ADVERTISEMENT

IPL 2022 KKR vs RR: ಆರ್‌ಆರ್‌ಗೆ ಸೋಲಿನ ಶಾಕ್, ಜಯದ ಹಾದಿಗೆ ಮರಳಿದ ಕೆಕೆಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 18:08 IST
Last Updated 2 ಮೇ 2022, 18:08 IST
   

ಮುಂಬೈ: ನಿತೀಶ್ ರಾಣಾ (48*), ರಿಂಕು ಸಿಂಗ್ (42*) ಹಾಗೂ ನಾಯಕ ಶ್ರೇಯಸ್ ಅಯ್ಯರ್ (34) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಇದರೊಂದಿಗೆ ಸತತ ಐದು ಸೋಲುಗಳ ಬಳಿಕ ಕೆಕೆಆರ್ ಗೆಲುವಿನ ಹಾದಿಗೆ ಮರಳಿದೆ. ಅತ್ತ ರಾಜಸ್ಥಾನ್ ಸತತ ಎರಡನೇ ಸೋಲಿಗೆ ಶರಣಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ನಾಯಕ ಸಂಜು ಸ್ಯಾಮ್ಸನ್ ಅರ್ಧಶತಕದ (54) ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ADVERTISEMENT

ಬಳಿಕ ಗುರಿ ಬೆನ್ನಟ್ಟಿದ ಕೆಕೆಆರ್, ಇನ್ನೂ ಐದು ಎಸೆತಗಳು ಬಾಕಿ ಉಳಿದಿರುವಂತೆಯೇ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ 10 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿರುವ ಕೆಕೆಆರ್, ಒಟ್ಟು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ ಈ ಸೋಲಿನ ಹೊರತಾಗಿಯೂ ರಾಜಸ್ಥಾನ್, 10 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಕೆಕೆಆರ್‌ ಆರಂಭ ಉತ್ತಮವಾಗಿರಲಿಲ್ಲ. ತಂಡವು 32 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಆ್ಯರನ್ ಫಿಂಚ್ (4) ಹಾಗೂ ಬಾಬಾ ಇಂದ್ರಜಿತ್ (15)ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆ ಸೇರಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಅಯ್ಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ರಾಣಾ ಆಕ್ರಮಣಕಾರಿ ಆಟವಾಡಿದರು.

ಅಯ್ಯರ್ ಹಾಗೂ ರಾಣಾ ಮೂರನೇ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. 32 ಎಸೆತಗಳನ್ನು ಎದುರಿಸಿದ ಅಯ್ಯರ್ 34 ರನ್ (32 ಎಸೆತ) ಗಳಿಸಿದರು.

ಬಳಿಕ ಕ್ರೀಸಿಗಿಳಿದ ರಿಂಕು ಸಿಂಗ್ ಅಬ್ಬರಿಸಿದರು. ಅಲ್ಲದೆ ರಾಣಾಗೆ ಉತ್ತಮ ಸಾಥ್ ನೀಡಿದರು. ಮುರಿಯದ ನಾಲ್ಕನೇ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ರಾಣಾ ಹಾಗೂ ರಿಂಕು ಕೆಕೆಆರ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ರಾಣಾ 37 ಎಸೆತಗಳಲ್ಲಿ 48 ರನ್ (37 ಎಸೆತ, 3 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ರಿಂಕು ಸಿಂಗ್ 23 ಎಸೆತಗಳಲ್ಲಿ 42 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.

ಸಂಜು ಹೋರಾಟ ವ್ಯರ್ಥ....

ಈ ಮೊದಲುನಾಯಕ ಸಂಜು ಸ್ಯಾಮ್ಸನ್ ಅರ್ಧಶತಕದ (54) ನೆರವಿನಿಂದ ರಾಜಸ್ಥಾನ್ಐದುವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತ್ತು.

ಮಗದೊಮ್ಮೆ ಟಾಸ್ ಕಳೆದುಕೊಂಡು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲೇ ದೇವದತ್ತ ಪಡಿಕ್ಕಲ್ (2) ರೂಪದಲ್ಲಿ ಆಘಾತ ಎದುರಾಗಿತ್ತು.

ಬಳಿಕ ಜೊತೆಗೂಡಿದ ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ದ್ವಿತೀಯ ವಿಕೆಟ್‌ಗೆ48 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ರನ್ ಬೇಟೆಯಲ್ಲಿ ಮುಂಚೂಣಿಯಲ್ಲಿರುವ ಬಟ್ಲರ್‌ಗೆ ಮಿಂಚಲು ಸಾಧ್ಯವಾಗಲಿಲ್ಲ. ಅಲ್ಲದೆ 25 ಎಸೆತಗಳಲ್ಲಿ 22 ರನ್ ಗಳಿಸಿ (3 ಬೌಂಡರಿ) ಔಟ್ ಆದರು.

ನಂತರ ಕ್ರೀಸಿಗಿಳಿದಕನ್ನಡಿಗ ಕರುಣ್ ನಾಯರ್‌ (13) ವೈಫಲ್ಯ ಅನುಭವಿಸಿದರು.ಅತ್ತ ನಾಯಕನ ಆಟವಾಡಿದ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಗಳಿಸಿದರು.

ರಾಜಸ್ಥಾನ್ ಬ್ಯಾಟರ್‌ಗಳು ನಿಧಾನಗತಿಯ ಆಟ ಆಡಿರುವುದು ಹಿನ್ನಡೆಗೆ ಕಾರಣವಾಯಿತು. 18ನೇ ಓವರ್‌ನಲ್ಲಿ ಸಂಜು ಕೂಡ ಪೆವಿಲಿಯನ್ ಸೇರಿದರು. 49 ಎಸೆತಗಳನ್ನು ಎದುರಿಸಿದ ಸಂಜು 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಶಿಮ್ರಾನ್ ಹೆಟ್ಮೆಯರ್ ಬಿರುಸಿನ ಆಟವಾಡುವ (ಅಜೇಯ 27, 13 ಎಸೆತ, 1 ಬೌಂಡರಿ, 2 ಸಿಕ್ಸರ್) ಮೂಲಕ ಗಮನ ಸೆಳೆದರು. ಇನ್ನುಳಿದಂತೆ ರಿಯಾನ್ ಪರಾಗ್ 19 ರನ್ ಗಳಿಸಿದರು. ಈ ಮೂಲಕ ರಾಜಸ್ಥಾನ್ ಐದು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ಕೆಕೆಆರ್ ಪರ ಟಿಮ್ ಸೌಥಿ ಎರಡು ವಿಕೆಟ್ ಕಬಳಿಸಿದರು. ಉಮೇಶ್ ಯಾದವ್ (24/1) ಹಾಗೂ ಸುನಿಲ್ ನಾರಾಯಣ್ (19/0) ಪ್ರಭಾವಿ ಎನಿಸಿದರು.

ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ಕೆ...

ಈ ಮೊದಲುಟಾಸ್ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ರಾಜಸ್ಥಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ಆಘಾತ ಎದುರಿಸಿತ್ತು. ಆದರೂ 9 ಪಂದ್ಯಗಳಲ್ಲಿ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಅತ್ತ ಸತತ ಐದು ಸೋಲು ಅನುಭವಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, ಗೆಲುವಿನ ಹಾದಿಗೆ ಮರಳುವ ಇರಾದೆಯಲ್ಲಿದೆ. ಶ್ರೇಯಸ್ ಅಯ್ಯರ್ ಪಡೆ ಒಂಬತ್ತು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಈ ಹಿನ್ನೆಲೆಯಲ್ಲಿ ವಾಂಖೆಡೆ ಮೈದಾನದಲ್ಲಿ ಮಗದೊಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.