ADVERTISEMENT

IPL 2021; ಪಡಿಕ್ಕಲ್ ಪ್ರತಿಭೆ ಮೆಚ್ಚಿದ ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2021, 3:12 IST
Last Updated 3 ಏಪ್ರಿಲ್ 2021, 3:12 IST
ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್    

ಚೆನ್ನೈ: ಕರ್ನಾಟಕದ ಉದಯೋನ್ಮುಖ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರ ಪ್ರತಿಭೆಯನ್ನು ಮೆಚ್ಚಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮುಖ್ಯ ತರಬೇತುದಾರ ಸೈಮನ್ ಕ್ಯಾಟಿಚ್, ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಟಿಚ್, ಪಡಿಕ್ಕಲ್ 'ಅದ್ಭುತ' ಎಂದು ಹೇಳಿದ್ದಾರೆ. ಭಾರತದ ಯುವ ಪ್ರತಿಭೆಗಳನ್ನು ನಾವು ಬೆಂಬಲಿಸಿದೆವು. ಯುವ ಆಟಗಾರ ಪಡಿಕ್ಕಲ್ ಅವರಿಗೆ ಅಗ್ರ ಕ್ರಮಾಂಕದಲ್ಲಿ ಸಾಥ್ ನೀಡಿದೆವು. ಅವರು ಯಾವತ್ತೂ ಐಪಿಎಲ್ ಆಡಿರಲಿಲ್ಲ. ಆದರೆ ನಮ್ಮನ್ನು ನಿರಾಸೆಗೊಳಿಸಲಿಲ್ಲ. ಅವರು ಅದ್ಭುತ ಎಂದು ಹೇಳಿದ್ದಾರೆ.

2020ರ ಐಪಿಎಲ್ ಟೂರ್ನಿಯಲ್ಲಿ ಯುವ ಆಟಗಾರ ದೇವದತ್ ಪಡಿಕ್ಕಲ್ ಪ್ರಭಾವಿ ಎನಿಸಿಕೊಂಡಿದ್ದರು. ತಾವಾಡಿದ ಮೊದಲ ಋತುವಿನಲ್ಲೇ ಒಟ್ಟು 473 ರನ್ ಕಲೆ ಹಾಕಿದ್ದರು.

ADVERTISEMENT

ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ಆರ್‌ಸಿಬಿಗೆ ಸ್ಪಷ್ಟ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಕ್ಯಾಟಿಚ್ ಅಭಿಪ್ರಾಯಪಟ್ಟಿದ್ದಾರೆ. 2020ನೇ ಆವೃತ್ತಿಯ ಅಂತ್ಯದಲ್ಲೇ 2021 ಟೂರ್ನಿಗಾಗಿ ಸಿದ್ಧತೆಯನ್ನು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ.

ಭಾರತದ ಯುವ ಪ್ರತಿಭೆಗಳನ್ನು ಗುರುತಿಸುವುದಕ್ಕಾಗಿ ಸೈಯದ್ ಮುಷ್ತಾಕ್ ಅಲಿ ಮತ್ತು ಇತರೆ ದೇಶೀಯ ಟೂರ್ನಿಗಳ ಮೇಲೂ ಗಮನ ಹರಿಸಲಾಗಿತ್ತು ಎಂದವರು ವಿವರಿಸಿದರು.

ಕೇರಳ ಮೂಲದ ಮೊಹಮ್ಮದ್ ಅಜರುದ್ದೀನ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದರು. 2021ರಲ್ಲಿ ನಡೆದ ಹರಾಜಿನಲ್ಲಿ ಈ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅವರನ್ನು ಆರ್‌ಸಿಬಿ ತಂಡವು ಖರೀದಿಸಿತ್ತು.

ಕಳೆದ ಸೀಸನ್ ಮುಗಿದ ಬಳಿಕ ಸಾಕಷ್ಟು ವಿಮರ್ಶೆ ಮಾಡಿದ್ದೇವೆ. ಯಾಕೆಂದರೆ ಟೂರ್ನಿಯುದ್ಧಕ್ಕೂ ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಮೇಲೆ ಗಮನ ಹರಿಸಲಾಗಿತ್ತು ಎಂದು ಕ್ಯಾಟಿಚ್ ಹೇಳಿದ್ದಾರೆ.

ಇದನ್ನೂ ಓದಿ:

ಕಳೆದ ಟೂರ್ನಿ ಅಂತ್ಯದ ಬಳಿಕ ಸಾಕಷ್ಟು ಸಮಯ ತೆಗೆದುಕೊಂಡು ನೂತನ ಪ್ರತಿಭೆಯ ಹುಡುಕಾಟದ ಮೂಲಕ ಎಲ್ಲ ವಿಭಾಗದಲ್ಲೂ ತಂಡವನ್ನು ಬಲಿಷ್ಠಗೊಳಿಸಲು ಯೋಜನೆಯನ್ನು ರೂಪಿಸಿದ್ದೇವೆ. ಹಾಗಾಗಿ ಸಾಕಷ್ಟು ಪರಿಶ್ರಮ ವಹಿಸಲಾಗಿದೆ. ಅಣಕು ಹರಾಜು ಪ್ರಕ್ರಿಯೆಯನ್ನು ನಡೆಸಿದ್ದೇವೆ. ಈಗ ನಮ್ಮ ಆಯ್ಕೆಗಳಿಗೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಅದೇ ಆಟಗಾರರ ಗುಂಪನ್ನು ಒಟ್ಟಿಗೆ ಇರಿಸಲು ಪ್ರಜ್ಞಾವಂತ ಪ್ರಯತ್ನವನ್ನು ಮಾಡಿದ್ದೇವೆ. ಕಳೆದ ಬಾರಿ ಸಾಕಷ್ಟು ಧನಾತ್ಮಕ ಅಂಶಗಳಿದ್ದವು. ಹಲವಾರು ವರ್ಷಗಳ ಬಳಿಕ ಮೊದಲ ಬಾರಿಗೆ ನಾವು ಪ್ಲೇ-ಆಫ್ ಹಂತವನ್ನು ತಲುಪಿದ್ದೆವು ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಹಾಗೂ ನವದೀಪ್ ಸೈನಿ ಅವರಂತಹ ಯುವ ಆಟಗಾರರನ್ನು ಬೆಂಬಲಿಸಲಾಯಿತು ಎಂದು ಕ್ಯಾಟಿಚ್ ವಿವರಿಸಿದರು.

ಆರ್‌ಸಿಬಿ ತಂಡ ಸಂಯೋಜನೆಯ ಬಗ್ಗೆ ಸಂತುಷ್ಟರಾಗಿದ್ದೇವೆ. ಹರಾಜಿನಲ್ಲಿ ಸಾಕಷ್ಟು ಭಾರತೀಯ ಪ್ರತಿಭೆಗಳನ್ನು ಆರಿಸಿದ್ದೇವೆ. ನಮಗೆ ದೊರೆತ ಆಟಗಾರರ ಮಿಶ್ರಣದಿಂದ ತೃಪ್ತರಾಗಿದ್ದೇವೆ. ಡ್ಯಾನಿಯಲ್ ಕ್ರಿಸ್ಟಿಯನ್ ತುಂಬಾ ಅನುಭವಿ ಆಟಗಾರ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯಂಡ ಜಂಪಾ ಕೂಡಾ ಇದ್ದಾರೆ. ಇದರಿಂದ ಅನುಭವವೂ ದೊರಕಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 9ರಂದು ನಡೆಯಲಿರುವ ಐಪಿಎಲ್ 2021 ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.