ADVERTISEMENT

IPL 2022: ಚಾಹಲ್ ವಿರುದ್ಧ ಸ್ಪರ್ಧೆಯಿಲ್ಲ; ಅಣ್ಣನ ಸಮಾನ: ಕುಲದೀಪ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 11:25 IST
Last Updated 29 ಏಪ್ರಿಲ್ 2022, 11:25 IST
ಕುಲದೀಪ್ ಯಾದವ್
ಕುಲದೀಪ್ ಯಾದವ್   

ಮುಂಬೈ: ಯಜುವೇಂದ್ರ ಚಾಹಲ್ ವಿರುದ್ಧ ಸ್ಪರ್ಧೆ ನಡೆಸುತ್ತಿಲ್ಲ. ಅವರು ನನಗೆ ಅಣ್ಣನ ಸಮಾನ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಚೈನಾಮನ್ ಬೌಲರ್ ಕುಲದೀಪ್, ಕೈಚಳಕ ತೋರಿದ್ದಾರೆ. ಅಲ್ಲದೆ ಎಂಟು ಪಂದ್ಯಗಳಲ್ಲಿ 17 ವಿಕೆಟ್ ಗಳಿಸಿ, ಚಾಹಲ್‌ಗೆ ನಿಕಟ ಪೈಪೋಟಿ ಒಡ್ಡುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚಾಹಲ್, ಅಷ್ಟೇ ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದಾರೆ. ಈ ಮೂಲಕ 'ಪರ್ಪಲ್ ಕ್ಯಾಪ್' ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕುಲದೀಪ್, 'ಅವರು (ಚಾಹಲ್) ನನ್ನನ್ನು ತುಂಬಾ ಹುರಿದುಂಬಿಸಿದ್ದಾರೆ. ಚಾಹಲ್ ನನಗೆ ಅಣ್ಣನಿದ್ದಂತೆ! ನನ್ನ ಕೆಟ್ಟ ಸಮಯದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅಮೋಘ ಬೌಲಿಂಗ್ ಮಾಡುತ್ತಿರುವ ಚಾಹಲ್, ಪರ್ಪಲ್ ಕ್ಯಾಪ್ ಗೆಲ್ಲಬೇಕೆಂದು ನಾನು ಹೃದಯದಿಂದ ಆಶಿಸುತ್ತೇನೆ' ಎಂದು ಹೇಳಿದ್ದಾರೆ.

ವಿಕೆಟ್ ಪಡೆಯಲು ಸಾಧ್ಯವಾಗದ ಕಠಿಣ ಪರಿಸ್ಥಿತಿಯು ಮಾನಸಿಕವಾಗಿ ಹೆಚ್ಚು ಸದೃಢರಾಗಲು ನೆರವು ಮಾಡಿದೆ ಎಂದು ಕುಲದೀಪ್ ಹೇಳಿದ್ದಾರೆ.

'ಜೀವನದಲ್ಲಿ ವೈಫಲ್ಯ ಎದುರಾದಾಗ ಎಲ್ಲಿ ತಪ್ಪು ಮಾಡಿದ್ದೀರಿ ಎಂಬುದು ಮನವರಿಕೆಯಾಗುತ್ತದೆ. ಅದು ನಿಮ್ಮನ್ನು ಮಾನಸಿಕವಾಗಿ ಬಲಗೊಳಿಸುತ್ತದೆ. ಈಗ ವೈಫಲ್ಯದ ಬಗ್ಗೆ ಭಯ ಕಾಡುತ್ತಿಲ್ಲ' ಎಂದು ಹೇಳಿದರು.

ಈ ಇಬ್ಬರು ರಿಸ್ಟ್ ಸ್ಪಿನ್ನರ್‌ಗಳು ಟೀಮ್ ಇಂಡಿಯಾದ ಕ್ರಿಕೆಟ್ ವಲಯದಲ್ಲಿ 'ಕುಲ್ಚಾ' ಎಂದೇ ಜನಪ್ರಿಯತೆ ಗಳಿಸಿದ್ದರು. ಬಳಿಕ ಕಳಪೆ ಬೌಲಿಂಗ್‌ನಿಂದಾಗಿ ಸ್ಥಾನ ಕಳೆದುಕೊಂಡಿದ್ದರು. ಈಗ ಚಾಹಲ್ ಹಾಗೂ ಕುಲದೀಪ್, ಐಪಿಎಲ್‌ನಲ್ಲೂ ಮೋಡಿ ಮಾಡುವ ಮೂಲಕ ಲಯಕ್ಕೆ ಮರಳಿದ್ದಾರೆ.

ಕುಲದೀಪ್ ನಾಲ್ಕು ವಿಕೆಟ್ ಸಾಧನೆ ನೆರವಿನಿಂದ ಡೆಲ್ಲಿ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.