ಅಹಮದಾಬಾದ್‌ನಲ್ಲಿ ಮಂಗಳವಾರ ಐಪಿಎಲ್ ಫೈನಲ್‌ನಲ್ಲಿ ಗೆದ್ದು ಪ್ರಶಸ್ತಿ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು
-ಪಿಟಿಐ ಚಿತ್ರ
ಅಹಮದಾಬಾದ್/ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ರಾತ್ರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಕಿರೀಟ ಧರಿಸುತ್ತಿದ್ದಂತೆಯೇ ದೇಶದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಉಕ್ಕಿ ಹರಿಯಿತು. ಹದಿನೆಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದ ಲಕ್ಷಾಂತರ ಜನರು ಬೀದಿಗಿಳಿದು ಸಂಭ್ರಮಿಸಿದರು. ಕುಣಿದರು, ಸಿಹಿ ಹಂಚಿದರು. ಬೆಳಗಿನ ಜಾವದವರೆಗೂ ‘ಆರ್‌ಸಿಬಿ..ಆರ್‌ಸಿಬಿ..‘ ಎಂಬ ಕೂಗುಗಳು ಪ್ರತಿಧ್ವನಿಸಿದವು.
ಐಪಿಎಲ್ ಶುರುವಾದಾಗಿನಿಂದಲೂ ಮೂರು ಸಲ ಫೈನಲ್ ತಲುಪಿದ್ದ ಆರ್‌ಸಿಬಿಗೆ ಪ್ರಶಸ್ತಿ ಒಲಿದಿರಲಿಲ್ಲ. ಆದರೆ ಈ ಸಲ ಕೈತಪ್ಪಲಿಲ್ಲ. ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿದ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿತು. ಈ ಹಿಂದೆ ಆರ್‌ಸಿಬಿಯಲ್ಲಿ ಆಡಿದ್ದ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರೂ ಕ್ರೀಡಾಂಗಣದಲ್ಲಿ ಹಾಜರಿದ್ದರು. ತಮ್ಮ ಪ್ರಿಯ ಗೆಳೆಯ ವಿರಾಟ್ ಕೊಹ್ಲಿ ಅವರನ್ನು ಅಪ್ಪಿ ಬಿಗಿದು ಅಭಿನಂದಿಸಿದರು. ಭಾವುಕರಾದ ಕೊಹ್ಲಿಯ ಕಂಗಳು ತೇವಗೊಂಡವು.
ಎರಡು ದಿನಗಳ ಹಿಂದಷ್ಟೇ ಎರಡನೇ ಕ್ವಾಲಿಫೈಯರ್‌ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಬ್ಬರಿಸಿದ ರೀತಿಯನ್ನು ನೋಡಿದವರಿಗೆ ಆರ್‌ಸಿಬಿಯ ಗೆಲುವು ಸುಲಭವಲ್ಲ ಎಂಬ ಭಾವ ಮೂಡಿತ್ತು. ಮಂಗಳವಾರ ರಾತ್ರಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ತೆಗೆದುಕೊಂಡಾಗಲೂ ಇದೇ ಸಂದೇಹ ಅಭಿಮಾನಿಗಳ ಮನದಲ್ಲಿ ಮನೆ ಮಾಡಿತ್ತು.
ಅದಕ್ಕೆ ತಕ್ಕಂತೆ ಪಂಜಾಬ್ ತಂಡದ ಕೈಲ್ ಜೆಮಿಸನ್ (48ಕ್ಕೆ3) ಹಾಗೂ ಎಡಗೈ ವೇಗಿ ಅರ್ಷದೀಪ್ ಸಿಂಗ್ (40ಕ್ಕೆ3) ಅವರು ಆರ್‌ಸಿಬಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಇದರ ನಡುವೆಯೂ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್‌ಗಳ ಮೊತ್ತ ದಾಖಲಿಸಿತು. ಪಂಜಾಬ್ ತಂಡದಲ್ಲಿರುವ ಪ್ರತಿಭಾವಂತ ಮತ್ತು ಇನ್‌ಫಾರ್ಮ್ ಬ್ಯಾಟರ್‌ಗಳಿಗೆ ಈ ಮೊತ್ತ ದೊಡ್ಡ ಸವಾಲಾಗಿರಲಿಲ್ಲ. ಆದರೆ ಆರ್‌ಸಿಬಿಯ ಸ್ಪಿನ್ನರ್ ಕೃಣಾಲ್ ಪಾಂಡ್ಯ (4–0–17–2) ಮತ್ತು ವೇಗಿ ಭುವನೇಶ್ವರ್ ಕುಮಾರ್ (4–0–38–2) ಕಿಂಗ್ಸ್‌ಗೆ ತಡೆಯೊಡ್ಡಿದರು.
ಪ್ರಭಸಿಮ್ರನ್ ಸಿಂಗ್ (26 ರನ್) ಮತ್ತು ಜೋಶ್ ಇಂಗ್ಲಿಸ್ (39 ರನ್) ಅವರ ವಿಕೆಟ್ ಗಳಿಸಿದ ಕೃಣಾಲ್ ಗೆಲುವಿನ ರೂವಾರಿಯಾದರು. ಶ್ರೇಯಸ್ ಅಯ್ಯರ್ (1 ರನ್) ಅವರಿಗೆ ರೊಮೆರಿಯೊ ಶೆಫರ್ಡ್ ಪೆವಿಲಿಯನ್ ದಾರಿ ತೋರಿಸಿದ್ದು ಮಹತ್ವದ ತಿರುವಾಯಿತು.
ಆದರೆ ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ದಿಟ್ಟ ಆಟವಾಡಿದ ಶಶಾಂಕ್ ಸಿಂಗ್ (ಅಜೇಯ 61; 30 ಎಸೆತ) ಕೊನೆಯ ಹಂತದಲ್ಲಿ ಅಬ್ಬರಿಸಿದರು. ಅದರಲ್ಲೂ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 29 ರನ್‌ಗಳು ಬೇಕಿದ್ದಾಗಲೂ ಅವರು ಕ್ರೀಸ್‌ನಲ್ಲಿದ್ದು ಭರವಸೆ ಮೂಡಿಸಿದ್ದರು. ಜೋಶ್ ಹ್ಯಾಜಲ್‌ವುಡ್ ಹಾಕಿದ ಆ ಓವರ್‌ನಲ್ಲಿ ಶಶಾಂಕ್ 3 ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆದರು. ಆದರೆ ಅವರ ಪ್ರಯತ್ನಕ್ಕೆ ಗೆಲುವು ಒಲಿಯಲಿಲ್ಲ. ಆದರೆ ಆರ್‌ಸಿಬಿ ಬಳಗದಲ್ಲಿ ಜಯದ ಸಂಭ್ರಮ ಗರಿಗೆದರಿತು.
ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿಯು ಅತ್ಯಂತ ಶಿಸ್ತಿನ ಆಟವಾಡಿತು. ಲೀಗ್ ಹಂತದ 14 ಪಂದ್ಯಗಳಲ್ಲಿ 9ರಲ್ಲಿ ಜಯಿಸಿದ್ದ ತಂಡವು 4ರಲ್ಲಿ ಸೋತಿತ್ತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಕ್ವಾಲಿಫೈಯರ್ ಪ್ರವೇಶಿಸಿತ್ತು. ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ಎದುರು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು. 9 ವರ್ಷಗಳಿಂದ ಪ್ರಶಸ್ತಿ ಸುತ್ತಿಗೆ ತಲುಪಿದ್ದ ಬೆಂಗಳೂರು ತಂಡವು ಕಿರೀಟ ಧರಿಸಿ ಮೆರೆಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿಗ್ಗಜ ಆಟಗಾರರು ನಾಯಕತ್ವ ವಹಿಸಿದ ಪರಂಪರೆಯೇ ಇದೆ. 2008 ರಿಂದ ಇಲ್ಲಿಯವರೆಗೂ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್, ಡೇನಿಯಲ್ ವೆಟೋರಿ, ಶೇನ್ ವಾಟ್ಸನ್, ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿ ಅವರಂತಹ ಖ್ಯಾತನಾಮರು ತಂಡವನ್ನು ಮುನ್ನಡೆಸಿದ್ದರು. ಅವರೆಲ್ಲರ ನಾಯಕತ್ವ ಮತ್ತು ಆಟದ ಬಲದಿಂದ ಆರ್‌ಸಿಬಿಯ ಬ್ರ್ಯಾಂಡ್ ಮುಗಿಲುಮುಟ್ಟಿತು. ಆದರೆ ಪ್ರಶಸ್ತಿ ಕನಸು ಮಾತ್ರ ಕೈಗೂಡಿರಲಿಲ್ಲ. ಆದರೆ ಇದೇ ವರ್ಷ ನಾಯಕರಾಗಿ ನೇಮಕವಾದ ರಜತ್ ಪಾಟೀದಾರ್ ಅವರಿಗೆ ಅದೃಷ್ಟ ಒಲಿಯಿತು. ವಿರಾಟ್ ಕೊಹ್ಲಿಯಂತಹ ದಿಗ್ಗಜ ಮತ್ತು ಯುವ ಆಟಗಾರರ ದಂಡಿನೊಂದಿಗೆ ಪ್ರಶಸ್ತಿ ಕನಸು ನನಸು ಮಾಡಿದರು.
ಮೈದಾನದಲ್ಲಿ ಆನಂದಬಾಷ್ಟ ಸುರಿಸಿದ ವಿರಾಟ್ ಕೊಹ್ಲಿ
ಆರ್‌ಸಿಬಿ ಆಟಗಾರರನ್ನು ಅಭಿನಂದಿಸಿದ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 9ಕ್ಕೆ 190 (20 ಓವರ್‌ಗಳಲ್ಲಿ)
ಸಾಲ್ಟ್ ಸಿ ಅಯ್ಯರ್ ಬಿ ಜೆಮಿಸನ್ 16 (9ಎ, 4x2, 6x1)
ಕೊಹ್ಲಿ ಸಿ ಮತ್ತು ಬಿ ಒಮರ್‌ಜೈ 43 (35ಎ, 4x3)
ಮಯಂಕ್ ಸಿ ಅರ್ಷದೀಪ್ ಬಿ ಚಾಹಲ್ 24 (18ಎ, 4x2, 6x1)
ಪಾಟೀದಾರ್ ಎಲ್‌ಬಿಡಬ್ಲ್ಯು ಬಿ ಜೆಮಿಸನ್ 26 (16ಎ, 4x1, 6x2)
ಲಿವಿಂಗ್‌ಸ್ಟೋನ್ ಎಲ್‌ಬಿಡಬ್ಲ್ಯು ಬಿ ಜೆಮಿಸನ್ 25 (15ಎ, 6x2)
ಜಿತೇಶ್ ಬಿ ವೈಶಾಖ 24 (10ಎ, 4x2, 6x2)
ಶೆಫರ್ಡ್ ಎಲ್‌ಬಿಡಬ್ಲ್ಯು ಬಿ ಅರ್ಷದೀಪ್ 17 (9ಎ, 4x1, 6x1)
ಕೃಣಾಲ್ ಸಿ ಅಯ್ಯರ್ ಬಿ ಅರ್ಷದೀಪ್ 4 (5ಎ)
ಭುವನೇಶ್ವರ್ ಸಿ ಆರ್ಯ ಬಿ ಅರ್ಷದೀಪ್ 1 (2ಎ)
ಯಶ್ ದಯಾಳ್ ಔಟಾಗದೇ 1 (1ಎ)
ಇತರೆ: 9 (ವೈಡ್ 9)
ವಿಕೆಟ್ ಪತನ: 1-18 (ಫಿಲ್
ಸಾಲ್ಟ್, 1.4), 2-56 (ಮಯಂಕ್ ಅಗರವಾಲ್, 6.2), 3-96 (ರಜತ್ ಪಾಟೀದಾರ್, 10.5), 4-131
(ವಿರಾಟ್ ಕೊಹ್ಲಿ, 14.5), 5-167 (ಲಿಯಾಮ್ ಲಿವಿಂಗ್‌ಸ್ಟೋನ್, 16.5), 6-171 (ಜಿತೇಶ್ ಶರ್ಮಾ, 17.4), 7-188 (ರೊಮಾರಿಯೊ ಶೆಫರ್ಡ್, 19.2), 8-189 (ಕೃಣಾಲ್ ಪಾಂಡ್ಯ, 19.4), 9-190 (ಭುವನೇಶ್ವರ್ ಕುಮಾರ್, 19.6)
ಬೌಲಿಂಗ್: ಅರ್ಷದೀಪ್ ಸಿಂಗ್ 4–0–40–3, ಕೈಲ್ ಜಿಮಿಸನ್ 4–0–48–3, ಅಜ್ಮತ್‌ವುಲ್ಲಾ ಒಮರ್‌ಜೈ 4–0–35–1, ವೈಶಾಖ ವಿಜಯಕುಮಾರ್ 4–0–30–1, ಯಜುವೇಂದ್ರ ಚಾಹಲ್ 4–0–37–1
ಪಂಜಾಬ್ ಕಿಂಗ್ಸ್ 7ಕ್ಕೆ 184 (20 ಓವರ್‌ಗಳಲ್ಲಿ)
ಪ್ರಿಯಾಂಶ್ ಸಿ ಸಾಲ್ಟ್ ಬಿ ಹ್ಯಾಜಲ್‌ವುಡ್ 24 (19ಎ, 4x4)
ಪ್ರಭಸಿಮ್ರನ್ ಸಿಂಗ್ ಸಿ ಭುವನೇಶ್ವರ್ ಬಿ ಕೃಣಾಲ್ 26 (22ಎ, 6x2)
ಇಂಗ್ಲಿಸ್ ಸಿ ಲಿವಿಂಗ್‌ಸ್ಟೋನ್ ಬಿ ಕೃಣಾಲ್ 39 (23ಎ, 4x1, 6x4)
ಶ್ರೇಯಸ್ ಸಿ ಸುಯಶ್ ಬಿ ಶೆಫರ್ಡ್ 1 (2ಎ)
ವಧೇರಾ ಸಿ ಕೃಣಾಲ್ ಬಿ ಭುವನೇಶ್ವರ್ 15 (18ಎ, 6x1)
ಶಶಾಂಕ್ ಸಿಂಗ್ ಔಟಾಗದೇ 61 (30ಎ, 4x3, 6x6)
ಮಾರ್ಕಸ್ ಸಿ ಯಶ್ ಬಿ ಭುವನೇಶ್ವರ್ 6 (2ಎ, 6x1)
ಒಮರ್‌ಜೈ ಸಿ ಭಾಂಡಗೆ ಬಿ ದಯಾಳ್ 1 (2ಎ)
ಕೈಲ್ ಜೆಮಿಸನ್ ಔಟಾಗದೇ 0 (2ಎ)
ಇತರೆ: 11 (ಲೆಗ್‌ಬೈ 8, ವೈಡ್ 3)
ವಿಕೆಟ್ ಪತನ: 1-43 (ಪ್ರಿಯಾಂಶ್ ಆರ್ಯ, 4.6), 2-72 (ಪ್ರಭಸಿಮ್ರನ್ ಸಿಂಗ್, 8.3), 3-79 (ಶ್ರೇಯಸ್ ಅಯ್ಯರ್, 9.4), 4-98 (ಜೋಶ್ ಇಂಗ್ಲಿಸ್, 12.1), 5-136 (ನೆಹಲ್ ವಧೇರಾ, 16.2), 6-142 (ಮಾರ್ಕಸ್ ಸ್ಟೊಯಿನಿಸ್, 16.4), 7-145 (ಅಜ್ಮತ್‌ವುಲ್ಲಾ ಒಮರ್‌ಜೈ, 17.2)
ಬೌಲಿಂಗ್: ಭುವನೇಶ್ವರ್ ಕುಮಾರ್ 4–0–38–2, ಯಶ್ ದಯಾಳ್ 3–0–18–1, ಹ್ಯಾಜಲ್‌ವುಡ್ 4–0–54–1, ಕೃಣಾಲ್ ಪಾಂಡ್ಯ 4–0–17–2, ಸುಯಶ್ ಶರ್ಮಾ 2–0–19–0, ರೊಮಾರಿಯೊ ಶೆಫರ್ಡ್ 3–0–30–1
ಪಂದ್ಯದ ಆಟಗಾರ: ಕೃಣಾಲ್ ಪಾಂಡ್ಯ
ವಿಕೆಟ್ ಪಡೆದ ಸಂಭ್ರಮದಲ್ಲಿ ಕೃಣಾಲ್ ಪಾಂಡ್ಯ –ಪಿಟಿಐ ಚಿತ್ರ
ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ
ಎಬಿ ಡಿವಿಲಿಯರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.