ADVERTISEMENT

IPL 2025 | LSG vs GT: ಮತ್ತೆ ಅಬ್ಬರಿಸಿದ ಪೂರನ್; ಲಖನೌಗೆ 6 ವಿಕೆಟ್ ಜಯ

ಸತತ ಮೂರನೇ ಗೆಲುವು ದಾಖಲಿಸಿದ ಲಖನೌ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2025, 13:58 IST
Last Updated 12 ಏಪ್ರಿಲ್ 2025, 13:58 IST
<div class="paragraphs"><p>ನಿಕೋಲಸ್ ಪೂರನ್</p></div>

ನಿಕೋಲಸ್ ಪೂರನ್

   

(ಪಿಟಿಐ ಚಿತ್ರ)

ಲಖನೌ: ಆರಂಭ ಆಟಗಾರ ಏಡನ್ ಮರ್ಕರಂ ಮತ್ತು ಅಮೋಘ ಲಯದಲ್ಲಿರುವ ನಿಕೋಲಸ್ ಪೂರನ್ ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ಮೇಲೆ ಆರು ವಿಕೆಟ್‌ಗಳ ಸುಲಭ ಜಯಪಡೆಯಿತು. ಇದು ಲಖನೌ ತಂಡಕ್ಕೆ ಸತತ ಮೂರನೇ ಗೆಲುವು.

ADVERTISEMENT

ಏಕನಾ ಕ್ರೀಡಾಂಗಣದಲ್ಲಿ ಗೆಲುವಿಗೆ 181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಖನೌ ಮೂರು ಎಸೆತಗಳಿರುವಂತೆ 4 ವಿಕೆಟ್‌ಗೆ 186 ರನ್ ಹೊಡೆಯಿತು.

ಮರ್ಕರಂ ಬಿರುಸಿನ 58 ರನ್ (31ಎ, 4x9, 6x1) ಹೊಡೆದರು. ಪೂರನ್ (61, 34ಎ, 4x1, 6x7) ನಾಲ್ಕನೇ ಅರ್ಧ ಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಪೂರನ್ 349 ರನ್‌ಗಳೊಡನೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಾಯಿ ಸುದರ್ಶನ್ (329 ರನ್‌) ಅವರನ್ನು ಹಿಂದೆಹಾಕಿ ಮತ್ತೆ ಅಗ್ರಸ್ಥಾನಕ್ಕೇರಿದರು.

ಲಖನೌಗೆ ಈ ಪಂದ್ಯದಲ್ಲಿ ಮಿಚೆಲ್‌ ಮಾರ್ಷ್ ಅಲಭ್ಯತೆ ಕಾಡಲಿಲ್ಲ. ಪುತ್ರಿಯ ಅಸೌಖ್ಯದಿಂದ ಮಾರ್ಷ್‌ ಆಡಿರಲಿಲ್ಲ.

ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇನಿಂಗ್ಸ್ ಆರಂಭಿಸಿದ ನಾಯಕ ರಿಷಭ್‌ ಪಂತ್‌ (21, 18ಎ) ಮೊದಲ ವಿಕೆಟ್‌ಗೆ ಮರ್ಕರಂ ಜೊತೆ 6.1 ಓವರುಗಳಲ್ಲಿ 65 ರನ್ ಸೇರಿಸಿದ್ದರು. ಪಂತ್‌ಗೆ ಆರಂಭದಲ್ಲೇ ವಿಕೆಟ್‌ ಕೀಪರ್‌ ಬಟ್ಲರ್‌ ಅವರಿಂದ ಜೀವದಾನ ದೊರೆತರೂ, ಅದರ ಪೂರ್ಣಲಾಭ ಪಡೆಯಲಾಗಲಿಲ್ಲ.  ಪ್ರಸಿದ್ಧಕೃಷ್ಣ (26ಕ್ಕೆ2) ಬೌಲಿಂಗ್‌ನಲ್ಲಿ ಅವರು ಡೀಪ್‌ ಥರ್ಡ್‌ಮ್ಯಾನ್‌ನಲ್ಲಿ ಕ್ಯಾಚಿತ್ತರು. ಇಂಪ್ಯಾಕ್ಟ್‌ ಸಬ್‌ಸ್ಟಿಟ್ಯೂಟ್‌ ಆಯುಷ್ ಬಡೋನಿ ಅಜೇಯ 28 ರನ್ ಗಳಿಸಿದರು.

ಈ ಸೋಲಿನಿಂದ ಗುಜರಾತ್‌ ತಂಡದ ಸತತ ನಾಲ್ಕು ಗೆಲುವಿನ ಸರಪಣಿ ಮುರಿಯಿತು; ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಸರಿಯಿತು. ಲಖನೌ ಆರರಿಂದ ಮೂರನೇ ಸ್ಥಾನಕ್ಕೆ ಜಿಗಿಯಿತು.

ಇದಕ್ಕೆ ಮೊದಲು, ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ಗುಜರಾತ್‌ ತಂಡವನ್ನು, ಲಖನೌ ನಿಧಾನಗತಿಯ ಬೌಲರ್‌ಗಳು 6 ವಿಕೆಟ್‌ಗೆ 180 ರನ್‌ಗಳಿಗೆ ಸೀಮಿತಗೊಳಿಸಿದ್ದರು. ಒಳ್ಳೆಯ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ (56, 37ಎ, 4x7, 6x1) ಮತ್ತು ನಾಯಕ ಶುಭಮನ್ ಗಿಲ್ (60, 38ಎ, 4x6, 6x1) ಮೊದಲ ವಿಕೆಟ್‌ಗೆ 12 ಓವರುಗಳಲ್ಲಿ 120 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು.

ಆದರೆ ನಂತರದ ಎಂಟು ಓವರುಗಳಲ್ಲಿ ಗುಜರಾತ್ ಕೇವಲ 60 ರನ್‌ಗಳಷ್ಟೇ ಗಳಿಸಲಷ್ಟೇ ಶಕ್ತವಾಯಿತು. ಆರು ವಿಕೆಟ್‌ಗಳನ್ನೂ ಕಳೆದುಕೊಂಡಿತು. ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ (36ಕ್ಕೆ2), ದಿಗ್ವೇಶ್ ರಾಠಿ (30ಕ್ಕೆ1) ಲಖನೌ ಮರಳಿ ಹಿಡಿತ ಪಡೆಯಲು ಕಾರಣರಾದರು.

ಸಂಕ್ಷಿಪ್ತ ಸ್ಕೋರು:

ಗುಜರಾತ್‌ ಟೈಟನ್ಸ್‌: 20 ಓವರುಗಳಲ್ಲಿ 6 ವಿಕೆಟ್‌ಗೆ 180 (ಸಾಯಿ ಸುದರ್ಶನ್ 56, ಶುಭಮನ್ ಗಿಲ್ 60, ಶೆರ್ಫೇನ್ ರುದರ್‌ಫೋರ್ಡ್‌ 22; ಶಾರ್ದೂಲ್ ಠಾಕೂರ್ 34ಕ್ಕೆ2, ರವಿ ಬಿಷ್ಣೋಯಿ 36ಕ್ಕೆ2);

ಲಖನೌ ಸೂಪರ್‌ ಜೈಂಟ್ಸ್‌: 20 ಓವರುಗಳಲ್ಲಿ 4 ವಿಕೆಟ್‌ಗೆ 186 (ಏಡನ್‌ ಮರ್ಕರಂ 58, ರಿಷಭ್ ಪಂತ್ 21, ನಿಕೋಲಸ್ ಪೂರನ್ 61, ಆಯುಷ್ ಬಡೋನಿ ಔಟಾಗದೇ 28; ಪ್ರಸಿದ್ಧ ಕೃಷ್ಣ 26ಕ್ಕೆ2); ಪಂದ್ಯದ ಆಟಗಾರ: ಏಡನ್ ಮರ್ಕರಂ 58 (31ಎ), 2 ಕ್ಯಾಚ್‌.

ಗುಜರಾತ್ ವಿರುದ್ಧ ಟಾಸ್ ಗೆದ್ದ ಲಖನೌ ಫೀಲ್ಡಿಂಗ್ ಆಯ್ಕೆ...

2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟನ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.

ಈ ಪಂದ್ಯವು ಲಖನೌದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆಯುತ್ತಿದೆ.

ಟಾಸ್ ಗೆದ್ದಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಗುಜರಾತ್ ಅಗ್ರ...

ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ದಾಖಲಿಸಿರುವ ಶುಭಮನ್ ಗಿಲ್ ಸಾರಥ್ಯದ ಗುಜರಾತ್, ಒಟ್ಟು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಅಷ್ಟೇ ಅಂಕಗಳನ್ನು ಹೊಂದಿದ್ದರೂ ರನ್‌ರೇಟ್ ಆಧಾರದಲ್ಲಿ ಗುಜರಾತ್ ಮುನ್ನಡೆ ಕಾಯ್ದುಕೊಂಡಿದೆ.

ಮತ್ತೊಂದೆಡೆ ಲಖನೌ ಐದು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಎರಡು ಸೋಲಿನೊಂದಿಗೆ ಒಟ್ಟು ಆರು ಅಂಕ ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.