ADVERTISEMENT

IPL 2021: ಆರ್‌ಸಿಬಿ ಆರಂಭಿಕನಾಗಲು ಕಾರಣವನ್ನು ಬಹಿರಂಗಪಡಿಸಿದ ಕೊಹ್ಲಿ

ಏಜೆನ್ಸೀಸ್
Published 9 ಏಪ್ರಿಲ್ 2021, 10:12 IST
Last Updated 9 ಏಪ್ರಿಲ್ 2021, 10:12 IST
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ ತಂಡಕ್ಕೆ ಹೆಚ್ಚಿನ ಸಮತೋಲನ ಸಿಗಲಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯ ಕೊನೆಯ ಪಂದ್ಯದ ಬಳಿಕ ಈ ಬಗ್ಗೆ ನಾಯಕ ಕೊಹ್ಲಿ ಗುಟ್ಟು ರಟ್ಟು ಮಾಡಿದ್ದರು. 2021ನೇ ಸಾಲಿನಲ್ಲಿ ಆರ್‌ಸಿಬಿ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದರು. ಇಂಗ್ಲೆಂಡ್ ವಿರುದ್ಧ ಅಂತಿಮ ಟಿ20ನಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, 'ನಾನು ಕಳೆದ ವರ್ಷ ಮೈಕ್ ಹೆಸ್ಸನ್ ಹಾಗೂ ಕೋಚ್ ಸೈಮನ್ ಕ್ಯಾಟಿಚ್ ಅವರೊಂದಿಗೆ ಐಪಿಎಲ್ 2021ನೇ ಸಾಲಿನಲ್ಲಿ ಇನ್ನಿಂಗ್ಸ್ ಆರಂಭಿಸುವ ಬಗ್ಗೆ ಸೂಚನೆ ನೀಡಿದ್ದೆ. ಅದೃಷ್ಟವಶಾತ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇದಕ್ಕೆ ಪೂರಕವಾದ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಯಿತು. ಉತ್ತಮ ಮೊತ್ತ ಗಳಿಸುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದೆ. ಈಗ ಮತ್ತದೇ ಜವಾಬ್ದಾರಿ ಮುಂದುವರಿಸುವ ನಂಬಿಕೆಯಿದೆ' ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆಡುವುದಕ್ಕಿಂತಲೂ ಮುನ್ನ ಈ ಅನುಭವವು ಅತ್ಯಂತ ಮುಖ್ಯವೆನಿಸಿತ್ತು. ಈಗ ತಂಡಕ್ಕೆ ಹೆಚ್ಚಿನ ಸಮತೋಲನವನ್ನು ನೀಡಲಿದೆ. ಅಗ್ರ ಕ್ರಮಾಂಕದಲ್ಲಿ ನನ್ನ ಬ್ಯಾಟಿಂಗ್ ಹಾಗೂ ಇತರೆ ಅಂಶಗಳ ಬಗ್ಗೆ ಗಮನ ಹರಿಸಬಹುದಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 9 ಶುಕ್ರವಾರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.