ರಿಷಭ್ ಪಂತ್, ಶುಭಮನ್ ಗಿಲ್
(ಪಿಟಿಐ ಚಿತ್ರ)
ಅಹಮದಾಬಾದ್: ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಗುಜರಾತ್ ಟೈಟನ್ಸ್ ತಂಡವು ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಲೀಗ್‌ನಲ್ಲಿ 12 ಪಂದ್ಯಗಳಿಂದ 18 ಅಂಕಗಳನ್ನು ಗಳಿಸಿರುವ ಗುಜರಾತ್, ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.
ಗುಜರಾತ್ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಸಾಯಿ ಸುದರ್ಶನ್ (617 ರನ್), ನಾಯಕ ಶುಭಮನ್ ಗಿಲ್ (601 ರನ್) ಮತ್ತು ಜೋಸ್ ಬಟ್ಲರ್ (500 ರನ್) ಅವರು ಅಮೋಘ ಲಯದಲ್ಲಿದ್ದಾರೆ. ಈ ಮೂವರೂ ಸೇರಿ ಒಟ್ಟು 16 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಸಾಯಿ ಮತ್ತು ಗಿಲ್ ಅವರಿಬ್ಬರೇ ಇನ್ನೂರಕ್ಕೂ ಹೆಚ್ಚು ರನ್‌ಗಳ ಮೊತ್ತದ ಗುರಿಯನ್ನು ಸಾಧಿಸಿದರು. ಆ ಪಂದ್ಯದಲ್ಲಿ ಸಾಯಿ ಅವರು ಅಜೇಯ ಶತಕ ಗಳಿಸಿದ್ದರು.
ತಂಡದ ಬೌಲಿಂಗ್ ವಿಭಾಗವೂ ಉತ್ತಮವಾಗಿದೆ. ಕನ್ನಡಿಗ ಪ್ರಸಿದ್ಧಕೃಷ್ಣ (21 ವಿಕೆಟ್) ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್. ವೇಗಿ ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಆರ್. ಸಾಯಿಕಿಶೋರ್ ತಲಾ 15 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಕೂಡ ತಂಡಕ್ಕೆ ಮರಳಿದ್ದಾರೆ.
ಲಖನೌ ತಂಡದ ಬ್ಯಾಟರ್‌ಗಳಿಗೆ ಗುಜರಾತ್ ಬೌಲರ್‌ಗಳು ಕಠಿಣ ಸವಾಲೊಡ್ಡಬಲ್ಲರು. ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿರುವ ಲಖನೌ ತಂಡವು ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್‌ನಲ್ಲಿ ಮಿಚೆಲ್ ಮಾರ್ಷ್, ಏಡನ್ ಮರ್ಕರಂ ಮತ್ತು ನಿಕೊಲಸ್ ಪೂರನ್ ಅವರ ಮೇಲೆ ತಂಡವು ಹೆಚ್ಚು ಅವಲಂಬನೆಯಾಗಿದೆ. ನಾಯಕ ರಿಷಭ್ ಪಂತ್ ಅವರು ಈ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ.
ವೇಗಿಗಳಾದ ಆವೇಶ್ ಖಾನ್ ಮತ್ತು ಅಕಾಶ್ ದೀಪ್ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಠಿ ಅವರು ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಮಾಡಿಕೊಂಡ ಜಟಾಪಟಿಯಲ್ಲಿ ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಆದ್ದರಿಂದ ಸ್ಪಿನ್ ಬೌಲಿಂಗ್ ಹೊಣೆ ರವಿ ಬಿಷ್ಣೋಯಿ ಅವರ ಹೆಗಲಿಗೆ ಬೀಳಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಲಖನೌ ತಂಡದ ಏಡನ್ ಮರ್ಕರಂ ಮತ್ತು ನಿಕೊಲಸ್ ಪೂರನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.