ಅರ್ಧಶತಕ ಗಳಿಸಿ ಸಂಭ್ರಮಿಸಿದ ಕೆ.ಎಲ್. ರಾಹಲ್ (ಒಳ ಚಿತ್ರಗಳಲ್ಲಿ ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ)
ಪಿಟಿಐ ಚಿತ್ರಗಳು
ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ವೇಗವಾಗಿ 5 ಸಾವಿರ ರನ್ ಗಳಿಸಿದ ಆಟಗಾರ ಎಂಬ ಸಾಧನೆಯನ್ನು ಕನ್ನಡಿಗ ಕೆ.ಎಲ್. ರಾಹುಲ್ ಮಾಡಿದರು.
ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅವರು, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದ ವೇಳೆ ಈ ದಾಖಲೆ ಬರೆದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಗಳಿಸಿತ್ತು. ಈ ಗುರಿಯನ್ನು ಡೆಲ್ಲಿ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಪೊರೇಲ್ (51 ರನ್) ಹಾಗೂ ರಾಹುಲ್ (ಅಜೇಯ 57 ರನ್) ಅರ್ಧಶತಕ ಗಳಿಸಿದರೆ, ನಾಯಕ ಅಕ್ಷರ್ ಪಟೇಲ್ ಔಟಾಗದೆ 34 ರನ್ ಗಳಿಸಿದರು.
ಇದರೊಂದಿಗೆ, ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿರುವ ಡೆಲ್ಲಿಗೆ 6ನೇ ಗೆಲುವು ಒಲಿಯಿತು. ಲಖನೌ, 9 ಪಂದ್ಯಗಳಲ್ಲಿ ನಾಲ್ಕನೇ ಸೋಲು ಅನುಭವಿಸಿತು. ಈ ತಂಡಗಳು ಪ್ರಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 5ನೇ ಸ್ಥಾನಗಳಲ್ಲಿವೆ.
ರಾಹುಲ್ ದಾಖಲೆ
ಐಪಿಎಲ್‌ನಲ್ಲಿ ಈವರೆಗೆ 139 ಪಂದ್ಯಗಳ 130 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ರಾಹುಲ್, 4 ಶತಕ ಮತ್ತು 40 ಅರ್ಧಶತಕ ಸಹಿತ 5,006 ರನ್ ಕಲೆಹಾಕಿದ್ದಾರೆ. 135ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುವ ಅವರರ ಬ್ಯಾಟಿಂಗ್ ಸರಾಸರಿ 46.35.
ಈವರೆಗೆ ವೇಗವಾಗಿ 5 ಸಹಸ್ರ ರನ್ ಗಳಿಸಿದ ದಾಖಲೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ಹೆಸರಲ್ಲಿತ್ತು. ಅವರು 135 ಇನಿಂಗ್ಸ್‌ಗಳಲ್ಲಿ ಇಷ್ಟು ರನ್ ಗಳಿಸಿದ್ದರು. ಭಾರತದ ವಿರಾಟ್ ಕೊಹ್ಲಿ 157 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ (161 ಇನಿಂಗ್ಸ್) ಹಾಗೂ ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ (168 ಇನಿಂಗ್ಸ್) ನಂತರದ ಸ್ಥಾನಗಳಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.