ADVERTISEMENT

IPL 2021: 6,6,6+Nb,6,2,6,4: ಒಂದೇ ಓವರ್‌ನಲ್ಲಿ 37 ರನ್ ಚಚ್ಚಿದ ಜಡ್ಡು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 16:22 IST
Last Updated 25 ಏಪ್ರಿಲ್ 2021, 16:22 IST
   

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್ ಚಚ್ಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ಇದರಲ್ಲಿ ಸತತ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಜಡೇಜ ಈ ದಾಖಲೆ ಬರೆದರು.

ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಜಡೇಜ 37 ರನ್ (ನೋ ಬಾಲ್ ಸೇರಿದಂತೆ) ಚಚ್ಚಿದ್ದಾರೆ. ಚೆನ್ನೈ ಓಟಕ್ಕೆ ಕಡಿವಾಣ ಹಾಕಿದ್ದ ಹರ್ಷಲ್, ಸೆಟ್‌ ಬ್ಯಾಟ್ಸ್‌ಮನ್‌ಗಳಾದ ಫಡ್ ಡು ಪ್ಲೆಸಿಸ್ (50), ಸುರೇಶ್ ರೈನಾ (24) ಹಾಗೂ ಅಂಬಟಿ ರಾಯುಡು (14) ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಾರಕ ದಾಳಿ ಸಂಘಟಿಸಿದ್ದರು.

ADVERTISEMENT

ಐಪಿಎಲ್ 14ನೇ ಆವೃತ್ತಿಯಲ್ಲಿ ಇದುವರೆಗೆ ಆಡಿರುವ ಪಂದ್ಯಗಳಲ್ಲಿ ವಿಕೆಟ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿರುವ ಹರ್ಷಲ್ ಪಟೇಲ್, ಪರ್ಪಲ್ ಕ್ಯಾಪ್‌ಗೆ ಒಡೆಯರಾಗಿದ್ದಾರೆ. ಆದರೆ ಅಂತಿಮ ಓವರ್‌ನಲ್ಲಿ ಹರ್ಷಲ್ ಯೋಜನೆಗಳೆಲ್ಲ ತಲೆಕೆಳಗಾದವು.

ಹರ್ಷಲ್ ಬೆನ್ನತ್ತಿದ ಜಡೇಜ ಮೊದಲ ನಾಲ್ಕು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ಈ ಪೈಕಿ ಮೂರನೇ ಎಸೆತವು ನೋ ಬಾಲ್ ಆಗಿತ್ತು. ಬಳಿಕ ನಾಲ್ಕನೇ ಎಸೆತದಲ್ಲಿ ಎರಡು ರನ್ ಮತ್ತು ಐದನೇ ಎಸೆತದಲ್ಲಿ ಮಗದೊಂದು ಸಿಕ್ಸರ್ ಬಾರಿಸಿದರು. ಅಂತಿಮ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಒಟ್ಟು 37 ರನ್ ಸೊರೆಗೈದರು.

ಈ ನಡುವೆ 25 ಎಸೆತಗಳಲ್ಲಿ ಅರ್ಧಶತಕ ಗಡಿಯನ್ನು ದಾಟಿದ ಜಡೇಜ ಅಂತಿಮವಾಗಿ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 68 ರನ್ ಗಳಿಸಿ ಅಜೇಯರಾಗುಳಿದರು. ಅತ್ತ ಹರ್ಷಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಮೂರು ವಿಕೆಟ್ ಪಡೆದರೂ 51 ರನ್ ಬಿಟ್ಟು ಕೊಟ್ಟು ದುಬಾರಿಯೆನಿಸಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಓವರ್‌ವೊಂದರಲ್ಲಿ ಅತಿ ಹೆಚ್ಚು ಗಳಿಸಿರುವ ಕ್ರಿಸ್ ಗೇಲ್ ದಾಖಲೆಯನ್ನು ರವೀಂದ್ರ ಜಡೇಜಾ ಸರಿಗಟ್ಟಿದ್ದಾರೆ. 2011ರಲ್ಲಿ ಕ್ರಿಸ್ ಗೇಲ್, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ದ ಪಂದ್ಯದಲ್ಲಿ ಓವರ್‌ವೊಂದರಲ್ಲಿ 36ರನ್ ಗಳಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.