(ಚಿತ್ರ ಕೃಪೆ: ಐಪಿಎಲ್)
ಚೆನ್ನೈ: ವೇಗಿಗಳಾದ ಹರ್ಷಲ್ ಪಟೇಲ್ (28ಕ್ಕೆ 4) ಮತ್ತು ನಾಯಕ ಪ್ಯಾಟ್ ಕಮಿನ್ಸ್ (21ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಶುಕ್ರವಾರ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿತು.
ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 155 ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡವು ಇನ್ನೂ 14 ಎಸೆತ ಇರುವಂತೆ ಐದು ವಿಕೆಟ್‌ಗೆ ಗುರಿ ತಲುಪಿ ಸಂಭ್ರಮಿಸಿತು. ಇದು ಸನ್‌ರೈಸರ್ಸ್‌ಗೆ ಚೆನ್ನೈನಲ್ಲಿ ದಕ್ಕಿದ ಮೊದಲ ಗೆಲುವಾಗಿದೆ. ಈ ಜಯದೊಂದಿಗೆ ಹೈದರಾಬಾದ್ ತಂಡವು ಪ್ಲೇ ಆಫ್ ಕನಸನ್ನು ಜೀವಂತ ವಾಗಿರಿಸಿಕೊಂಡಿತು. ಮತ್ತೊಂದೆಡೆ ಚೆನ್ನೈ ತಂಡದ ಪ್ಲೇ ಆಫ್ ಆಸೆ ಬಹುತೇಕ ಕಮರಿತು.
ಹೈದರಾಬಾದ್ ತಂಡವು 54 ರನ್ ಗಳಿಸುವಷ್ಟರಲ್ಲಿ ಅಗ್ರ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ (0), ಟ್ರಾವಿಸ್ ಹೆಡ್ 19) ಮತ್ತು ಹೆನ್ರಿಚ್ ಕ್ಲಾಸೆನ್ (7) ಪೆವಿಲಿಯನ್ ಸೇರಿದ್ದರು. ಇಶಾನ್ ಕಿಶನ್ (44; 34ಎ) ಮತ್ತು ಅನಿಕೇತ್ ವರ್ಮಾ (19) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 36 (23ಎ) ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು.
ನಂತರದಲ್ಲಿ ಕಮಿಂದು ಮೆಂಡಿಸ್ (ಔಟಾಗದೇ 32; 22ಎ) ಮತ್ತು ನಿತೀಶ್ ಕುಮಾರ್ ರೆಡ್ಡಿ (ಔಟಾಗದೇ 19; 13ಎ) ಅವರು ಮುರಿಯದ ಆರನೇ ವಿಕೆಟ್‌ಗೆ 49 (31ಎ) ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಚೆನ್ನೈ ಪರ ನೂರ್ ಅಹಮ್ಮದ್ ಎರಡು ವಿಕೆಟ್ ಪಡೆದರು.
ಡಿವಾಲ್ಡ್ ಆಸರೆ: ಸನ್‌ರೈಸರ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ಆಯ್ಕೆಯನ್ನು ಸಮರ್ಥಿಸುವಂತೆ ಹರ್ಷಲ್ ಪಟೇಲ್ ಅವರು ಚೆನ್ನೈ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟು ಕೊಟ್ಟರು. ಅವರಿಗೆ ಕಮಿನ್ಸ್ ಕೂಡ ಸಾಥ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ 21 ವರ್ಷ ವಯಸ್ಸಿನ ಡಿವಾಲ್ಡ್ ಬ್ರೆವಿಸ್ (42;25ಎ, 4x1, 6x4) ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಚೆನ್ನೈ ತಂಡವನ್ನು ಪಾರು ಮಾಡಿದರು. ಹೀಗಾಗಿ 19.5 ಓವರ್‌ಗಳಲ್ಲಿ 154 ರನ್ ಗಳಿಸಿತು.
ವೇಗಿ ಮೊಹಮ್ಮದ್ ಶಮಿ ತಮ್ಮ ಮೊದಲ ಎಸೆತದಲ್ಲಿಯೇ ಆರಂಭಿಕ ಬ್ಯಾಟರ್ ಶೇಖ್ ರಶೀದ್ ಅವರ ವಿಕೆಟ್ ಗಳಿಸಿದರು. ಅಭಿಷೇಕ್ ಶರ್ಮಾ ಪಡೆದ ಚುರುಕಾದ ಕ್ಯಾಚ್‌ಗೆ ರಶೀದ್ ನಿರ್ಗಮಿಸಿದರು.
ಯುವ ಆಟಗಾರ ಆಯುಷ್ ಮ್ಹಾತ್ರೆ (30; 19ಎ) ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ಆಯುಷ್ ವಿಕೆಟ್ ಗಳಿಸಿದ ಪ್ಯಾಟ್ ಕಮಿನ್ಸ್ ಸಂಭ್ರಮಿಸಿದರು. ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ (6; 10ಎ) ಹಾಗೂ ನೂರ್ ಅಹಮದ್ ಅವರ ವಿಕೆಟ್‌ಗಳನ್ನೂ ಹರ್ಷಲ್ ತಮ್ಮದಾಗಿಸಿಕೊಂಡರು. ಧೋನಿ ಅವರಿಗೆ ಇದು ಒಟ್ಟಾರೆ 400ನೇ ಟಿ20 ಪಂದ್ಯವಾಗಿತ್ತು.
ಸಂಕ್ಷಿಪ್ತ ಸ್ಕೋರು:
ಚೆನ್ನೈ ಸೂಪರ್ ಕಿಂಗ್ಸ್: 19.5 ಓವರ್‌ಗಳಲ್ಲಿ 154 (ಆಯುಷ್ ಮ್ಹಾತ್ರೆ 30, ರವೀಂದ್ರ ಜಡೇಜ 21, ಡಿವಾಲ್ಡ್ ಬ್ರೆವಿಸ್ 42, ದೀಪಕ್ ಹೂಡಾ 22, ಪ್ಯಾಟ್ ಕಮಿನ್ಸ್ 21ಕ್ಕೆ2, ಜಯದೇವ್ ಉನದ್ಕತ್ 21ಕ್ಕೆ2, ಹರ್ಷಲ್ ಪಟೇಲ್ 28ಕ್ಕೆ4). ಸನ್‌ರೈಸರ್ಸ್ ಹೈದರಾಬಾದ್: 18.4 ಓವರ್‌ಗಳಲ್ಲಿ 5ಕ್ಕೆ 155 (ಇಶಾನ್ ಕಿಶನ್ 44, ಕಮಿಂದು ಮೆಂಡಿಸ್ ಔಟಾಗದೇ 32, ನಿತೀಶ್ ಕುಮಾರ್ ರೆಡ್ಡಿ ಔಟಾಗದೇ 19; ನೂರ್ ಅಹಮ್ಮದ್ 42ಕ್ಕೆ 2). ಪಂದ್ಯದ ಆಟಗಾರ: ಹರ್ಷಲ್ ಪಟೇಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.