ಶ್ರೇಯಸ್ ಅಯ್ಯರ್
ಅಹಮದಾಬಾದ್: ಕನ್ನಡಿಗ ವೈಶಾಖ ವಿಜಯಕುಮಾರ್ ಹಾಕಿದ ಮೂರು ಓವರ್‌ಗಳು ಪಂಜಾಬ್ ಕಿಂಗ್ಸ್ ತಂಡದ ಸೋಲಿನ ಆತಂಕವನ್ನು ದೂರ ಮಾಡಿದವು. ಅದರೊಂದಿಗೆ ಶ್ರೇಯಸ್ ಅಯ್ಯರ್ ಮತ್ತು ಶಶಾಂಕ್ ಸಿಂಗ್ ಅವರ ಭರ್ಜರಿ ಜೊತೆಯಾಟವೂ ವ್ಯರ್ಥವಾಗಲಿಲ್ಲ.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಕಿಂಗ್ಸ್ ತಂಡವು 11 ರನ್‌ಗಳಿಂದ ಗುಜರಾತ್ ಟೈಟನ್ಸ್ ಎದುರು ಜಯಿಸಿತು. 244 ರನ್‌ಗಳ ಗುರಿ ಬೆನ್ನಟ್ಟಿದ್ದ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಭರ್ಜರಿ ಆರಂಭವನ್ನೇ ಮಾಡಿತ್ತು. 14 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 169 ರನ್ ಗಳಿಸಿತ್ತು. ಕ್ರೀಸ್‌ನಲ್ಲಿ ಜೋಸ್ ಬಟ್ಲರ್ ಮತ್ತು ಶೆರ್ಫೈನ್ ರುದರ್‌ಫೋರ್ಡ್ ಉತ್ತಮ ಲಯದಲ್ಲಿದ್ದರು.
ನಂತರದ ಆರು ಓವರ್‌ಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಆತಿಥೇಯರ ಕೈಯಿಂದ ಗೆಲುವು ಕೈಜಾರಿತು. ಅದುವರೆಗೆ ಆರು ಬೌಲರ್‌ಗಳನ್ನು ಗುಜರಾತ್ ತಂಡದ ಬ್ಯಾಟರ್‌ಗಳು ದಂಡಿಸಿದ್ದರು. ಆದರೆ 15ನೇ ಓವರ್‌ನಲ್ಲಿ ನಾಯಕ ಶ್ರೇಯಸ್ ಅವರು ವೈಶಾಖ ಅವರಿಗೆ ಚೆಂಡು ನೀಡಿದರು. ಪ್ರಿಯಾಂಶ್ ಆರ್ಯ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ವೈಶಾಖ ಫಲಿತಾಂಶದ ಮೇಲೆ ಪರಿಣಾಮ ಬೀರಿದರು.ತಮ್ಮ ಮೊದಲ 2 ಓವರ್‌ಗಳಲ್ಲಿ ಕೇವಲ 10 ರನ್ ಬಿಟ್ಟುಕೊಟ್ಟರು. ವೈಡ್ ಮಿತಿಯ ಗೆರೆ ಮತ್ತು ಆಫ್‌ಸ್ಟಂಪ್ ಮಧ್ಯೆ ಎಸೆತಗಳನ್ನು ಹದವಾದ ವೇಗದಲ್ಲಿ ಪ್ರಯೋಗಿಸಿದ ವೈಶಾಖ ಉಪಯುಕ್ತ ಕಾಣಿಕೆ ನೀಡಿದರು. ಆದರೆ ತಮ್ಮ ಮೂರನೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಿಟ್ಟುಕೊಟ್ಟರು. ತಮ್ಮ ಇಡೀ ಸ್ಪೆಲ್‌ನಲ್ಲಿ 5 ವೈಡ್ ಹಾಕಿದರು.
ಇನ್ನೊಂದು ಬದಿಯಿಂದ ಮಾರ್ಕೊ ಯಾನ್ಸೆನ್ ಮತ್ತು ಆರ್ಷದೀಪ್ ಅವರು ಕೂಡ ಬ್ಯಾಟರ್‌ಗಳಿಗೆ ತಡೆಯೊಡ್ಡುವ ಪ್ರಯತ್ನ ಮಾಡಿದರು. 18ನೇ ಓವರ್‌ನಲ್ಲಿ ಯಾನ್ಸೆನ್ ಎಸೆತದಲ್ಲಿ ಬಟ್ಲರ್ ಔಟಾದರು. ಆದರೆ ರುದರ್‌ಫೋರ್ಡ್ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. ಕೊನೆಯ ಓವರ್‌ನಲ್ಲಿ 27 ರನ್ ಗಳಿಸುವ ಅವಕಾಶವಿತ್ತು. ಅರ್ಷದೀಪ್ ಸಿಂಗ್ ಅದಕ್ಕೆ ಆಸ್ಪದ ಕೊಡಲಿಲ್ಲ.
ಇದರಿಂದಾಗಿ ಗುಜರಾತ್ ತಂಡದ ಆರಂಭಿಕರಾದ ಸಾಯಿ ಸುದರ್ಶನ್ (74; 41ಎ), ಶುಭಮನ್ ಗಿಲ್ (33; 14ಎ), ಬಟ್ಲರ್ (54; 33ಎ) ಹಾಗೂ ರುದರ್‌ಫೋರ್ಡ್ (46 ರನ್) ಅವರ ಆಟಕ್ಕೆ ಗೆಲುವಿನ ಫಲ ಸಿಗಲಿಲ್ಲ.
ಶ್ರೇಯಸ್–ಶಶಾಂಕ್ ಆರ್ಭಟ
ಅಹಮದಾಬಾದ್: ಒಂಬತ್ತು ಸಿಕ್ಸರ್ ಸಿಡಿಸಿದ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಆಡಿದ ಮೊದಲ ಪಂದ್ಯದಲ್ಲಿಯೇ ಭರ್ಜರಿ ಆರಂಭ ಮಾಡಿದರು. ಶ್ರೇಯಸ್ ಮತ್ತು ಶಶಾಂಕ್ ಸಿಂಗ್ ಅವರು ಇನಿಂಗ್ಸ್‌ನ ಕೊನೆಯ 28 ಎಸೆತಗಳಲ್ಲಿ 81 ರನ್ ಸೂರೆ ಮಾಡುವ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ ಬೃಹತ್ ಗುರಿಯೊಡ್ಡಿದರು.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡದ ಬೌಲರ್‌ಗಳನ್ನು ದಂಡಿಸಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 243 ರನ್ ಗಳಿಸಿತು. ಶ್ರೇಯಸ್ (ಅಜೇಯ 97; 42ಎ, 4X5, 6X9) ಮತ್ತು ಶಶಾಂಕ್ ಸಿಂಗ್ (ಅಜೇಯ 44; 16ಎ, 4X6, 6X2) ಅಬ್ಬರಿಸಿದರು.
ಟಾಸ್ ಗೆದ್ದ ಆತಿಥೇಯ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಿಯಾಂಶ್ ಆರ್ಯ ಉತ್ತಮ ಆರಂಭ ನೀಡಿದರು. ನಾಲ್ಕನೇ ಓವರ್‌ನಲ್ಲಿ ಪ್ರಭಸಿಮ್ರನ್ ಸಿಂಗ್ ಔಟಾದಾಗ ಶ್ರೇಯಸ್ ಕ್ರೀಸ್‌ಗೆ ಬಂದರು. ತಾವೆದುರಿಸಿದ ಮೊದಲ ಎಸೆತದಿಂದಲೇ ಬೀಸಾಟವಾಡಿದರು. ಅವರು 30 ಎಸೆತಗಳಲ್ಲಿ 64 ರನ್ ಗಳಿಸುವಷ್ಟರಲ್ಲಿ ತಂಡವು 164 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಶ್ರೇಯಸ್ ಜೊತೆಗೂಡಿದ ಶಶಾಂಕ್ ಸಿಂಗ್ ಇನಿಂಗ್ಸ್ ಚಿತ್ರಣವನ್ನೇ ಬದಲಿಸಿದರು.
ಇಬ್ಬರೂ ಬ್ಯಾಟರ್‌ಗಳು ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು. ಇದರಲ್ಲಿ ಶಶಾಂಕ್ ಪಾಲು 44 ರನ್‌ಗಳು. ಶ್ರೇಯಸ್ ಕೂಡ ಬೌಂಡರಿ, ಸಿಕ್ಸರ್ ಸಿಡಿಸುತ್ತ ಶತಕದಂಚಿಗೆ ಬಂದು ನಿಂತರು. ಕೊನೆಯ ಓವರ್ ಆರಂಭವಾದಾಗ ಶ್ರೇಯಸ್ (97 ರನ್) ನಾನ್ ಸ್ಟ್ರೈಕರ್ ತುದಿಯಲ್ಲಿ ದ್ದರು. ಶಶಾಂಕ್ ಒಂದು ರನ್ ಪಡೆದು ಶ್ರೇಯಸ್‌ಗೆ ಬ್ಯಾಟಿಂಗ್ ನೀಡುವ ನಿರೀಕ್ಷೆ ಗರಿಗೆದರಿತ್ತು. ಆದರೆ ಹಾಗಾಗಲಿಲ್ಲ.
ಮೊಹಮ್ಮದ್ ಸಿರಾಜ್ ಹಾಕಿದ ಕೊನೆಯ ಓವರ್‌ನಲ್ಲಿ ಐದು ಬೌಂಡರಿಗಳನ್ನು ಚಚ್ಚಿದ ಶಶಾಂಕ್, ಇನ್ನೊಂದು ಎಸೆತದಲ್ಲಿ 2 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಕೂಡ ಶಶಾಂಕ್ ಅವರಿಗೆ ಬೌಂಡರಿ ಹೊಡೆಯಲು ಹುರಿದುಂಬಿಸಿದರು.
ಆರ್ಯ ಮಿಂಚು: ಇನಿಂಗ್ಸ್‌ನ ಮೊದಲ 3 ಓವರ್‌ಗಳಲ್ಲಿಯೇ ಗಿಲ್ ನಿರ್ಧಾರ ತಪ್ಪೆಂದು ತೋರಿಸುವ ಕಾರ್ಯವನ್ನು ಆರಂಭಿಕ ಜೋಡಿ ಪ್ರಿಯಾಂಶ್ ಆರ್ಯ (47; 23ಎ, 4X7, 6X2) ಮತ್ತು ಪ್ರಭಸಿಮ್ರನ್ ಸಿಂಗ್ (5; 8ಎ) ಮಾಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 28 ರನ್ ಸೇರಿಸಿದರು. ಈ ವರ್ಷ ಗುಜರಾತ್ ತಂಡದಲ್ಲಿ ಸ್ಥಾನ ಪಡೆದಿರುವ (ಈ ಹಿಂದೆ ಆರ್‌ಸಿಬಿ
ಯಲ್ಲಿದ್ದರು) ವೇಗಿ ಮೊಹಮ್ಮದ್ ಸಿರಾಜ್ ಅವರ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್‌ಗೆ ಸಿಕ್ಸರ್ ಎತ್ತಿದ ಆರ್ಯ ನಂತರದ ಎಸೆತವನ್ನು ಬೌಂಡರಿಗೆ ಕಳಿಸಿದರು. ಆದರೆ ನಾಲ್ಕನೇ ಓವರ್ ಹಾಕಿದ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಸಿಂಗ್ ವಿಕೆಟ್ ಪತನವಾಯಿತು.
ಆಗ ಕ್ರೀಸ್‌ಗೆ ಬಂದ ಶ್ರೇಯಸ್, ಮನಮೋಹಕ ಡ್ರೈವ್ ಮೂಲಕ ಬೌಂಡರಿ ಗಳಿಸಿ ಖಾತೆ ತೆರೆದರು. ದಕ್ಷಿಣ ಆಫ್ರಿಕಾ ವೇಗಿಯ ಇನ್ನೊಂದು ಎಸೆತವನ್ನು ಫ್ಲಿಕ್ ಮಾಡಿ ಸಿಕ್ಸರ್‌ಗೆತ್ತಿದರು.
ಇನ್ನೊಂದೆಡೆ 24 ವರ್ಷ ವಯಸ್ಸಿನ ಆರ್ಯ ಅವರು ಅರ್ಷದ್ ಖಾನ್ ಹಾಕಿದ ಐದನೇ ಓವರ್‌ನಲ್ಲಿ ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿದರು. 21 ರನ್‌ಗಳು ಹರಿದುಬಂದವು. ಅವರು ಹೊಡೆದ ಒಂದು ಚೆಂದದ ನೇರಡ್ರೈವ್ ಅಂಪೈರ್ ಪಕ್ಕದಿಂದ ವೇಗವಾಗಿ ಬೌಂಡರಿಗೆರೆಯತ್ತ ಉರುಳಿತು. ನಂತರದ ಓವರ್‌ನಲ್ಲಿ ರಬಾಡಾ ಎಸೆತವನ್ನೂ ಬೌಂಡರಿಗೆರೆ ದಾಟಿಸಿದರು. ಇದರಿಂದಾಗಿ ಪವರ್‌ಪ್ಲೇನಲ್ಲಿ 73 ರನ್‌ಗಳು ಸೇರಿದವು.
ಈ ಹಂತದಲ್ಲಿ ಸ್ಪಿನ್ನರ್ ರಶೀದ್ ಖಾನ್‌ಗೆ ಚೆಂಡು ನೀಡಿದ ಶುಭಮನ್ ತಂತ್ರ ಫಲಿಸಿತು. ಆರ್ಯ ಆಟಕ್ಕೆ ಕಡಿವಾಣ ಹಾಕಿದ ರಶೀದ್ ಸಂಭ್ರಮಿಸಿದರು. ಸ್ಪಿನ್ನರ್ ಸಾಯಿಕಿಶೋರ್ (30ಕ್ಕೆ3) ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.