ADVERTISEMENT

IPL 2023: ಡೆಲ್ಲಿ ವಿರುದ್ಧ 77 ರನ್ ಗೆಲುವು; ಚೆನ್ನೈ ಪ್ಲೇ-ಆಫ್‌ಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2023, 14:08 IST
Last Updated 20 ಮೇ 2023, 14:08 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2023ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77 ರನ್ ಅಂತರದ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿದೆ.

ಈ ಮೂಲಕ ಗುಜರಾತ್ ಟೈಟನ್ಸ್ ಬಳಿಕ ಪ್ಲೇ-ಆಫ್‌ಗೆ ಪ್ರವೇಶಿಸಿದ ಎರಡನೇ ತಂಡವೆನಿಸಿದೆ.

ಇದು ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಎಂದೇ ಅಂದಾಜಿಸಲಾಗಿದೆ. ಈಗ ಮಹಿ ನಾಯಕತ್ವದಲ್ಲಿ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿರುವ ಸಿಎಸ್‌ಕೆ ಮಗದೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ADVERTISEMENT

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ಡೆವೊನ್ ಕಾನ್ವೇ (87) ಹಾಗೂ ಋತುರಾಜ್ ಗಾಯಕವಾಡ್ (79) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 223 ರನ್ ಪೇರಿಸಿತು.

ಈ ಜೋಡಿಯು ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 141 ರನ್ ಪೇರಿಸಿತು. 52 ಎಸೆತಗಳನ್ನು ಎದುರಿಸಿದ ಕಾನ್ವೇ 11 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು. ಮತ್ತೊಂದೆಡೆ ಋತುರಾಜ್ 50 ಎಸೆತಗಳಲ್ಲಿ 79 ರನ್ (7 ಸಿಕ್ಸರ್, 3 ಬೌಂಡರಿ) ಗಳಿಸಿ ಅಬ್ಬರಿಸಿದರು.

ಬಳಿಕ ಗುರಿ ಬೆನ್ನಟ್ಟಿದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಅರ್ಧಶತಕದ (86) ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ವಾರ್ನರ್ 58 ಎಸೆತಗಳಲ್ಲಿ 86 ರನ್ (7 ಬೌಂಡರಿ, 5 ಸಿಕ್ಸರ್) ಗಳಿಸಿದರು. ಚೆನ್ನೈ ಪರ ದೀಪಕ್ ಚಾಹರ್ ಮೂರು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.