ADVERTISEMENT

IPL 2022 KKR vs PBKS: ರಸೆಲ್ ಅಬ್ಬರ; ಕೆಕೆಆರ್‌ಗೆ ಭರ್ಜರಿ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 17:16 IST
Last Updated 1 ಏಪ್ರಿಲ್ 2022, 17:16 IST
ಆ್ಯಂಡ್ರೆ ರಸೆಲ್
ಆ್ಯಂಡ್ರೆ ರಸೆಲ್   

ಮುಂಬೈ: ಆ್ಯಂಡ್ರೆ ರಸೆಲ್ ಬಿರುಸಿನ ಅರ್ಧಶತಕ (70*) ಹಾಗೂ ಉಮೇಶ್ ಯಾದವ್ (23ಕ್ಕೆ 4 ವಿಕೆಟ್) ನಿಖರ ದಾಳಿಯ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಮಯಂಕ್ ಅಗರವಾಲ್ ಪಡೆ ನಿರಾಸೆ ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 18.2 ಓವರ್‌ಗಳಲ್ಲಿ 137 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಕೆಕೆಆರ್ 14.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ADVERTISEMENT

ಕೇವಲ 31 ಎಸೆತಗಳನ್ನು ಎದುರಿಸಿದ ರಸೆಲ್ ಎರಡು ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ಶ್ರೇಯಸ್ ಅಯ್ಯರ್ (26) ಹಾಗೂ ಸ್ಯಾಮ್ಸ್ ಬಿಲ್ಲಿಂಗ್ಸ್ (24*) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಪಂಜಾಬ್ ಪರ ರಾಹುರ್ ಚಾಹರ್ ಎರಡು ವಿಕೆಟ್ ಗಳಿಸಿದರು.

ಉಮೇಶ್ ದಾಳಿಗೆ ನಲುಗಿದ ಪಂಜಾಬ್...
ಈ ಮೊದಲುಉಮೇಶ್ ಯಾದವ್ (23ಕ್ಕೆ 4 ವಿಕೆಟ್) ಸೇರಿದಂತೆ ಕಕೆಆರ್ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್137 ರನ್‌ಗ.ಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಮಯಂಕ್ ಅಗರವಾಲ್ (1) ನಿರಾಸೆ ಮೂಡಿಸಿದರು. ಭಾನುಕಾ ರಾಜಪಕ್ಸ (31 ರನ್, 9 ಎಸೆತ), ಶಿಖರ್ ಧವನ್ (16), ಲಿಯಾಮ್ ಲಿವಿಂಗ್‌ಸ್ಟೋನ್ (19) ಹಾಗೂ ರಾಜ್ ಬಾವಾ (11) ಉತ್ತಮ ಆರಂಭ ಪಡೆದರೂ ಅದರ ಸಂಪೂರ್ಣ ಪ್ರಯೋಜನ ಗಿಟ್ಟಿಸಲು ಸಾಧ್ಯವಾಗಲಿಲ್ಲ.

ಪರಿಣಾಮ 84 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. 102 ರನ್ನಿಗೆ ಎಂಟು ವಿಕೆಟ್ ಕಳೆದುಕೊಂಡಿತು. ಶಾರೂಕ್ ಖಾನ್ (0), ಹರಪ್ರೀತ್ ಬ್ರಾರ್ (14), ರಾಹುಲ್ ಚಾಹರ್ (0) ವೈಫಲ್ಯ ಅನುಭವಿಸಿದರು.

ಆದರೆ ಒಂಬತ್ತನೇ ವಿಕೆಟ್‌ಗೆ 35 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ ಕಗಿಸೊ ರಬಾಡ ಹಾಗೂ ಒಡೀನ್ ಸ್ಮಿತ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 16 ಎಸೆತಗಳನ್ನು ಎದುರಿಸಿದ ರಬಾಡ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್‌ನಿಂದ 25 ರನ್ ಗಳಿಸಿದರು.

ಅಂತಿಮವಾಗಿ 137ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಒಡೀನ್ ಸ್ಮಿತ್ 9 ರನ್ ಗಳಿಸಿ ಔಟಾಗದೆ ಉಳಿದರು. ಕೆಕೆಆರ್ ಪರ ಉಮೇಶ್ ನಾಲ್ಕು, ಟಿಮ್ ಸೌಥಿ ಎರಡು ವಿಕೆಟ್ ಕಬಳಿಸಿದರು.

ಪ್ಲೇಯಿಂಗ್ ಇಲೆವೆನ್:

ಪಂಜಾಬ್ ಕಿಂಗ್ಸ್: ಮಯಂಕ್ ಅಗರವಾಲ್ (ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಭಾನುಕ ರಾಜಪಕ್ಸ, ಶಾರೂಕ್ ಖಾನ್, ಒಡೀನ್ ಸ್ಮಿತ್, ರಾಜ ಬಾವಾ, ಆರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್.

ಕೋಲ್ಕತ್ತ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲಿಂಗ್ಸ್, ಶೇಲ್ಡನ್ ಜಾಕ್ಸನ್ (ವಿಕೆಟ್‌ಕೀಪರ್), ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಶಿವಂ ಮಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.