದೆಹಲಿ: ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಹಾಗೂ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಮುಕ್ತಕಂಠವಾಗಿ ಶ್ಲಾಘಿಸಿರುವ ಮಾಜಿ ನಾಯಕ ರಶೀದ್ ಲತೀಫ್, ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.

'ಸುಮಾರು ಒಂದು ವರ್ಷದ ಹಿಂದೆ ವಿಶೇಷವಾಗಿಯೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾವು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಕೆ.ಎಲ್. ರಾಹುಲ್ ಅವರಂತಹ ಆಟಗಾರರನ್ನು ಹೊಂದಿಲ್ಲ ಎಂಬ ಕೊರಗು ಕಾಡುತ್ತಿತ್ತು. ಆದರೆ ಇನ್ನು ಸ್ವಲ್ಪ ಸಮಯದ ಬಳಿಕ ಭಾರತೀಯರು ಕೂಡ ತಮ್ಮಲ್ಲಿ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಆಜಂ ಅವರಂತಹ ಆಟಗಾರರನ್ನು ಹೊಂದಿಲ್ಲ ಎಂದು ಕೊರಗಲು ಪ್ರಾರಂಭಿಸುತ್ತಾರೆ' ಎಂದು ಹೇಳಿದ್ದಾರೆ.

ಪಿಟಿವಿ ಸ್ಪೋರ್ಟ್ಸ್ ಶೋದಲ್ಲಿ ಲತೀಫ್ ನೀಡಿರುವ ಹೇಳಿಕೆಯನ್ನು 'ಎನ್‌ಡಿಟಿವಿ' ವರದಿ ಮಾಡಿದೆ.

ಇತ್ತೀಚೆಗೆ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಟ್ವೆಂಟಿ-20 ಸರಣಿಯಲ್ಲಿ ಪಾಕಿಸ್ತಾನವು 3-0 ಅಂತರದ ಕ್ಲೀನ್‌ಸ್ವೀಪ್ ಜಯ ಗಳಿಸಿತ್ತು. ಆ ನಡುವೆ ಕೆಲವು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಕದಿನ ಸರಣಿಯನ್ನು ಮುಂದೂಡಲಾಗಿದೆ.

ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನವು 208 ರನ್ ಬೆನ್ನಟ್ಟಿತ್ತು. ರಿಜ್ವಾನ್ 87 ರನ್ (45 ಎಸೆತ) ಹಾಗೂ ಬಾಬರ್ 79 ರನ್ (53 ಎಸೆತ) ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 158 ರನ್‌ಗಳ ಜೊತೆಯಾಟ ಕಟ್ಟಿದ್ದರು. ಈ ಮೂಲಕ 2021ನೇ ಸಾಲಿನಲ್ಲಿ ನಾಲ್ಕನೇ ಬಾರಿಗೆ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.