ಮುಂಬೈ ಇಂಡಿಯನ್ಸ್ ಬಾವುಟ ಹಿಡಿದಿರುವ ಅಭಿಮಾನಿಗಳು
ಚಿತ್ರಕೃಪೆ: X / @mipaltan
ಐಪಿಎಲ್‌ನಲ್ಲಿ ಆಡುವ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್, ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ 2013ರಲ್ಲಿ ಮೊದಲ ಸಲ ಟ್ರೋಫಿಗೆ ಮುತ್ತಿಕ್ಕಿದ್ದ ಈ ತಂಡ, ನಂತರ 2015, 2017, 2019, 2020ರಲ್ಲೂ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದೆ. ಆದರೆ, ಈ ತಂಡ ಸತತ 12 ಆವೃತ್ತಿಗಳಿಂದ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ.
2012ರ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ದಿದ್ದ ಮುಂಬೈ, ನಂತರ ಒಮ್ಮೆಯೂ ಮೊದಲ ಪಂದ್ಯ ಗೆದ್ದಿಲ್ಲ.
ಇದೀಗ 2025ರ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
ಮುಂಬೈ ಪಡೆ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23ರಂದು ಚೆನ್ನೈ ಸೂಪರ್ ಕಿಂಗ್ಸ್ ಎದರು ಆಡಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.
ಉಭಯ ತಂಡಗಳು ಈವರೆಗೆ ಮೂರು ಸಲ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಮೂರೂ ಸಲ ಮುಂಬೈಗೆ ಮುಖಭಂಗವಾಗಿದೆ. ಹೀಗಾಗಿ, ಈ ಬಾರಿಯಾದರೂ ಗೆದ್ದು ಸತತ ಸೋಲಿನ ಸರಪಳಿ ಕಳಚುವುದೇ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳದ್ದು.
ಆದರೆ, ಈ ಪಂದ್ಯಕ್ಕೆ ನಾಯಕ ನಾಯಕ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ತಂಡವು ಮೂರು ಪಂದ್ಯಗಳಲ್ಲಿ ನಿಧಾನ ಗತಿ ಬೌಲಿಂಗ್ ಮಾಡಿದ್ದ ಕಾರಣಕ್ಕೆ ಅವರು, ಒಂದು ಪಂದ್ಯ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಹಾಗೆಯೇ, ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಕೂಡ ಲಭ್ಯವಾಗುವುದು ಅನುಮಾನ.
ಇವರಿಬ್ಬರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ತಂಡ ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾರೆ.
2012ರಿಂದ ಈಚೆಗೆ ಮುಂಬೈ ತಂಡದ ಮೊದಲ ಪಂದ್ಯದ ಫಲಿತಾಂಶ ಹೀಗಿದೆ
2013: 2 ರನ್ ಸೋಲು vs ರಾಯಲ್ ಚಾಲೆಂಜರ್ಸ್ ಬೆಂಗಳೂರು
2014: 41 ರನ್ ಸೋಲು vs ಕೋಲ್ಕತ್ತ ನೈಟ್‌ರೈಡರ್ಸ್
2015: 7 ವಿಕೆಟ್ ಸೋಲು vs ಕೋಲ್ಕತ್ತ ನೈಟ್‌ರೈಡರ್ಸ್
2016: 9 ವಿಕೆಟ್ ಸೋಲು vs ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2017: 7 ವಿಕೆಟ್ ಸೋಲು vs ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2018: 1 ವಿಕೆಟ್ ಸೋಲು vs ಚೆನ್ನೈ ಸೂಪರ್ ಕಿಂಗ್ಸ್
2019: 37 ರನ್ ಸೋಲು vs ಡೆಲ್ಲಿ ಕ್ಯಾಪಿಟಲ್ಸ್
2020: 5 ವಿಕೆಟ್ ಸೋಲು vs ಚೆನ್ನೈ ಸೂಪರ್ ಕಿಂಗ್ಸ್
2021: 2 ವಿಕೆಟ್ ಸೋಲು vs ರಾಯಲ್ ಚಾಲೆಂಜರ್ಸ್ ಬೆಂಗಳೂರು
2022: 4 ವಿಕೆಟ್ ಸೋಲು vs ಡೆಲ್ಲಿ ಕ್ಯಾಪಿಟಲ್ಸ್
2023: 8 ವಿಕೆಟ್ ಸೋಲು vs ರಾಯಲ್ ಚಾಲೆಂಜರ್ಸ್ ಬೆಂಗಳೂರು
2024: 6 ರನ್ ಸೋಲು vs ಗುಜರಾತ್ ಟೈಟನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.