ADVERTISEMENT

‘ಕಟ್ಟಲು ವರುಷ ಬೇಕು; ಕೆಡವಲು ನಿಮಿಷ ಸಾಕು’: ಗಂಭೀರ್ ಹೀಗೆ ಟ್ವೀಟ್ ಮಾಡಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 11:27 IST
Last Updated 16 ಅಕ್ಟೋಬರ್ 2020, 11:27 IST
ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್
ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್   

ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್‌) ತಂಡದ ನಾಯಕತ್ವ ಬದಲಾವಣೆ ಸುದ್ದಿ ಹೊರ ಬೀಳುತ್ತಿದ್ದಂತೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಅವರು, ‘ಪರಂಪರೆಯನ್ನು ಕಟ್ಟಲು ವರಷಗಳೇ ಬೇಕು. ಅದರೆ, ಅದನ್ನು ನಾಶಮಾಡಲು ನಿಮಿಷ ಸಾಕು’ ಎಂದು ಟ್ವೀಟ್ ಮಾಡಿದ್ದಾರೆ.

2018ರಿಂದ ಇಲ್ಲಿವರೆಗೆ ಕೆಕೆಆರ್‌ ತಂಡವನ್ನು ಮುನ್ನಡೆಸಿದ್ದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ ಇಂದು ತಂಡದ ನಾಯಕತ್ವ ತ್ಯಜಿಸಿದ್ದಾರೆ. ಇನ್ನು ಮುಂದೆ ಎಯಾನ್‌ ಮಾರ್ಗನ್‌ ತಂಡ ಮುನ್ನಡೆಸಲಿದ್ದಾರೆ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಅವರು ಖಚಿತಪಡಿಸಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಗಂಭೀರ್‌ ಟ್ವೀಟ್ ಮಾಡಿದ್ದಾರೆ.

ಗಂಭೀರ್‌ ತಮ್ಮ ಟ್ವೀಟ್‌ನಲ್ಲಿ ಯಾರೊಬ್ಬರ ಹೆಸರನ್ನು ಉಲ್ಲೇಖಿಸಿಲ್ಲವಾದರೂ, ಇದು ಕೆಕೆಆರ್ ತಂಡದಲ್ಲಾದ ನಾಯಕತ್ವ ಬದಲಾವಣೆ ಬೆಳವಣಿಗೆಗೆ ಪ್ರತಿಕ್ರಿಯೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ADVERTISEMENT

ಐಪಿಎಲ್‌ನಲ್ಲಿ ಕೆಕೆಆರ್‌ ತಂಡವನ್ನು ಮುನ್ನಡೆಸುತ್ತಿದ್ದ ಗಂಭೀರ್‌ 2012 ಮತ್ತು 14ರಲ್ಲಿ ಚಾಂಪಿಯನ್‌ ಆಗಿಸಿದ್ದರು.

ಕೆಕೆಆರ್‌ ತಂಡವು 2018ರಿಂದ ಇಲ್ಲಿಯವರೆಗೆ ಕಾರ್ತಿಕ್‌ ನಾಯಕತ್ವದಲ್ಲಿ 37 ಪಂದ್ಯಗಳಲ್ಲಿ ಆಡಿದ್ದು, 19 ಗೆಲುವು ಮತ್ತು 17 ಸೋಲುಗಳನ್ನು ಕಂಡಿದೆ. 2018ರಲ್ಲಿ ಮೂರನೇ ಸ್ಥಾನ ಮತ್ತು ಕಳೆದ ವರ್ಷ 5ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿತ್ತು.

ಈ ಬಾರಿಯಐಪಿಎಲ್‌ನಲ್ಲಿ ಕಾರ್ತಿಕ್‌‌ ನಾಯಕತ್ವದಲ್ಲಿ 7 ಪಂದ್ಯಗಳನ್ನು ಆಡಿರುವ ಕೆಕೆಆರ್‌‌ ನಾಲ್ಕು ಜಯ ಮತ್ತು ಮೂರು ಸೋಲುಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವೈಯಕ್ತಿಕವಾಗಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕಾರ್ತಿಕ್‌ 7 ಇನಿಂಗ್ಸ್‌ಗಳಿಂದ ಕೇವಲ 108 ರನ್‌ ಗಳಿಸಿದ್ದಾರೆ.

ಕೆಕೆಆರ್ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.