ADVERTISEMENT

IPL 2025: ಪಂದ್ಯ ಗೆದ್ದರೂ ಡೆಲ್ಲಿ ತಂಡದ ಬೌಲಿಂಗ್ ಕೋಚ್ ಮುನಾಫ್‌ ಪಟೇಲ್‌ಗೆ ದಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಏಪ್ರಿಲ್ 2025, 10:45 IST
Last Updated 17 ಏಪ್ರಿಲ್ 2025, 10:45 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ ಕೋಚ್‌ ಮುನಾಫ್‌ ಪಟೇಲ್‌</p></div>

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ ಕೋಚ್‌ ಮುನಾಫ್‌ ಪಟೇಲ್‌

   

ಚಿತ್ರ: X / @munafpa99881129

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಎದುರು ಸೂಪರ್‌ ಓವರ್‌ನಲ್ಲಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಮರಳಿತು. ಆದರೆ, ಆ ತಂಡದ ಬೌಲಿಂಗ್‌ ಕೋಚ್‌ ಮುನಾಫ್‌ ಪಟೇಲ್‌ ಅವರಿಗೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ.

ADVERTISEMENT

‌‌ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್‌, 'ಐಪಿಎಲ್‌ ನಿಯಮದ ಆರ್ಟಿಕಲ್‌ 2.2 ಅಡಿಯಲ್ಲಿ ಮುನಾಫ್‌ ಪಟೇಲ್‌ ಲೆವಲ್‌ 1 ಅಪರಾಧವೆಸಗಿದ್ದಾರೆ. ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ' ಎಂದು ತಿಳಿಸಿದೆ.

ಡೆಲ್ಲಿ ತಂಡದ ಬೌಲಿಂಗ್‌ ಕೋಚ್‌ ಮುನಾಫ್ ಪಟೇಲ್‌ ಅವರಿಗೆ ಪಂದ್ಯ ಶುಲ್ಕದ ಶೇ 25ರಷ್ಟನ್ನು ದಂಡ ವಿಧಿಸಲಾಗಿದೆ ಮತ್ತು ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಒಂದು ಡಿಮೆರಿಟ್‌ ಪಾಯಿಂಟ್ ನೀಡಲಾಗಿದೆ' ಎಂದು ತಿಳಿಸಲಾಗಿದೆ.

ಮುನಾಫ್‌ ಮಾಡಿದ ತಪ್ಪೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದಾಗ್ಯೂ, ತಮ್ಮ ವಿರುದ್ಧ ಪಂದ್ಯದ ರೆಫ್ರಿ ಕೈಗೊಂಡಿರುವ ಕ್ರಮವನ್ನು ಒಪ್ಪಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಭಾರತ ತಂಡವು ಎಂ.ಎಸ್‌. ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್‌ ಗೆದ್ದ ತಂಡದ ಪ್ರಮುಖ ವೇಗಿಯಾಗಿದ್ದ ಮುನಾಫ್‌, ಕಳೆದ ವರ್ಷ ನವೆಂಬರ್‌ನಲ್ಲಿ ಡೆಲ್ಲಿ ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಡೆಲ್ಲಿಗೆ ಜಯ
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ರಾಜಸ್ಥಾನ ಕೂಡ 4 ವಿಕೆಟ್‌ಗಳನ್ನು ಕಳೆದುಕೊಂಡು ಇಷ್ಟೇ ರನ್‌ ಗಳಿಸಿತು. ಪಂದ್ಯ ಟೈ ಆದಕಾರಣ ನಡೆದ ಸೂಪರ್‌ ಓವರ್‌ ನಡೆದಿತ್ತು.

ಸೂಪರ್‌ ಓವರ್‌ನಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ್ದ ಮಿಚೇಲ್‌ ಸ್ಟಾರ್ಕ್‌ ಡೆಲ್ಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಆಡಿರುವ 6 ಪಂದ್ಯಗಳಲ್ಲಿ ಡೆಲ್ಲಿಗೆ ದೊರೆತ 5ನೇ ಜಯ ಇದಾಗಿದೆ. ಇದರೊಂದಿಗೆ, 10 ಪಾಯಿಂಟ್‌ ಹೊಂದಿರುವ ಈ ತಂಡ ಅಗ್ರಸ್ಥಾನಕ್ಕೇರಿದೆ.

ಇತ್ತ 7 ಪಂದ್ಯಗಳಲ್ಲಿ 5ನೇ ಸೋಲು ಕಂಡ ರಾಜಸ್ಥಾನ, ಪಾಯಿಂಟ್‌ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.