ADVERTISEMENT

PV Web Exclusive| ಗಾಯಾಳು ಕ್ರಿಕೆಟಿಗನಿಗೊಂದು ಬದಲೀ ವ್ಯವಸ್ಥೆ ಬೇಕೆ?

ಗಿರೀಶದೊಡ್ಡಮನಿ
Published 5 ಜನವರಿ 2021, 15:11 IST
Last Updated 5 ಜನವರಿ 2021, 15:11 IST
ಪ್ರಿಟೊರಿಯಾದಲ್ಲಿ ಈಚೆಗೆ ನಡೆದ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾದ ಧನಂಜಯ ಡಿಸಿಲ್ವಾ ಅವರು ಗಾಯಗೊಂಡು ಪೆವಿಲಿಯನ್‌ಗೆ ಮರಳುತ್ತಿರುವುದು  –ಎಪಿ/ಪಿಟಿಐ ಚಿತ್ರ
ಪ್ರಿಟೊರಿಯಾದಲ್ಲಿ ಈಚೆಗೆ ನಡೆದ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾದ ಧನಂಜಯ ಡಿಸಿಲ್ವಾ ಅವರು ಗಾಯಗೊಂಡು ಪೆವಿಲಿಯನ್‌ಗೆ ಮರಳುತ್ತಿರುವುದು  –ಎಪಿ/ಪಿಟಿಐ ಚಿತ್ರ   

‘ನಾವು 21 ಆಟಗಾರರ ತಂಡವನ್ನು ಆಯ್ಕೆ ಮಾಡಿಕೊಂಡು ಬಂದಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಗ್ರ್ಯಾಂಟ್ ಫ್ಲಾವರ್ (ಬ್ಯಾಟಿಂಗ್ ಕೋಚ್) ಮೂರನೇ ಮತ್ತು ನಾನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಸಿದ್ಧರಾಗಬೇಕಿತ್ತು’–

ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ತಮ್ಮ ತಂಡದಲ್ಲಿ ಗಾಯಾಳುಗಳ ಸಾಲು ದೊಡ್ಡದಾದಂತೆ ತಮ್ಮ ಆತಂಕವನ್ನು ಹೊರಹಾಕಿದ್ದು ಹೀಗೆ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾದ ಹಿನ್ನಡೆಗೆ ಗಾಯದ ಸಮಸ್ಯೆಯೇ ಪ್ರಮುಖ ಕಾರಣವಾಗಿತ್ತು. ಎರಡನೇ ಟೆಸ್ಟ್‌ನಲ್ಲಂತೂ ಅವರ ಮುಖ್ಯವಾಹಿನಿಯ ಆರು ಆಟಗಾರರು ಮಾತ್ರ ಹನ್ನೊಂದರ ಬಳಗದಲ್ಲಿದ್ದರು. ಉಳಿದವರು ಅನುಭವದ ಕೊರತೆ ಮತ್ತು ಲಯದಲ್ಲಿಲ್ಲದ ಆಟಗಾರರೇ ಆಗಿದ್ದರು. ಅದಕ್ಕಾಗಿಯೇ ಅವರು ಈ ಕೋವಿಡ್ ಕಾಲದಲ್ಲಿ ಗಾಯಳುಗಳಿಗೂ ಬದಲೀ ಆಟಗಾರರನ್ನು ನೀಡಬೇಕು (ಕನ್‌ಕಷನ್‌ ನಿಯಮದಂತೆ) ಎಂದು ಒತ್ತಾಯಿಸಿದ್ದಾರೆ. ಬಹುಶಃ ಈಗ ಅವರ ಬೇಡಿಕೆಗೆ ಭಾರತವೂ ಜೊತೆಗೂಡಬಹುದೇನೋ?

ಆಸ್ಟ್ರೇಲಿಯಾ ಎದುರಿನ ಸರಣಿಗೆ ಬರುವಾಗಲೇ ಇಶಾಂತ್ ಶರ್ಮಾ ಗಾಯದಿಂದ ಹಿಂದೆ ಸರಿದಿದ್ದರು. ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ, ಎರಡನೇ ಪಂದ್ಯದಲ್ಲಿ ಉಮೇಶ್ ಯಾದವ್, ಮೂರನೇ ಪಂದ್ಯ ಆರಂಭಕ್ಕೂ ಮುನ್ನ ಕೆ.ಎಲ್. ರಾಹುಲ್ ಅವರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದಾರೆ. ರಾಹುಲ್ ಮೊದಲ ಎರಡೂ ಟೆಸ್ಟ್‌ಗಳಲ್ಲಿ ಆಡಿರಲಿಲ್ಲ.

ADVERTISEMENT

ಈಗ ರೋಹಿತ್ ಶರ್ಮಾ ಬಂದಿರುವುದರಿಂದ ಬ್ಯಾಟಿಂಗ್ ಬಗ್ಗೆ ಆತಂಕವಿಲ್ಲ. ಆದರೆ, ಬೌಲಿಂಗ್‌ನಲ್ಲಿ ಇಬ್ಬರು ಪ್ರಮುಖರು ಗಾಯಾಳಾಗಿರುವುದರಿಂದ ತಂಡ ಆತಂಕ ಎದುರಿಸುತ್ತಿದೆ. ಮೆಲ್ಬರ್ನ್‌ನಲ್ಲಿ ಕೇವಲ ನಾಲ್ಕು ಬೌಲರ್‌ (ಇಬ್ಬರು ಸ್ಪಿನ್ನರ್ ಮತ್ತು ಇಬ್ಬರು ಮಧ್ಯಮವೇಗಿಗಳು) ಗಳನ್ನೇ ಎರಡನೇ ಇನಿಂಗ್ಸ್‌ನಲ್ಲಿ ಆಡಿಸುವ ಅನಿವಾರ್ಯತೆ ಅಜಿಂಕ್ಯ ರಹಾನೆ ಅವರಿಗೆ ಎದುರಾಗಿತ್ತು. ಅಗ್ರಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕೆಲವು ಬ್ಯಾಟ್ಸ್‌ಮನ್‌ಗಳು ಲಯದಲ್ಲಿಲ್ಲದ ಕಾರಣ ಮೂರನೇ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿತ್ತು. ಮಯಂಕ್ ಅಗರವಾಲ್‌ಗೆ ವಿಶ್ರಾಂತಿ ಕೊಡುವ ಬಗ್ಗೆಯೂ ಹೇಳಲಾಗುತ್ತಿದೆ. ಆದರೆ, ಸತತ ವೈಫಲ್ಯ ಅನುಭವಿಸುತ್ತಿರುವ ಐದನೇ ಕ್ರಮಾಂಕದ ಹನುಮವಿಹಾರಿ ಬದಲು ರಾಹುಲ್ ಆಡುವ ಸಾಧ್ಯತೆ ದಟ್ಟವಾಗಿತ್ತು.

ಇದೀಗ ವಿಹಾರಿ ಅವರನ್ನೇ ಕಣಕ್ಕಿಳಿಸುವ ಅನಿವಾರ್ಯತೆ ತಂಡದ ಚಿಂತಕರ ಚಾವಡಿ ಮುಂದಿದೆ. ಸಿಡ್ನಿಯಲ್ಲಿ ದುರದೃಷ್ಟವಶಾತ್ ಮತ್ತೆ ಯಾರಾದರೂ ಗಾಯಗೊಂಡರೆ, ಬ್ರಿಸ್ಟೆನ್ ಟೆಸ್ಟ್‌ಗೆ ತಂಡದ ಆಯ್ಕೆ ಮತ್ತಷ್ಟು ಜಟಿಲವಾದರೆ ಅಚ್ಚರಿಪಡಬೇಕಿಲ್ಲ.

‘ಕೊರೊನಾ ಕಾಲದಲ್ಲಿ ಆಟಗಾರರು ತಮ್ಮ ಮ್ಯಾಚ್‌ ಫಿಟ್‌ನೆಸ್‌ ಜೊತೆಗೆ ಸಾಮಾನ್ಯ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅಗತ್ಯ. ಒಂದೊಮ್ಮೆ ಯಾವುದೋ ಆಟಗಾರ ಪಂದ್ಯದ ಮಧ್ಯದಲ್ಲಿಯೇ ಅನಾರೋಗ್ಯಕ್ಕೆ ತುತ್ತಾದರೆ ಅಥವಾ ಗಾಯಗೊಂಡರೆ ತಂಡಕ್ಕೆ ಆಗುವ ನಷ್ಟ ದೊಡ್ಡದು. ಕೊರೊನಾಗಿಂತ ಮೊದಲಾಗಿದ್ದರೆ ಈ ಸಮಸ್ಯೆ ಅಷ್ಟು ಗಂಭೀರವಾಗಿರಲಿಲ್ಲ. ಆದರೆ ಕ್ವಾರಂಟೈನ್, ಐಸೋಲೇಷನ್ ಇತ್ಯಾದಿ ಮಾರ್ಗಸೂಚಿಗಳು ಇರುವ ಸೂಕ್ಷ್ಮ ಕಾಲ ಇದು. ಗಾಯಾಳು ಸಬ್‌ಸ್ಟಿಟ್ಯೂಟ್‌ ನಿಯಮದ ಪರಿಷ್ಕರಣೆ ಬಗ್ಗೆ ಗಮನ ಹರಿಸಲು ಸೂಕ್ತ ಸಮಯ ಇದಾಗಿದೆ. ನಿಯಮ ಬದಲಾದರೆ ತಂಡವನ್ನು ಆಯ್ಕೆ ಮಾಡುವಾಗಲೇ ಬದಲೀ ಆಟಗಾರರನ್ನು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಮಾಡಬಹುದು‘ ಎಂದು ಆರ್ಥರ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೂ ಗಾಯದ ಬಿಸಿ ತಟ್ಟಿದೆ. ಡೇವಿಡ್ ವಾರ್ನರ್ ಮುಂದಿನ ಪಂದ್ಯಕ್ಕೂ ಲಭ್ಯರಾಗುವುದು ಅನುಮಾನ. ಈ ನಡುವೆಯೇ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಗಾಯಗೊಂಡು ಹೊರಬಿದ್ದಿದ್ದಾರೆ.

’ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕ್ರಿಕೆಟಿಗರು ಪಂದ್ಯಗಳಲ್ಲಿ ಆಡಿರಲಿಲ್ಲ. ಮನೆಯಲ್ಲಿಯೇ ದೇಹದ ನಿರ್ವಹಣೆಗೆ ಅಗತ್ಯವಿದ್ದಷ್ಟೇ ಫಿಟ್‌ನೆಸ್ ಮಾಡಿಕೊಂಡಿದ್ದರು. ಮೈದಾನದಲ್ಲಿ ಪಂದ್ಯಕ್ಕಾಗಿ ಸಿದ್ಧವಾಗುವುದಕ್ಕೂ ಮನೆಯಲ್ಲಿಯೇ ಇದ್ದು ಫಿಟ್‌ನೆಸ್‌ ನಿರ್ವಹಿಸುವುದಕ್ಕೂ ವ್ಯತ್ಯಾಸ ಇದೆ. ಮಾನಸಿಕ ದೃಢತೆಯೂ ಮುಖ್ಯವಾಗುತ್ತದೆ. ಕೆಲವೇ ಕೆಲವರು ಇಂತಹ ಮನೋದೈಹಿಕ ದಾರ್ಢ್ಯತೆಯನ್ನು ಗಳಿಸಿಕೊಂಡಿರುತ್ತಾರೆ‘ ಎಂದು ಫಿಟ್‌ನೆಸ್ ಕೋಚ್ ಪಿನಾಕಿನ್ ಹೇಳುತ್ತಾರೆ.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ವೆಸ್ಟ್ ಇಂಡೀಸ್‌ನ ಪಿಚ್‌ಗಳಲ್ಲಿ ಆಡಲು ಗಟ್ಟಿಯಾಗಿರುವುದು ಮುಖ್ಯ. ಅದರಲ್ಲೂ ಮಧ್ಯಮ ವೇಗದ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿರುತ್ತದೆ. ಗಾಳಿಯಲ್ಲಿಯೇ ಚೆಂಡು ತಿರುಗಿಸುವ ಬೂಮ್ರಾ ಅಂತಹವರೂ ಬಹಳಷ್ಟು ಉನ್ನತ ದರ್ಜೆಯ ಫಿಟ್‌ನೆಸ್‌ ಹೊಂದಿರಲೇಬೇಕು.

ಸುದೀರ್ಘ ಬಿಡುವಿನ ನಂತರ ಇಂಡಿಯನ್ ಪ್ರೀಮಿಯರ್ ಲೀಗ್, ಆಸ್ಟ್ರೇಲಿಯಾ ಎದುರಿನ ಟಿ20, ಏಕದಿನ ಮತ್ತು ಟೆಸ್ಟ್‌ನ ಮೊದಲ ಪಂದ್ಯದಲ್ಲಿ ಆಡಿದರೂ ಯಾವುದೇ ಗಾಯಕ್ಕೆ ತುತ್ತಾಗದ ವಿರಾಟ್ ಕೊಹ್ಲಿ ಇದಕ್ಕೆ ಉತ್ತಮ ಉದಾಹರಣೆ. ಈ ಹಿಂದೆ ಮಹೇಂದ್ರಸಿಂಗ್ ಧೋನಿ ಕೂಡ ಇಂತಹದ್ದೇ ದೇಹದಾರ್ಢ್ಯತೆಯನ್ನು ಪ್ರದರ್ಶಿಸಿದ್ದಾರೆ. ಶಿಸ್ತುಬದ್ಧ ಮತ್ತು ವೈಜ್ಞಾನಿಕವಾದ ಫಿಟ್‌ನೆಸ್‌ ನಿರ್ವಹಣೆಗೆ ಮಹತ್ವ ನೀಡಿದ್ದು ಅವರ ಯಶಸ್ಸಿನ ಗುಟ್ಟು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.