ADVERTISEMENT

IPL 2021: ರನ್ ಬೇಟೆ; ರೈನಾ ದಾಖಲೆ ಮುರಿದ ಧವನ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 18:05 IST
Last Updated 29 ಏಪ್ರಿಲ್ 2021, 18:05 IST
   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಸುರೇಶ್ ರೈನಾ ದಾಖಲೆಯನ್ನು ಮುರಿದಿರುವ ಶಿಖರ್ ಧವನ್ ಎರಡನೇ ಸ್ಥಾನಕ್ಕೇರಿದ್ದಾರೆ.

ಗುರುವಾರ ಅಹಮದಾಬಾದ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಡಗೈ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಈ ವಿಶಿಷ್ಟ ದಾಖಲೆಗೆ ಭಾಜನರಾದರು.

ಯುವ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಜೊತೆಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದ ಧವನ್, 47 ಎಸೆತಗಳಲ್ಲಿ 46 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು. ಅವರ ಸಮಯೋಚಿತ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ADVERTISEMENT

ಇದರೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ಶ್ರೇಷ್ಠ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದರು.

183 ಪಂದ್ಯಗಳನ್ನು ಆಡಿರುವ ಧವನ್ 182 ಇನ್ನಿಂಗ್ಸ್‌ಗಳಲ್ಲಾಗಿ 34.86ರ ಸರಾಸರಿಯಲ್ಲಿ 5,508 ರನ್ ಪೇರಿಸಿದ್ದಾರೆ. ಅತ್ತ ಮೂರನೇ ಸ್ಥಾನದಲ್ಲಿರುವ ರೈನಾ 5,489 ರನ್ ಗಳಿಸಿದ್ದಾರೆ.

ಅಂದ ಹಾಗೆ ಈ ಪಟ್ಟಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಇದೀಗಷ್ಟೇ ವಿರಾಟ್ ಐಪಿಎಲ್‌ನಲ್ಲಿ 6,000 ರನ್‌ಗಳ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಐಪಿಎಲ್‌ನಲ್ಲಿ ಗರಿಷ್ಠ ರನ್ ಸರದಾರರು:

1. ವಿರಾಟ್ ಕೊಹ್ಲಿ: 6,041
2. ಶಿಖರ್ ಧವನ್: 5,508
3. ಸುರೇಶ್ ರೈನಾ: 5,489
4. ಡೇವಿಡ್ ವಾರ್ನರ್: 5,447
5. ರೋಹಿತ್ ಶರ್ಮಾ: 5,445
6. ಎಬಿ ಡಿ ವಿಲಿಯರ್ಸ್: 5,053

ಏತನ್ಮಧ್ಯೆ ಐಪಿಎಲ್ 2021ನೇ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಫಫ್ ಡುಪ್ಲೆಸಿ ಹಿಂದಿಕ್ಕಿರುವ ಧವನ್ (ಇದುವರೆಗೆ 311 ರನ್), ಮಗದೊಮ್ಮೆ ಆರೆಂಜ್ ಕ್ಯಾಪ್‌ಗೆ ಅರ್ಹರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.