ADVERTISEMENT

ಸತತ ಆರು ಬೌಂಡರಿ ಬಾರಿಸಿದ ಪೃಥ್ವಿ ವಿರುದ್ಧ ಸ್ವೀಟ್ ರಿವೆಂಜ್ ತೆಗೆದುಕೊಂಡ ಮಾವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2021, 10:15 IST
Last Updated 30 ಏಪ್ರಿಲ್ 2021, 10:15 IST
ಟ್ವಿಟರ್ ಸ್ಕ್ರೀನ್‌ಶಾಟ್
ಟ್ವಿಟರ್ ಸ್ಕ್ರೀನ್‌ಶಾಟ್   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಶಿವಂ ಮಾವಿ ಓವರ್‌ವೊಂದರಲ್ಲಿ ಎಲ್ಲ ಆರು ಎಸೆತಗಳನ್ನು ಬೌಂಡರಿಗಟ್ಟಿದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅಬ್ಬರಿಸಿದ್ದರು.

ತಮ್ಮ ದಾಳಿಯನ್ನು ನಿರ್ದಯವಾಗಿ ದಂಡಿಸಿದ್ದ ಗೆಳೆಯ ಪೃಥ್ವಿ ಅವರ ಕುತ್ತಿಗೆಯನ್ನು ಹಿಡಿದು ನೋವುಂಟು ಮಾಡುವ ಮೂಲಕ ಶಿವಂ ಮಾವಿ ಸ್ವೀಟ್ ರಿವೆಂಜ್ ತೆಗೆದುಕೊಂಡಿದ್ದಾರೆ.

ಯುವ ಪ್ರತಿಭೆಗಳಾದ ಪೃಥ್ವಿ ಹಾಗೂ ಮಾವಿ ಎರಡು ವಿಭಿನ್ನ ಐಪಿಎಲ್ ಫ್ರಾಂಚೈಸಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಪೃಥ್ವಿ ಶಾ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರನಾಗಿದ್ದು, ಶಿವಂ ಮಾವಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಆಗಿದ್ದಾರೆ.

ಡೆಲ್ಲಿ ಬ್ಯಾಟಿಂಗ್ ವೇಳೆ ಮಾವಿ ಎಸೆದ ಇನ್ನಿಂಗ್ಸ್‌ನ ಪ್ರಥಮ ಓವರ್‌ನ ಎಲ್ಲ ಆರು ಎಸೆತಗಳಲ್ಲಿ ಪೃಥ್ವಿ ಶಾ ಬೌಂಡರಿ ಸಿಡಿಸಿದ್ದರು. ಈ ಮೂಲಕ ಅಜಿಂಕ್ಯ ರಹಾನೆ ಬಳಿಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎಂದೆನಿಸಿದ್ದಾರೆ. ಇದೇ ಓವರ್‌ನಲ್ಲಿ ಒಂದು ವೈಡ್ ದಾಖಲಾಗಿತ್ತು. ಈ ಮೂಲಕ ಒಟ್ಟು 25 ರನ್‌ ಸೂರೆಗೈಯಲಾಗಿತ್ತು.

ಪಂದ್ಯದ ಬಳಿಕ ಹಸ್ತ ಲಾಘವ ಮಾಡುವ ವೇಳೆಯಲ್ಲಿ ಪೃಥ್ವಿ ಕುತ್ತಿಗೆ ಗಟ್ಟಿಯಾಗಿ ಹಿಡಿದು ನೋವುಂಟು ಮಾಡಿದರು. ಪ್ರಸ್ತುತ ವಿಡಿಯೊವನ್ನು ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ. ಇದು ಪೃಥ್ವಿ ಹಾಗೂ ಮಾವಿ ನಡುವಣ ಉತ್ತಮ ಗೆಳೆತನಕ್ಕೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.