ADVERTISEMENT

IPL | ರಿಷಭ್ ಶತಕ, ಮಾರ್ಷ್‌ ಫಿಫ್ಟಿ: RCB ಗೆಲುವಿಗೆ 228 ರನ್ ಗುರಿ ನೀಡಿದ LSG

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2025, 16:07 IST
Last Updated 27 ಮೇ 2025, 16:07 IST
<div class="paragraphs"><p>ರಿಷಭ್ ಪಂತ್ ಅವರ ಬ್ಯಾಟಿಂಗ್ ವೈಖರಿ</p></div>

ರಿಷಭ್ ಪಂತ್ ಅವರ ಬ್ಯಾಟಿಂಗ್ ವೈಖರಿ

   

–ಪಿಟಿಐ ಚಿತ್ರ

ಲಖನೌ: ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಇಂದು (ಮಂಗಳವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಖನೌ ಸೂಪರ್‌ ಜೈಂಟ್ಸ್ ಬೃಹತ್‌ ಮೊತ್ತ ಪೇರಿಸಿದೆ.

ADVERTISEMENT

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡವು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್‌ ಗಳಿಸಿದೆ.

ಲಖನೌ ತಂಡದ ನಾಯಕ ರಿಷಭ್ ಪಂತ್ ಔಟಾಗದೆ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ ಸಹಿತ ಅಮೋಘ ಶತಕ (118 ರನ್‌) ಸಾಧನೆ ಮಾಡಿದರೆ, ಇತ್ತ ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ ಅವರು 37 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ ಸಹಿತ 67 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಮ್ಯಾಥ್ಯೂ ಬ್ರೀಟ್ಜ್‌ಕೆ 14 ರನ್, ನಿಕೋಲಸ್ ಪೂರನ್ 13 ರನ್ ಗಳಿಸಿದ್ದಾರೆ.

ಆರ್‌ಸಿಬಿ ಪರ ಭುವನೇಶ್ವರ ಕುಮಾರ್, ನುವಾನ್ ತುಷಾರ, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.

ಆರ್‌ಸಿಬಿ ತಂಡಕ್ಕೆ ಈಗ ಐ‍ಪಿಎಲ್‌ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶ ಒದಗಲಿದ್ದು, ಜಿತೇಶ್ ಶರ್ಮಾ ಪಡೆಯು ಲಖನೌ ವಿರುದ್ಧ ಗೆಲುವು ಸಾಧಿಸುವುದು ಬಹಳ ಮಹತ್ವದ್ದಾಗಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಪಂಜಾಬ್‌ ಕಿಂಗ್ಸ್‌ ಅಗ್ರಸ್ಥಾನಕ್ಕೇರಿದೆ. ಲಖನೌ ವಿರುದ್ಧ ಪಂದ್ಯ ಗೆದ್ದಲ್ಲಿ ಆರ್‌ಸಿಬಿಗೆ ಮೊದಲ ಕ್ವಾಲಿಫೈಯರ್‌ ಸ್ಥಾನ ಖಚಿತವಾಗಲಿದೆ. ಗುಜರಾತ್‌ (18) ತಂಡ ಸತತ ಎರಡು ಪಂದ್ಯ ಸೋತಿರುವ ಕಾರಣ ಆರ್‌ಸಿಬಿಗೆ ಮೊದಲೆರಡು ಸ್ಥಾನ ಅವಕಾಶ ಜೀವಂತವಾಗಿದೆ.

‌ಪ್ರಮುಖ ಪಂದ್ಯಗಳಲ್ಲಿ ಎಡವಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಆತಿಥೇಯರು (ಲಖನೌ ತಂಡ) ಗೆಲುವಿನೊಡನೆ ಅಭಿಯಾನ ಮುಗಿಸಲು ಕಾತರರಾಗಿದ್ದಾರೆ. ಇನ್ನೊಂದು ಕಡೆ 2016ರ ನಂತರ ಆರ್‌ಸಿಬಿ ಮೊದಲ ಬಾರಿ ಕ್ವಾಲಿಫೈಯರ್‌–1ಕ್ಕೆ ಅರ್ಹತೆ ಪಡೆಯುವ ಹಾದಿಯಲ್ಲಿದೆ.

ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್–1ರಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಸೋತ ತಂಡ ಕ್ವಾಲಿಫೈಯರ್‌–2ರಲ್ಲಿ ಎಲಿಮಿನೇಟರ್‌ ಪಂದ್ಯದ ವಿಜೇತರನ್ನು ಎದುರಿಸಬೇಕಾಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಹೀಗಾಗಿ ಈ ಪ್ರಮುಖ ಪಂದ್ಯದಲ್ಲಿ ಎಡವದಂತೆ ಆರ್‌ಸಿಬಿ ಎಚ್ಚರಿಕೆ ವಹಿಸಬೇಕಾಗಿದೆ.

ಸದ್ಯ 17 ಪಾಯಿಂಟ್ಸ್‌ ಗಳಿಸಿರುವ ಆರ್‌ಸಿಬಿ ಈ ಪಂದ್ಯ ಗೆಲ್ಲುವ ಫೇವರೀಟ್‌ ಆಗಿದೆ. ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದ ತಂಡವು ಹತ್ತು ದಿನಗಳ ವಿರಾಮದ ನಂತರ ಆಡಿದ ತನ್ನ ಕೊನೆಯ ಪಂದ್ಯದಲ್ಲಿ ಮೊದಲಿನ ಲಯದಲ್ಲಿರಲಿಲ್ಲ. ಐಪಿಎಲ್‌ ಪುನರಾರಂಭವಾದ ಬಳಿಕ ಆರ್‌ಸಿಬಿಯ ಮೊದಲ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಹೀಗಾಗಿ ಸರಿಯಾದ ಪಂದ್ಯಾಭ್ಯಾಸವಿಲ್ಲದೇ ತಂಡ ಜಡಗಟ್ಟಿದ್ದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಎದ್ದು ಕಂಡಿತ್ತು. ಬೆಂಗಳೂರು ತಂಡದ ಕೊನೆಯ ಗೆಲುವು ಮೇ 3ರಂದು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.