ADVERTISEMENT

ಐಪಿಎಲ್‌ಗೆ 2 ಹೊಸ ತಂಡ ಸೇರ್ಪಡೆ ಸಾಧ್ಯತೆ: ₹5000 ಕೋಟಿ ನಿರೀಕ್ಷೆಯಲ್ಲಿ ಬಿಸಿಸಿಐ

ಪಿಟಿಐ
Published 31 ಆಗಸ್ಟ್ 2021, 8:39 IST
Last Updated 31 ಆಗಸ್ಟ್ 2021, 8:39 IST
ಸಾಂದರ್ಭಿಕ ಚಿತ್ರ (ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಎಎಫ್‌ಪಿ)   

ನವದೆಹಲಿ: 2022ರ ಐಪಿಎಲ್‌ಗೆ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ₹5,000 ಕೋಟಿ ಆದಾಯ ದೊರೆಯುವ ನಿರೀಕ್ಷೆ ಇದೆ.

ಹೊಸ ಫ್ರಾಂಚೈಸಿಗಳು ಅಸ್ತಿತ್ವಕ್ಕೆ ಬಂದಲ್ಲಿ ಮುಂದಿನ ಸೀಸನ್‌ನಲ್ಲಿ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

‘₹75 ಕೋಟಿ ನೀಡಿ ಯಾವುದೇ ಕಂಪನಿ ಬಿಡ್ ದಾಖಲೆಗಳನ್ನು ಖರೀದಿಸಬಹುದು. ಈ ಹಿಂದೆ ಹೊಸ ತಂಡಗಳಿಗೆ ₹1,700 ಕೋಟಿ ಮೂಲ ಬೆಲೆ ನಿಗದಿಪಡಿಸಲು ಚಿಂತನೆ ನಡೆಸಲಾಗಿತ್ತು. ನಂತರ ₹2,000 ಕೋಟಿ ನಿಗದಿಪಡಿಸಲು ನಿರ್ಧರಿಸಲಾಯಿತು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೊಡ್ಡ ಉದ್ಯಮ ಸಂಸ್ಥೆಗಳು ಫ್ರಾಂಚೈಸಿ ಖರೀದಿಗೆ ಮುಂದಾದರೆ ಕಡಿಮೆ ಎಂದರೂ ₹5,000 ಕೋಟಿವರೆಗೆ ಆದಾಯ ಗಳಿಸಬಹುದು ಎಂಬುದು ಬಿಸಿಸಿಐ ನಿರೀಕ್ಷೆಯಾಗಿದೆ. ಮುಂದಿನ ಸೀಸನ್‌ನಲ್ಲಿ 74 ಪಂದ್ಯಗಳು ಇರಲಿವೆ ಎಂದು ಈ ಹಿಂದೆ ಐಪಿಎಲ್‌ನ ಹಣಕಾಸು ವಿಭಾಗವನ್ನು ನಿರ್ವಹಿಸಿದ್ದ ಮೂಲಗಳು ಹೇಳಿವೆ.

ವಾರ್ಷಿಕ ₹3,000 ಕೋಟಿ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಹೊಸ ತಂಡಗಳಿಗೆ ಅಹಮದಾಬಾದ್, ಲಖನೌ ಮತ್ತು ಪುಣೆಯಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ, ಲಖನೌನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ದೊಡ್ಡದಾಗಿದ್ದು ಫ್ರಾಂಚೈಸಿಗಳ ಆದ್ಯತೆಯಾಗುವ ಸಾಧ್ಯತೆ ಇದೆ.

ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಟೊರೆಂಟ್ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.