ADVERTISEMENT

IPL 2022 RR vs RCB: ದಿನೇಶ್, ಶಾಬಾಜ್ ಆಟಕ್ಕೆ ಆರ್‌ಸಿಬಿಗೆ ಒಲಿದ ಜಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 18:56 IST
Last Updated 5 ಏಪ್ರಿಲ್ 2022, 18:56 IST
ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿ – ಪಿಟಿಐ ಚಿತ್ರ
ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿ – ಪಿಟಿಐ ಚಿತ್ರ   

ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟರ್ ಶಾಬಾಜ್ ಅಹಮದ್ ಮತ್ತು ಅನುಭವಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 4 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಿಸಿತು. 170 ರನ್‌ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿಯು 13 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 87 ರನ್ ಗಳಿಸಿತ್ತು. ಸೋಲಿನ ಆತಂಕ ಎದುರಿಸಿತ್ತು.

ಈ ಹಂತದಲ್ಲಿ ಜೊತೆಗೂಡಿದ ಶಾಬಾಜ್ (45; 28ಎ, 4X4, 6X3) ಮತ್ತು ದಿನೇಶ್ (ಔಟಾಗದೆ 44; 23ಎ) ರಾಜಸ್ಥಾನ್ ಕೈಯಿಂದ ಗೆಲುವಿನ ಕಸಿದುಕೊಂಡರು. ಆರನೇ ವಿಕೆಟ್ ಜೊತೆಯಾಟದಲ್ಲಿ 67 ರನ್‌ಗಳನ್ನು ಸೂರೆ ಮಾಡಿದರು. ಅದಕ್ಕಾಗಿ ಅವರಿಬ್ಬರೂ ಆಡಿದ್ದು 32 ಎಸೆತಗಳನ್ನು ಮಾತ್ರ!

ADVERTISEMENT

ಶಾಬಾಜ್ ನಾಲ್ಕು ಬೌಂಡರಿ, ಮೂರು ಸಿಕ್ಸರ್ ಸಿಡಿಸಿದರು. ದಿನೇಶ್ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಇದರಿಂದಾಗಿ ತಂಡವು 19.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 173 ರನ್‌ ಗಳಿಸಿತು. ಹರ್ಷಲ್ ಪಟೇಲ್ ವಿಜಯದ ಸಿಕ್ಸರ್ ಹೊಡೆದರು.

ಬಟ್ಲರ್, ಹೆಟ್ಮೆಯರ್ ಮಿಂಚು: ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು.ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 169 ರನ್ ಗಳಿಸಿತು. ಬಟ್ಲರ್ (ಔಟಾಗದೆ 70) ಮತ್ತು ಹೆಟ್ಮೆಯರ್ (ಔಟಾಗದೆ 42) ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿದರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಬೌಲರ್ ಡೇವಿಡ್ ವಿಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಗಳಿಸಿದರು. ಈ ಹಂತದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತು ಬಟ್ಲರ್ ಸೇರಿ ಇನಿಂಗ್ಸ್‌ಗೆ ಬಲ ತುಂಬಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಗಳಿಸಿದರು.

ಬಟ್ಲರ್ 42 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಈ ಪಂದ್ಯದಲ್ಲಿ ಅರ್ಧ ಡಜನ್ ಸಿಕ್ಸರ್ ಸಿಡಿಸಿದರು. ಆದರೆ, ಒಂದೂ ಬೌಂಡರಿ ಗಳಿಸಲಿಲ್ಲ. ಸಂಜು ಸ್ಯಾಮ್ಸನ್ (8; 8ಎ) ಬೇಗನೆ ನಿರ್ಗಮಿಸಿದ ನಂತರ ಕ್ರೀಸ್‌ಗೆ ಬಂದ ಹೆಟ್ಮೆಯರ್ ತಮ್ಮ ಭುಜಬಲ ಪರಾಕ್ರಮ ಮೆರೆದರು. ನಾಲ್ಕು ಬೌಂಡರಿ, ಎರಡು ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು.

ಕೈಚೆಲ್ಲಿದ ಕ್ಯಾಚ್‌ಗಳು: ಆರ್‌ಸಿಬಿ ತಂಡದ ಫೀಲ್ಡಿಂಗ್ ಕಳಪೆಯಾಗಿತ್ತು. ಫೀಲ್ಡರ್‌ಗಳು ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದರು.

ಏಳನೇ ಓವರ್‌ನಲ್ಲಿ ಎರಡು ಬಾರಿ ಬಟ್ಲರ್ ಕೊಟ್ಟಿದ್ದ ಕ್ಯಾಚ್ ಅನ್ನು ಆಕಾಶದೀಪ್ ತಮ್ಮದೇ ಬೌಲಿಂಗ್‌ನಲ್ಲಿ ನೆಲಕ್ಕೆ ಚೆಲ್ಲಿದರು. ಪಡಿಕ್ಕಲ್ ಕೂಡ ಒಂದು ಜೀವದಾನ ಪಡೆದರು.19ನೇ ಓವರ್‌ನಲ್ಲಿ ಸಿರಾಜ್ ಬೌಲಿಂಗ್‌ನಲ್ಲಿ ಹೆಟ್ಮೆಯರ್ ಕ್ಯಾಚ್‌ ಅನ್ನು ಪಡೆಯುವಲ್ಲಿ ನಾಯಕ ಫಫ್ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.