ADVERTISEMENT

ಕನ್ನಡದಲ್ಲಿ ಟ್ವೀಟ್ ಮಾಡಿ ಮನಗೆದ್ದ ಚಾಹಲ್: ಈ ಸಲ ಕಪ್ ನಮ್ದೆ ಎಂದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 14:21 IST
Last Updated 9 ಮಾರ್ಚ್ 2020, 14:21 IST
   
""

ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ,ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬರೋಬ್ಬರಿ 12 ಆವೃತ್ತಿಗಳು ಕಳೆದಿವೆಯಾದರೂ,ಈ ತಂಡಕ್ಕೆ ಒಮ್ಮೆಯೂ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಆದರೂ, ಅಭಿಮಾನಿಗಳಿಗೆ ಆರ್‌ಸಿಬಿಮೇಲಿನ ಅಭಿಮಾನ ಚೂರೂ ಕಡಿಮೆಯಾಗಿಲ್ಲ.

ಪ್ರತಿಬಾರಿ ಟೂರ್ನಿ ಆರಂಭವಾಗುವ ಮೊದಲು ‘ಈ ಸಲ ಕಪ್‌ ನಮ್ದೆ’ ಎನ್ನುವುದು ಮತ್ತು ಕಪ್‌ ಗೆಲ್ಲಲು ಸಾಧ್ಯವಾಗದಿದ್ದರೆ, ‘ಮುಂದಿನ್‌ ಸಲ ಕಪ್‌ ನಮ್ದೆ’ ಎನ್ನುವುದು ಅಭಿಮಾನಿಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಆರ್‌ಸಿಬಿಈ ಬಾರಿ ಶತಾಯಗತಾಯ ಕಪ್‌ ಗೆಲ್ಲಲು ನಿರ್ಧರಿಸಿದೆ. ಅದಕ್ಕಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಕೆಲ ಪ್ರಮುಖ ಆಟಗಾರರು ತಂಡ ಕೂಡಿಕೊಂಡಿದ್ದಾರೆ. ‘ಲೋಗೊ’ವನ್ನೂ ಮಾರ್ಪಡಿಸಿಕೊಂಡಿದೆ.

ಈ ಬಾರಿಯ ಟೂರ್ನಿ ಇದೇ ತಿಂಗಳ 29ರಿಂದ ಆರಂಭವಾಗಲಿದೆ. ಆರ್‌ಸಿಬಿ ಆಟಗಾರರು ತಮ್ಮಎಂದಿನ ‘ಪ್ಲೇ ಬೋಲ್ಡ್‌’ ಘೋಷಣೆಯೊಂದಿಗೆ ಹುರುಪಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದೇ ವೇಳೆತಂಡದ ಪ್ರಮುಖ ಬೌಲರ್‌ ಆಗಿರುವ ಯಜುವೇಂದ್ರ ಚಾಹಲ್‌, ಕನ್ನಡದಲ್ಲಿ ಟ್ವೀಟ್‌ ಮಾಡಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ. ಹರಿಯಾಣದವರಾದ ಚಾಹಲ್, ‘ನಮ್ಮ ಬೆಂಗಳೂರು ಕುಟುಂಬ, ರೆಡೀ ನಾ?’ ಎಂದು ಬರೆದುಕೊಳ್ಳುವ ಮೂಲಕ, ಕಪ್‌ ಗೆಲ್ಲುವ ಕಾತರವನ್ನು ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಟ್ವೀಟ್‌ಗೆ ಸುಮಾರು 1.6 ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 44 ಸಾವಿರ ಮಂದಿ ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಹಲವರು ‘ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಕ್ಕೆ ಧನ್ಯವಾದಗಳು’, ‘ಈ ಸಲ ಕಪ್‌ ನಮ್ದೆ’ ಎಂದಿದ್ದಾರೆ. ಇನ್ನೂ ಕೆಲವರು ದರ್ಶನ್‌ ಅಭಿನಯದ ‘ರಾಬರ್ಟ್‌’ ಸಿನಿಮಾ ಟೀಸರನ್‌ನಲ್ಲಿ ಕೇಳಿಬರುವ ‘ಬಾಬಾಬಾ ನಾ ರೆಡಿ’ ಸ್ಟೈಲ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಹೆಸರಲ್ಲು ನೀವೆ,ಉಸಿರಲ್ಲು ನೀವೆ ಎಂದ ಆರ್‌ಸಿಬಿ
ಚಾಹಲ್‌ ಮಾತ್ರವಲ್ಲ, ಆರ್‌ಸಿಬಿಯೂ ಹೊಸ ‘ಲೋಗೊ’ ಅನಾವರಣದ ಸಂದರ್ಭದಲ್ಲಿ ಕನ್ನಡಲ್ಲಿ ಕವಿತೆ ಪ್ರಕಟಿಸಿತ್ತು. ತಂಡಕ್ಕೆ ಕನ್ನಡಿಗರೇ ನಿಜವಾದ ಸ್ಫೂರ್ತಿ ಎಂಬುದನ್ನು ಸಾರಿದ್ದ ಪ್ರಾಂಚೈಸ್‌, ಈ ಸ್ಫೂರ್ತಿ ಹೀಗೆಯೇ ಇರಲಿ ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ ಕವಿತೆಯ ರೂಪದಲ್ಲಿ ಮನವಿ ಮಾಡಿತ್ತು.

ಹೆಸರಲ್ಲು ನೀವೆ
ಉಸಿರಲ್ಲು ನೀವೆ
ಎಲ್ಲೆಲ್ಲು ನೀವೆ ಸ್ಫೂರ್ತಿ

ಸೋಲಿನಲ್ಲು ನೀವೆ
ಗೆಲುವಲ್ಲು ನೀವೆ
ಎಂದೆಂದುನೀವೆ ಸಾತಿ

ನಮ್ಮ ನೆನ್ನೆಗಳು ನೀವೆ
ನಾಳೆಗಳುನೀವೆ
ಎಲ್ಲವೂ ನಿಮ್ಮ ಪ್ರೀತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.