ADVERTISEMENT

ಬಟ್ಲರ್ ವೈಭವ; ನಾಯಕತ್ವ ಬದಲಾದರೂ ಹೈದರಾಬಾದ್‌ಗೆ ಬದಲಾಗದ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:08 IST
Last Updated 2 ಮೇ 2021, 14:08 IST
   

ನವದೆಹಲಿ: ಓಪನರ್ ಜೋಸ್ ಬಟ್ಲರ್ ಭರ್ಜರಿ ಶತಕದ (124) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 55 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಸಂಜು ಸ್ಯಾಮ್ಸನ್ ಪಡೆ ಗೆಲುವಿನ ಹಾದಿಗೆ ಮರಳಿದೆ. ಅಲ್ಲದೆ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಒಟ್ಟು ಆರು ಅಂಕಗಳನ್ನು ಸಂಪಾದಿಸಿದ್ದು, ಐದನೇ ಸ್ಥಾನಕ್ಕೆ ನೆಗೆದಿದೆ.

ಅತ್ತ ನಾಯಕತ್ವ ಬದಲಾದರೂ ಹೈದರಾಬಾದ್ ಅದೃಷ್ಟ ಮಾತ್ರ ಬದಲಾಗಲಿಲ್ಲ. ಅಷ್ಟೇ ಪಂದ್ಯಗಳಲ್ಲಿ ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ.

ADVERTISEMENT

ಬಟ್ಲರ್ ಹಾಗೂ ಸಂಜು 150 ರನ್‌ಗಳ ಅಮೋಘ ಜೊತೆಯಾಟದ ನೆರವಿನಿಂದ ರಾಜಸ್ಥಾನ್ 220 ರನ್‌ಗಳ ಬೃಹತ್ ಗುರಿ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಯಾವ ಹಂತದಲ್ಲೂ ಸವಾಲೊಡ್ಡಲಿಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಹೈದರಾಬಾದ್‌ಗೆ ಓಪನರ್‌ಗಳಾದ ಜಾನಿ ಬೆಸ್ಟ್ ಹಾಗೂ ಮನೀಶ್ ಪಾಂಡೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು. ಆ ಈ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಹಿನ್ನೆಡೆ ಅನುಭವಿಸಿತು.

ನಾಯಕ ಕೇನ್ ವಿಲಿಯಮ್ಸನ್ (20) ಹಾಗೂ ವಿಜಯ್ ಶಂಕರ್ (8) ನಿರಾಸೆ ಮೂಡಿಸಿದರು. ಮೊಹಮ್ಮದ್ ನಬಿ ಕೂಡಾ ಪೆವಿಲಿಯನ್ ಸೇರುವುದರೊಂದಿಗೆ 127 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಲ್ಲಿಂದ ಬಳಿಕವೂ ಚೇತರಿಸಿಕೊಳ್ಳಲಿಲ್ಲ. ಕೇದಾರ್ ಜಾಧವ್ (19), ಮೊಹಮ್ಮದ್ ನಬಿ (17), ಅಬ್ದುಲ್ ಸಮದ್ (10), ಭುವನೇಶ್ವರ್ ಕುಮಾರ್ (14*) ಸಂದೀಪ್ ಶರ್ಮಾ (8*) ಹಾಗೂ ರಶೀದ್ ಖಾನ್ (0) ರನ್ ಗಳಿಸಿದರು. ರಾಜಸ್ಥಾನ್ ಪರ ಮುಸ್ತಾಫಿಜುರ್ ರೆಹಮಾನ್ ಹಾಗೂ ಕ್ರಿಸ್ ಮೊರಿಸ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.

ಒಟ್ಟಿನಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಆಡುವ ಬಳಗದಿಂದಲೂ ಡೇವಿಡ್ ವಾರ್ನರ್ ಅವರನ್ನು ಕೈಬಿಟ್ಟಿರುವುದು ಹೈದರಾಬಾದ್‌ಗೆ ಮುಳುವಾಗಿ ಪರಿಣಮಿಸಿತ್ತು.

ಬಟ್ಲರ್ ಚೊಚ್ಚಲ ಶತಕದ ವೈಭವ...
ಜೋಸ್ ಬಟ್ಲರ್ ಚೊಚ್ಚಲ ಶತಕ ಸಾಧನೆ (124) ಹಾಗೂ ನಾಯಕ ಸಂಜು ಸ್ಯಾಮ್ಸನ್ (48) ಬಿರುಸಿನ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಮೂರು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ರಾಜಸ್ಥಾನ್‌ಗೆ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (17) ರೂಪದಲ್ಲಿ ಆಘಾತ ಎದುರಾದರೂ ಎರಡನೇ ವಿಕೆಟ್‌ಗೆ 150 ರನ್‌ಗಳ ಅಮೋಘ ಜೊತೆಯಾಟ ನೀಡಿದ ಬಟ್ಲರ್ ಹಾಗೂ ಸಂಜು ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.

ಪ್ರಭಾವಿ ಹೈದರಾಬಾದ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೈದಾನದ ಎಲ್ಲ ದಿಕ್ಕಿಕ್ಕೂ ಚೆಂಡನ್ನು ಅಟ್ಟಿದರು. ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ಬಟ್ಲರ್, ಬಳಿಕ ರೌರ್ದ ನರ್ತನವನ್ನು ತೋರಿದರು.

ಅತ್ತ ಸಂಜು ಅವರಿಂದ ಉತ್ತಮ ಬೆಂಬಲ ದೊರಕಿತು. ಆದರೆ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. 33 ಎಸೆತಗಳನ್ನು ಎದುರಿಸಿದ ಸಂಜು ನಾಲ್ಕುಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು.

ಇನ್ನೊಂದೆಡೆ ಅಮೋಘ ಇನ್ನಿಂಗ್ಸ್ ಕಟ್ಟಿದ ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದರು. ಅಲ್ಲದೆ ಐಪಿಎಲ್‌ನಲ್ಲಿ ಶತಕ ಸಾಧನೆ ಮಾಡಿದ ಇಂಗ್ಲೆಂಡ್‌ನ 4ನೇ ಆಟಗಾರ ಎಂದೆನಿಸಿದರು.

ಈ ಮೂಲಕ ರಾಜಸ್ಥಾನ್ ಮೂರು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 64 ಎಸೆತಗಳಲ್ಲಿ ಎದುರಿಸಿದ ಬಟ್ಲರ್ 11 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳ ನೆರವಿನಿಂದ 124 ರನ್ ಸಿಡಿಸಿದರು. ಇನ್ನುಳಿದಂತೆ ರಿಯಾನ್ ಪರಾಗ್ 15* ಹಾಗೂ ಡೇವಿಡ್ ಮಿಲ್ಲರ್ 7* ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.