ADVERTISEMENT

IPL 2021: ಹೈದರಾಬಾದ್ ವಿರುದ್ಧ ಪಂಜಾಬ್‌ಗೆ 5 ರನ್‌ಗಳ ರೋಚಕ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2021, 18:09 IST
Last Updated 25 ಸೆಪ್ಟೆಂಬರ್ 2021, 18:09 IST
ಪಂಜಾಬ್ ಆಟಗಾರರ ಸಂಭ್ರಮ
ಪಂಜಾಬ್ ಆಟಗಾರರ ಸಂಭ್ರಮ   

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಜೇಸನ್ ಹೋಲ್ಡರ್ (3 ವಿಕೆಟ್ ಹಾಗೂ ಅಜೇಯ 47 ರನ್) ಹೋರಾಟ ವ್ಯರ್ಥವೆನಿಸಿದೆ. ಕೊನೆಯ ಎಸೆತದಲ್ಲಿ ಹೋಲ್ಡರ್ ಸಿಕ್ಸರ್ ಬಾರಿಸಲು ವಿಫಲವಾಗುವುದರೊಂದಿಗೆ ಪಂಜಾಬ್ ಗೆಲುವಿನ ನಗೆ ಬೀರಿತು.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಏಳು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಬಳಿಕ ಮೊಹಮ್ಮದ್ ಶಮಿ (14ಕ್ಕೆ 2) ಹಾಗೂ ರವಿ ಬಿಷ್ಣೋಯಿ (24ಕ್ಕೆ 3) ಅಮೋಘ ದಾಳಿಯ ನೆರವಿನಿಂದ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಹೈದರಾಬಾದ್ ತಂಡವು ಏಳು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತ್ತು.

ADVERTISEMENT

ಈ ಗೆಲುವಿನೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಎಂಟು ಅಂಕಗಳನ್ನು ಸಂಪಾದಿಸಿರುವ ಪಂಜಾಬ್ ಕಿಂಗ್ಸ್, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಅತ್ತಹೈದರಾಬಾದ್, ಕೊನೆಯ ಸ್ಥಾನದಲ್ಲಿದೆ.

ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಡೇವಿಡ್ ವಾರ್ನರ್ (2) ಹಾಗೂ ಕೇನ್ ವಿಲಿಯಮ್ಸನ್ (1) ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಶಮಿ ಡಬಲ್ ಆಘಾತವನ್ನು ನೀಡಿದರು. ಅಲ್ಲದೆ ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 20 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.

ಈ ಹಂತದಲ್ಲಿ ದಾಳಿಗಿಳಿದ ರವಿ ಬಿಷ್ಣೋಯಿ ಮೋಡಿ ಮಾಡಿದರು. ಕನ್ನಡಿಗ ಮನೀಶ್ ಪಾಂಡೆ (13), ಕೇದಾರ್ ಜಾಧವ್ (12) ಹಾಗೂ ಅಬ್ದುಲ್ ಸಮದ್ (1) ವಿಕೆಟ್‌ಗಳನ್ನು ಕಬಳಿಸಿದರು. ಪರಿಣಾಮ 13 ಓವರ್‌ ವೇಳೆಗೆ 60 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಕ್ರೀಸಿಗಿಳಿದ ಜೇಸನ್ ಹೋಲ್ಡರ್, ಮೂರು ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದರು. ಈ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಉತ್ತಮವಾಗಿ ಆಡುತ್ತಿದ್ದ ಆರಂಭಿಕ ವೃದ್ಧಿಮಾನ್ ಸಹಾ (31) ರನೌಟ್‌ಗೆ ಬಲಿಯಾದರು.

ಆದರೂ ಕೊನೆಯ ಎಸೆತದ ವರೆಗೂ ದಿಟ್ಟ ಹೋರಾಟ ನೀಡಿದ ಹೋಲ್ಡರ್, ಪಂದ್ಯ ಗೆಲ್ಲಿಸಲು ಸರ್ವಪ್ರಯತ್ನವನ್ನು ಮಾಡಿದರು. ಅಂತಿಮ ಓವರ್‌ನಲ್ಲಿ ಗೆಲ್ಲಲು 17 ರನ್‌ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಎಸೆತದಲ್ಲಿ ಸಿಕ್ಸರ್ ಎತ್ತಲು ವಿಫಲರಾಗುವುದರೊಂದಿಗೆ ಸೋಲಿಗೆ ಶರಣಾಗಬೇಕಾಯಿತು.

29 ಎಸೆತಗಳನ್ನು ಎದುರಿಸಿದ ಹೋಲ್ಡರ್ ಐದು ಸಿಕ್ಸರ್‌ಗಳ ನೆರವಿನಿಂದ 47 ರನ್ ಗಳಿಸಿ ಅಜೇಯರಾಗುಳಿದರು.

ಈ ಮೊದಲು ಜೇಸನ್ ಹೋಲ್ಡರ್ (19ಕ್ಕೆ 3 ವಿಕೆಟ್) ಸೇರಿದಂತೆ ಹೈದರಾಬಾದ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ಪಂಜಾಬ್ ಕಿಂಗ್ಸ್, ಏಳು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕಳೆದ ಪಂದ್ಯದಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದ್ದ ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ (21) ಹಾಗೂ ಮಯಂಕ್ ಅಗರವಾಲ್ (5) ವೈಫಲ್ಯವನ್ನು ಅನುಭವಿಸಿದರು. ಈ ಎರಡು ವಿಕೆಟ್‌ಗಳುಹೋಲ್ಡರ್ ಪಾಲಾಯಿತು.

ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಟಿ20 ಸ್ಪೆಷಲಿಸ್ಟ್ ಕ್ರಿಸ್ ಗೇಲ್ (14) ಅವರಿಗೂ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ಗೇಲ್ ಅವರನ್ನು ನಿಕೋಲಸ್ ಪೂರನ್ (8) ಹಿಂಬಾಲಿಸಿದರು.

ಉತ್ತಮವಾಗಿ ಆಡುತ್ತಿದ್ದ ಏಡೆನ್ ಮಾರ್ಕ್ರಮ್ (27) ಸಹ ಪೆವಿಲಿಯನ್ ಹಾದಿ ಹಿಡಿಯುವುದರೊಂದಿಗೆ 88 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕೊನೆಯ ಹಂತದಲ್ಲಿ ಹರ್ಪಿತ್ ಬ್ರಾರ್ (18*), ದೀಪಕ್ ಹೂಡಾ (13), ನಥನ್ ಎಲ್ಲಿಸ್ (12*) ತಂಡವನ್ನು 120 ಗಡಿ ದಾಟಿಸುವಲ್ಲಿ ನೆರವಾದರು.
ಈ ನಡುವೆ ಹೈದರಾಬಾದ್ ತಂಡದ ಬದಲಿ ಆಟಗಾರ ಕರ್ನಾಟಕದ ಜಗದೀಶ್ ಸುಚಿತ್ ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.