ADVERTISEMENT

IPL | ಸ್ಟಾರ್ಕ್‌ಗೆ 5 ವಿಕೆಟ್, ಪ್ಲೆಸಿ ಫಿಫ್ಟಿ; DCಗೆ 2ನೇ ಜಯ, ಮತ್ತೆ ಸೋತ SRH

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2025, 14:17 IST
Last Updated 30 ಮಾರ್ಚ್ 2025, 14:17 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಿಚೇಲ್‌ ಸ್ಟಾರ್ಕ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅನಿಕೇತ್‌ ವರ್ಮಾ</p></div>

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಿಚೇಲ್‌ ಸ್ಟಾರ್ಕ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅನಿಕೇತ್‌ ವರ್ಮಾ

   

ಚಿತ್ರಗಳು: x/ @DelhiCapitals, @SunRisers

ಹೈದರಾಬಾದ್‌: ಬಿರುಸಿನ ಬ್ಯಾಟಿಂಗ್‌ ಮೂಲಕ ಉಳಿದ ತಂಡಗಳಿಗೆ ನಡುಕ ಹುಟ್ಟಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ತಂಡ, ತವರಿನಲ್ಲಿ ಎರಡನೇ ಸೋಲು ಅನುಭವಿಸಿತು.

ADVERTISEMENT

ಎಸ್‌ಆರ್‌ಎಚ್‌ ಶೈಲಿಯಲ್ಲೇ ಬೀಸಾಟವಾಡಿದ ಡೆಲ್ಲಿ ಬ್ಯಾಟರ್‌ಗಳು, ಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯವನ್ನು 16 ಓವರ್‌ಗಳಲ್ಲೇ ಗೆದ್ದುಕೊಂಡರು.

164 ರನ್‌ಗಳ ಸ್ಪರ್ಧಾತ್ಮಕ ಗುರಿ ಡೆಲ್ಲಿ ಪಡೆಗೆ ಸವಾಲೇ ಆಗಲಿಲ್ಲ. 3 ವಿಕೆಟ್‌ಗೆ 166 ರನ್‌ ಗಳಿಸಿ ಜಯದ ನಗೆ ಬೀರಿತು.

ಆರಂಭಿಕ ಬ್ಯಾಟರ್‌ಗಳಾದ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ (38 ರನ್‌) ಹಾಗೂ ಫಾಫ್‌ ಡು ಪ್ಲೆಸಿ (50 ರನ್‌) ಮೊದಲ ವಿಕೆಟ್‌ಗೆ 81 ರನ್‌ ಕಲೆಹಾಕಿದರು.

ಕೇವಲ 27 ಎಸೆತಗಳನ್ನು ಎದುರಿಸಿದ ಪ್ಲೆಸಿ, 50 ರನ್‌ ಬಾರಿಸಿದರು. ಇದು ಐಪಿಎಲ್‌ನಲ್ಲಿ ಅವರ 38ನೇ ಅರ್ಧಶತಕ. ಇದೇ ಮೊದಲ ಸಲ ಡೆಲ್ಲಿ ಪರ ಕಣಕ್ಕಿಳಿದ ಕನ್ನಡಿಗ ಕೆ.ಎಲ್‌.ರಾಹುಲ್‌ 5 ಎಸೆತಗಳಲ್ಲಿ 15 ರನ್‌ ಗಳಿಸಿದರು.

ಅಭಿಷೇಕ್‌ ಪೊರೆಲ್‌ (34 ರನ್‌) ಮತ್ತು ಟಿಟ್ಸನ್‌ ಸ್ಟಬ್ಸ್‌ (21 ರನ್‌) ಕೊನೆಯಲ್ಲಿ ಜಯದ ಲೆಕ್ಕಾಚಾರ ಪೂರ್ಣಗೊಳಿಸಿದರು.

ಡೆಲ್ಲಿ ತಂಡದ ಮೂರೂ ವಿಕೆಟ್‌ಗಳು ಜೀಸನ್‌ ಅನ್ಸಾರಿ ಪಾಲಾದವು. ಅವರು 4 ಓವರ್‌ಗಳಲ್ಲಿ 42 ರನ್‌ ಬಿಟ್ಟುಕೊಟ್ಟರು.

ಸ್ಟಾರ್ಕ್‌ಗೆ 5 ವಿಕೆಟ್‌; ಎಸ್‌ಆರ್‌ಎಚ್‌ಗೆ ಅನಿಕೇತ್‌ ಆಸರೆ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಎಸ್‌ಆರ್‌ಎಚ್‌ ನಾಯಕನ ಲೆಕ್ಕಾಚಾರ ಪವರ್‌ ಪ್ಲೇನಲ್ಲೇ ತಲೆಕೆಳಗಾಯಿತು.

ಆತಿಥೇಯ ತಂಡದ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕಕ್ಕೆ ಡೆಲ್ಲಿ ವೇಗಿ ಮಿಚೇಲ್‌ ಸ್ಟಾರ್ಕ್‌ ಪೆಟ್ಟು ಕೊಟ್ಟರು. ಆದರೆ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಅಮೋಘ ಆಟವಾಡಿದ ಅನಿಕೇತ್‌ ವರ್ಮಾ, ತಮ್ಮ ತಂಡಕ್ನೆಕೆ ಆಸರೆಯಾದರು.

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಅಭಿಷೇಕ್‌ ಶರ್ಮಾ ಮೊದಲ ಓವರ್‌ನಲ್ಲೇ ರನೌಟ್‌ ಆದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಸ್ಟಾರ್ಕ್‌ ಗಾಯದ ಮೇಲೆ ತುಪ್ಪ ಸುರಿದರು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಇಶಾನ್‌ ಕಿಶನ್‌ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಔಟ್‌ ಮಾಡಿದರು. ತಂಡದ ಮೊತ್ತ 37 ರನ್‌ ಆಗುವಷ್ಟರಲ್ಲಿ ಟ್ರಾವಿಸ್‌ ಹೆಡ್‌ಗೂ ಪೆವಿಲಿಯನ್‌ ದಾರಿ ತೋರಿದರು.

ಹೀಗಾಗಿ, ಪವರ್‌ ಪ್ಲೇ ಮುಕ್ತಾಯದ ವೇಳೆಗೆ ಎಸ್‌ಆರ್‌ಎಚ್‌ 58 ರನ್‌ ಗಳಿಸಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

5ನೇ ವಿಕೆಟ್‌ಗೆ ಜೊತೆಯಾದ ಅನಿಕೇತ್‌ ಶರ್ಮಾ ಹಾಗೂ ಹೆನ್ರಿಚ್‌ ಕ್ಲಾಸೆನ್‌, 77 ರನ್‌ ಸೇರಿಸಿ ಕುಸಿತ ತಪ್ಪಿಸಿದರು. ಕ್ಲಾಸೆನ್‌ (32 ರನ್)‌ ಔಟಾದ ನಂತರವೂ, ಜವಾಬ್ದಾರಿಯುತ ಬ್ಯಾಟಿಂಗ್‌ ಮುಂದುವರಿಸಿದ ಅನಿಕೇತ್‌, ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದರು.

ಇವರಿಬ್ಬರನ್ನು ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌, ಎರಡಂಕಿಯ ಮೊತ್ತ ಗಳಿಸಲಿಲ್ಲ.

41 ಎಸೆತಗಳನ್ನು ಎದುರಿಸಿದ ಅನಿಕೇತ್‌, 5 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 74 ರನ್‌ ಗಳಿಸಿದರು. ತಂಡದ ಮೊತ್ತ 148 ರನ್‌ ಆಗಿದ್ದಾಗ ಔಟಾದರು. ನಂತರ ಎಸ್‌ಆರ್‌ಎಚ್‌ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಹೀಗಾಗಿ, ಆತಿಥೇಯ ತಂಡ, 18.4 ಓವರ್‌ಗಳಲ್ಲಿ 163 ರನ್‌ ಗಳಿಸಿ ಆಲೌಟ್‌ ಆಯಿತು.

ಡೆಲ್ಲಿ ಪರ ಸ್ಟಾರ್ಕ್‌ 5 ವಿಕೆಟ್‌ ಉರುಳಿಸಿದರೆ, ಕುಲದೀಪ್‌ ಯಾದವ್‌ ಮೂರು ವಿಕೆಟ್‌ ಪಡೆದರು. ಇನ್ನೊಂದು ವಿಕೆಟ್‌ ಮೋಹಿತ್‌ ಶರ್ಮಾ ಪಾಲಾಯಿತು.

ಸತತ ಎರಡನೇ ಸೋಲು
ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಎದುರು ಬೃಹತ್‌ ಮೊತ್ತ (286 ರನ್‌) ಕಲೆಹಾಕಿ ಗೆದ್ದಿದ್ದ ಎಸ್‌ಆರ್‌ಎಚ್‌ಗೆ ಇದು ಸತತ ಎರಡನೇ ಸೋಲು. ಎರಡನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ಎದುರು 7 ವಿಕೆಟ್‌ಗಳಿಂದ ಸೋತಿದ್ದ ಈ ತಂಡ, ಇದೀಗ 7 ವಿಕೆಟ್‌ಗಳ ಸೋಲು ಅನುಭವಿಸಿದೆ. ಮೂರೂ ಪಂದ್ಯಗಳು ಹೈದರಾಬಾದ್‌ನಲ್ಲೇ ನಡೆದಿರುವುದು ವಿಶೇಷ.
ಜಯದ ಓಟ ಮುಂದುವರಿಸಿದ ಡೆಲ್ಲಿ
ಡೆಲ್ಲಿ ತಂಡ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಎಲ್‌ಎಸ್‌ಜಿ ಎದುರು 1 ವಿಕೆಟ್‌ ಅಂತರದಿಂದ ಗೆದ್ದಿತ್ತು. ಹೀಗಾಗಿ, ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.