ADVERTISEMENT

IPL 2022: ತಂಡದಲ್ಲಿ ಉಳಿಸಿಕೊಳ್ಳದ ‘ಆರ್‌ಸಿಬಿ’ ಬಗ್ಗೆ ಚಾಹಲ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 10:55 IST
Last Updated 29 ಮಾರ್ಚ್ 2022, 10:55 IST
ಯಜುವೇಂದ್ರ ಚಾಹಲ್ ಮತ್ತು ವಿರಾಟ್ ಕೊಹ್ಲಿ
ಯಜುವೇಂದ್ರ ಚಾಹಲ್ ಮತ್ತು ವಿರಾಟ್ ಕೊಹ್ಲಿ    

ನವದೆಹಲಿ: ಐಪಿಎಲ್‌ 2022ರ ಮೆಗಾ ಹರಾಜಿನಲ್ಲಿ ತಮ್ನನ್ನು ರಿಟೇನ್‌ ಮಾಡಿಕೊಳ್ಳುವುದಾಗಿ ಹೇಳಿ ತಂಡದಿಂದ ಕೈಬಿಟ್ಟ ಆರ್‌ಸಿಬಿ ಫ್ರಾಂಚೈಸಿ ಬಗ್ಗೆ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಚಾಹಲ್, ‘ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನನ್ನ ಬಳಿ ರಿಟೇನ್ ಆಗುವಿರಾ ಎಂದೂ ಕೇಳಲಿಲ್ಲ. ಕೇಳಿದ್ದರೆ ನಾನು ತಂಡದಲ್ಲಿ ಉಳಿಯುವುದಾಗಿ ಹೇಳುತ್ತಿದ್ದೆ. ಹಣಕ್ಕಿಂತ ನನಗೆ ತಂಡದ ಜತೆಗಿನ ಬಾಂಧವ್ಯ ಮುಖ್ಯವಾಗಿತ್ತು. ಆದರೆ, ನನ್ನನ್ನು ರಿಟೇನ್ ಮಾಡಿಕೊಳ್ಳದೆ, ಹರಾಜಿನಲ್ಲಿ ಮರಳಿ ಖರೀದಿಸುವೆವು ಎಂದು ತಿಳಿಸಿದ್ದರು. ಹಣ ಮುಖ್ಯವಾಯಿತೇ ಎಂದು ಆರ್‌ಸಿಬಿ ಅಭಿಮಾನಿಗಳು ಈಗಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಆರ್‌ಸಿಬಿ ತಂಡದಿಂದ ನನ್ನ ಜೀವನ ಸಾಕಷ್ಟು ಬದಲಾಗಿದೆ. ತಂಡದ ಅಭಿಮಾನಿಗಳೂ ಸಾಕಷ್ಟು ಪ್ರೀತಿ ನೀಡಿದ್ದರು. 2010ರಲ್ಲಿ ನಾನು ಐಪಿಎಲ್‌ನಲ್ಲಿ ಮೊದಲ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯನಾಗಿದ್ದೆ. ಹೀಗಾಗಿ ಮತ್ತೆ ಅದೇ ತಂಡಕ್ಕೆ ಮರಳಿರುವ ಖುಷಿಯೂ ಇದೆ’ ಎಂದು ಹೇಳಿಕೊಂಡಿದ್ದಾರೆ.

2014ರಿಂದ 2021ರವರೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ಚಾಹಲ್‌ ಪ್ರಮುಖ ಸ್ಪಿನ್ನರ್‌ ಆಗಿ ಗುರುತಿಸಿಕೊಂಡಿದ್ದರು.

ADVERTISEMENT

ಚಾಹಲ್‌, ಆರ್‌ಸಿಬಿ ಪರ 114 ಪಂದ್ಯಗಳನ್ನು ಆಡಿದ್ದು, 139 ವಿಕೆಟ್ ಪಡೆದು ನಾಯಕ ವಿರಾಟ್‌ ಕೊಹ್ಲಿ ಅವರ ನೆಚ್ಚಿನ ಬೌಲರ್‌ ಎನ್ನಿಸಿಕೊಂಡಿದ್ದರು. ಆದರೆ, ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ಚಾಹಲ್‌ ಅವರನ್ನು ತಂಡದಿಂದ ಕೈಬಿಟ್ಟಿತ್ತು.

ಈ ಬಾರಿ ಚಾಹಲ್‌ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಹರಾಜಿನಲ್ಲಿ ₹6.50 ಕೋಟಿಗೆ​ ಖರೀದಿಸಿದೆ.

ಚಾಹಲ್ ಇಂದು ಕಣಕ್ಕೆ?
ಯಜುವೇಂದ್ರ ಚಾಹಲ್ ಸೇರಿದಂತೆ ಬಲಿಷ್ಠ ಆಟಗಾರರನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೆಣಸಲಿದೆ.

ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಣ ಈ ಬಾರಿಯ ಟೂರ್ನಿಯ ಮೊದಲ ಪಂದ್ಯಕ್ಕೆ ಮಂಗಳವಾರ ಆತಿಥ್ಯ ನೀಡಲಿದ್ದು ಮಾಜಿ ಚಾಂಪಿಯನ್ನರ್ ಮುಖಾಮುಖಿ ಕುತೂಹಲ ಕೆರಳಿಸಿದೆ.

2008ರ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್‌ಗೆ ಮತ್ತೆ ಚಾಂಪಿಯನ್ ಪಟ್ಟ ದೊರಕಿಸಿಕೊಡುವ ಅವರ ಕನಸು ನನಸಾಗಬೇಕಾದರೆ ಗೆಲುವಿನ ಆರಂಭ ಸಿಗಬೇಕಾಗಿದೆ. ದೇವದತ್ತ ಪಡಿಕ್ಕಲ್ ಮತ್ತು ಜೋಸ್ ಬಟ್ಲರ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಶಿಮ್ರಾನ್ ಹೆಟ್ಮೆಯರ್, ರಸಿ ವ್ಯಾನ್ ಡೆರ್ ಡುಸೆನ್, ಜಿಮ್ಮಿ ನೀಶಮ್, ರಯಾನ್ ಪರಾಗ್ ಮುಂತಾದವರ ಬಲ ತಂಡಕ್ಕಿದೆ.

ಬೌಲಿಂಗ್‌ನಲ್ಲಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಭರವಸೆ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.