ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ
(ಚಿತ್ರ: ಎಕ್ಸ್ ಸ್ಕ್ರೀನ್‌ಶಾಟ್)
ಬೆಂಗಳೂರು: ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.
ಈ ಪಂದ್ಯದಲ್ಲಿ ಆರ್‌ಸಿಬಿ ಕಪ್ತಾನ ರಜತ್ ಪಾಟೀದಾರ್ ನಾಯಕತ್ವದ ಕುರಿತು ವಿರಾಟ್ ಕೊಹ್ಲಿ ಮೈದಾನದಲ್ಲೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂಬುದರ ಕುರಿತು ವರದಿಯಾಗಿದೆ.
ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿವೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಬಳಿಕ ಆರ್‌ಸಿಬಿ ಕ್ಷೇತ್ರರಕ್ಷಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಬೌಂಡರಿ ಗೆರೆ ಬಳಿ ಆರ್‌ಸಿಬಿ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಬಳಿ, ಕೊಹ್ಲಿ ಕೆಲವೊಂದು ವಿಚಾರಗಳ ಕುರಿತು ಅಸಮಾಧಾನ ತೋಡಿಕೊಳ್ಳುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಆದರೆ ಕೊಹ್ಲಿ ಅಸಮಾಧಾನಕ್ಕಿರುವ ನೈಜ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಐಪಿಎಲ್ 18ನೇ ಆವೃತ್ತಿಯ ಆರಂಭದಲ್ಲಿ ರಜತ್ ಪಾಟೀದಾರ್ ಅವರಿಗೆ ನಾಯಕತ್ವ ವಹಿಸಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಪಾಟೀದಾರ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ವಿರಾಟ್ ಹೇಳಿಕೊಂಡಿದ್ದರು.
ಸ್ಥಳೀಯ ನೆಚ್ಚಿನ ಆಟಗಾರ ಕೆ.ಎಲ್. ರಾಹುಲ್ ಅಬ್ಬರದ ನೆರವಿನಿಂದ ಡೆಲ್ಲಿ ತಂಡವು ಆರ್‌ಸಿಬಿ ವಿರುದ್ಧ ಆರು ವಿಕೆಟ್ ಅಂತರದ ಜಯ ಗಳಿಸಿತ್ತು. ರಾಹುಲ್ 53 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.