ADVERTISEMENT

ವಿರಾಟ್ ಕೊಹ್ಲಿ - ದಿನೇಶ್ ಕಾರ್ತಿಕ್ ಪ್ರತಿಷ್ಠೆಯ ಪಣ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಕೋಲ್ಕತ್ತ ನೈಟ್ ರೈಡರ್ಸ್‌ ಹಣಾಹಣಿ ಇಂದು

ಪಿಟಿಐ
Published 11 ಅಕ್ಟೋಬರ್ 2020, 19:36 IST
Last Updated 11 ಅಕ್ಟೋಬರ್ 2020, 19:36 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   
""
""

ಶಾರ್ಜಾ: ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರಿಬ್ಬರೂ ಶನಿವಾರ ತಂತಮ್ಮ ತಂಡಗಳ ಗೆಲುವಿನ ರೂವಾರಿಗಳಾಗಿ, ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು.

ಸೋಮವಾರ ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಇಬ್ಬರೂ ಮುಖಾಮುಖಿಯಾಗಲಿದ್ದಾರೆ. ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಿಸಲು ವಿರಾಟ್ (ಅಜೇಯ 90) ಕಾರಣರಾಗಿದ್ದರು. ಅದೇ ದಿನ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಕೋಲ್ಕತ್ತದ ಗೆಲುವಿಗೆ ದಿನೇಶ್ (58) ಅರ್ಧಶತಕದ ಬಲ ತುಂಬಿದ್ದರು.

ಇದುವರೆಗೆ ನಡೆದಿರುವ ಟೂರ್ನಿಯಲ್ಲಿ ಉಭಯ ತಂಡಗಳು ಆರು ಪಂದ್ಯಗಳನ್ನು ಆಡಿವೆ. ಎರಡೂ ತಂಡಗಳು ತಲಾ ನಾಲ್ಕರಲ್ಲಿ ಜಯಿಸಿವೆ. ಎರಡರಲ್ಲಿ ನಿರಾಸೆ ಅನುಭವಿಸಿವೆ. ಆದರೆ ಒಟ್ಟು ರನ್‌ರೇಟ್‌ನಲ್ಲಿ ಕೋಲ್ಕತ್ತ ತುಸು ಮುಂದಿದೆ. ಅದೇ ಮುನ್ನಡೆಯನ್ನು ತಂಡವು ಉಳಿಸಿಕೊಳ್ಳುವ ಛಲದಲ್ಲಿದೆ. ಆದರೆ ಅದು ಸುಲಭವಲ್ಲ.

ADVERTISEMENT
ದಿನೇಶ್ ಕಾರ್ತಿಕ್–ಪ್ರಸಿದ್ಧ ಕೃಷ್ಣ

ಆದರೆ, ಆ್ಯಂಡ್ರೆ ರಸೆಲ್ ಗಾಯ ಮತ್ತು ಸ್ಪಿನ್ನರ್ ಸುನೀಲ್ ನಾರಾಯಣ್ ಅವರು ನಿಯಮಬಾಹಿರ ಬೌಲಿಂಗ್ ಶೈಲಿಯ ಆರೋಪಕ್ಕೊಳಗಾಗಿರುವುದು ಕೋಲ್ಕತ್ತ ತಂಡಕ್ಕೆ ಸ್ವಲ್ಪ ಹಿನ್ನಡೆಯಾಗಿ ಪರಿಣಮಿಸಬಹುದು. ಕಿಂಗ್ಸ್ ಎದುರಿನ ಪಂದ್ಯದಲ್ಲಿ ಸುನೀಲ್ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ ಅದೇ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಮಿಂಚಿದ್ದು ತಂಡಕ್ಕೆ ಪ್ಲಸ್ ಪಾಯಿಂಟ್.

ಆದರೆ ಆರ್‌ಸಿಬಿಯಲ್ಲಿರುವ ತಮ್ಮ ‘ಗೆಳೆಯ’ ದೇವದತ್ತ ಪಡಿಕ್ಕಲ್, ಆ್ಯರನ್ ಫಿಂಚ್, ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ವಿರುದ್ಧ ಬೌಲಿಂಗ್ ಮಾಡುವ ಸವಾಲು ಪ್ರಸಿದ್ಧಗೆ ಇದೆ. ದೇವದತ್ತ ಈಗಾಗಲೇ ಮೂರು ಅರ್ಧಶತಕ ಬಾರಿಸಿ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತ್ತದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ ಅವರಿಗೂ ಆರ್‌ಸಿಬಿ ಬ್ಯಾಟಿಂಗ್ ಕಟ್ಟಿಹಾಕುವ ಸವಾಲು ಇದೆ.

ಕೆಕೆಆರ್‌ ಬ್ಯಾಟಿಂಗ್‌ ವಿಭಾಗ ಚೆನ್ನಾಗಿದೆ. ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ದಿನೇಶ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಆರ್‌ಸಿಬಿ ಬೌಲರ್‌ಗಳಾದ ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್ ಮತ್ತು ಇಸುರು ಉಡಾನ ಅವರನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.