ADVERTISEMENT

ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್: ಫೈನಲ್ ತಲುಪಿದ ಭಾರತ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 6:12 IST
Last Updated 13 ಅಕ್ಟೋಬರ್ 2022, 6:12 IST
ಭಾರತ ತಂಡದ ಆಟಗಾರ್ತಿಯರು (ಚಿತ್ರಕೃಪೆ: Twitter /@BCCIWomen)
ಭಾರತ ತಂಡದ ಆಟಗಾರ್ತಿಯರು (ಚಿತ್ರಕೃಪೆ: Twitter /@BCCIWomen)   

ಸಿಲೆಟ್ (ಬಾಂಗ್ಲಾದೇಶ): ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 74 ರನ್‌ ಅಂತರದ ಸುಲಭ ಜಯ ಸಾಧಿಸಿದ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇಲ್ಲಿನ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದಥಾಯ್ಲೆಂಡ್ ತಂಡದ ನಾಯಕಿನೆರುಮಾಲ್ ಚೈವೈ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಹರ್ಮನ್‌ಪ್ರೀತ್ ಕೌರ್‌ಪಡೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 148 ರನ್‌ ಗಳಿಸಿತು.

ಬಿರುಸಿನ ಬ್ಯಾಟರ್‌ ಶೆಫಾಲಿ ವರ್ಮಾ ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 48 ರನ್‌ ಚಚ್ಚಿದರು. ಜೆಮಿಯಾ ರಾಡ್ರಿಗಸ್‌ (27ರನ್‌) ಮತ್ತು ನಾಯಕಿ ಕೌರ್‌ (36 ರನ್‌) ಉತ್ತಮ ಆಟವಾಡಿದರು. ಸೊರ್ನಾರಿನ್‌ ಟಿಪೋಚ್ ಮೂರು ವಿಕೆಟ್‌ ಪಡೆದು ಮಿಂಚಿದರು.

ADVERTISEMENT

ಗುರಿ ಬೆನ್ನತ್ತಿದ ಥಾಯ್ಲೆಂಡ್‌ ಪಡೆ 9 ವಿಕೆಟ್‌ ಕಳೆದುಕೊಂಡು 74 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಥಾಯ್ಲೆಂಡ್ ಕೇವಲ 21 ರನ್‌ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹೀಗಾಗಿ 50ರನ್‌ ಒಳಗೆ ಆಲೌಟ್ ಆಗುವ ಆತಂಕಕ್ಕೂ ಒಳಗಾಗಿತ್ತು.

ಆದರೆ,ಈ ಹಂತದಲ್ಲಿ ಜೊತೆಯಾದ ನಾಯಕಿ ಚೈವೈ ಮತ್ತು ನತಯ್ಯಾ ಬೂಚತಾಮ್‌ 42 ರನ್‌ ಕೂಡಿಸಿ ಕುಸಿತ ತಪ್ಪಿಸಿದರು. ಈ ಇಬ್ಬರೂ ತಲಾ 21 ರನ್‌ ಗಳಿಸಿದ್ದಾಗ ಪೆವಿಲಿಯನ್‌ ಸೇರಿಕೊಂಡರು. ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದಿದ್ದರೂ, ಸೋಲಿನ ಅಂತರ ಕಡಿಮೆ ಮಾಡಿದರು. ಇವರಿಬ್ಬರನ್ನು ಹೊರತುಪಡಿಸಿ ಬೇರಾವ ಬ್ಯಾಟರ್‌ ಎರಡಂಕಿ ಮೊತ್ತ ಗಳಿಸಲಿಲ್ಲ.

ಥಾಯ್ಲೆಂಡ್‌ಗೆ ಆರಂಭದಲ್ಲೇ ಆಘಾತ ನೀಡಿದ ಸ್ಪಿನ್ನರ್‌ ದೀಪ್ತಿ ಶರ್ಮಾ ನಾಲ್ಕು ಓವರ್‌ಗಳಲ್ಲಿ ಕೇವಲ 7 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ರಾಜೇಶ್ವರಿ ಗಾಯಕವಾಡ್‌ 2 ವಿಕೆಟ್‌ ಪಡೆದರೆ,ರೇಣುಕಾ ಸಿಂಗ್‌,ಸ್ನೇಹ್‌ ರಾಣಾ ಹಾಗೂ ಶೆಫಾಲಿ ವರ್ಮಾ ತಲಾ ಒಂದೊಂದು ವಿಕೆಟ್‌ ಕಿತ್ತರು.

ಇದೇ ಮೈದಾನದಲ್ಲಿ ಇಂದು ಮಧ್ಯಾಹ್ನ 1ಕ್ಕೆ ಆರಂಭವಾಗಲಿರುವಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಗೆದ್ದ ತಂಡವು ಅಕ್ಟೋಬರ್‌ 15ರಂದು ಇಲ್ಲಿಯೇ ಭಾರತದ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.