ರಜತ್ ಪಾಟೀದಾರ್, ವಿರಾಟ್ ಕೊಹ್ಲಿ
(ಪ್ರಜಾವಾಣಿ, ಪಿಟಿಐ ಚಿತ್ರ)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕರಾಗಿ ನೇಮಕಗೊಂಡಿರುವ ರಜತ್ ಪಾಟೀದಾರ್ ಅವರಿಗೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.
ಈ ಕುರಿತು ವಿರಾಟ್ ಕೊಹ್ಲಿ ಅವರ ವಿಡಿಯೊ ಸಂದೇಶವನ್ನು ಆರ್‌ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
'ರಜತ್ ಪಾಟೀದಾರ್ ಆರ್‌ಸಿಬಿಯ ನೂತನ ನಾಯಕ ಎಂದು ಹೇಳಲು ಸಂತಸವಾಗುತ್ತಿದೆ. ರಜತ್ ಅವರಿಗೆ ಅಭಿನಂದನೆಗಳು, ನಾನು ಹಾಗೂ ತಂಡದೆಲ್ಲ ಸದಸ್ಯರು ನಿನ್ನ ಬೆಂಬಲಕ್ಕೆ ಸದಾ ಇದ್ದೇವೆ' ಎಂದು ಕೊಹ್ಲಿ ಹುರಿದುಂಬಿಸಿದ್ದಾರೆ.
'ಈ ಫ್ರಾಂಚೈಸಿಯಲ್ಲಿ ನೀವು ಬೆಳೆದು ಬಂದ ರೀತಿ, ನಿರ್ವಹಣೆ ನೀಡಿದ ರೀತಿ, ಆರ್‌ಸಿಬಿಯ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ನಿಜಕ್ಕೂ ನೀವಿದಕ್ಕೆ ಅರ್ಹರಾಗಿದ್ದೀರಿ' ಎಂದು ವಿರಾಟ್ ಸಂದೇಶ ಹಂಚಿದ್ದಾರೆ.
'ನಿಜವಾಗಿಯೂ ಇದೊಂದು ದೊಡ್ಡ ಜವಾಬ್ದಾರಿ. ತುಂಬಾ ವರ್ಷಗಳವರೆಗೆ ನಾನು ಜವಾಬ್ದಾರಿ ನಿಭಾಯಿಸಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಫಫ್ ಡುಪ್ಲೆಸಿ ನಿರ್ವಹಿಸಿದ್ದಾರೆ. ಈ ಫ್ರಾಂಚೈಸಿಯನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಇದು ನಿಮಗೆ ಸಿಕ್ಕಿರುವ ದೊಡ್ಡ ಗೌರವ' ಎಂದು ವಿರಾಟ್ ಪ್ರತಿಕ್ರಿಯಿಸಿದ್ದಾರೆ.
'ಕಳೆದ ಕೆಲವು ವರ್ಷಗಳಲ್ಲಿ ರಜತ್ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ರಜತ್ ಅವರ ಬೆನ್ನಿಗೆ ನಿಲ್ಲುವಂತೆ ಅಭಿಮಾನಿಗಳಲ್ಲೂ ವಿನಂತಿ ಮಾಡುತ್ತೇನೆ. ತಂಡದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ರಜತ್‌ಗೆ ಶುಭಕಾಮನೆಗಳು' ಎಂದು ಅವರು ಹಾರೈಸಿದ್ದಾರೆ.
ಈ ಮೊದಲು ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುವ ಕುರಿತು ಊಹಾಪೋಹಗಳು ಬಂದಿದ್ದವು. ಆದರೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹೊಸ ಕಪ್ತಾನರ ಹೆಸರನ್ನು ಇಂದು (ಗುರುವಾರ) ಘೋಷಿಸುವುದರೊಂದಿಗೆ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಸಿಬಿ ಒಂದೇ ಒಂದು ಸಲ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಚೊಚ್ಚಲ ಕಪ್ ಗೆಲ್ಲಿಸಿಕೊಡುವ ದೊಡ್ಡ ಸವಾಲು ರಜತ್ ಮೇಲಿದೆ. ಹಾಗೆಯೇ ತಂಡವನ್ನು ಯಶಸ್ಸಿನತ್ತ ಮುನ್ನಡೆಸಬೇಕಿದೆ.
2013ರಿಂದ 2021ರವರೆಗೆ ಆರ್‌ಸಿಬಿ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು. 2022ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ ತಂಡದ ಸಾರಥ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.