ADVERTISEMENT

IPL 2025 | 2014ರ ಬಳಿಕ ಅಗ್ರಸ್ಥಾನಕ್ಕೇರಿದ ಪಂಜಾಬ್; ಆರ್‌ಸಿಬಿಗೆ ಕೊನೆಯ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2025, 2:21 IST
Last Updated 27 ಮೇ 2025, 2:21 IST
<div class="paragraphs"><p>ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್</p></div>

ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್

   

(ಪಿಟಿಐ ಚಿತ್ರ)

ಜೈಪುರ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಈ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಶ್ರೇಯಸ್ ಅಯ್ಯರ್ ಬಳಗವು, ಪ್ಲೇ-ಆಫ್‌ನಲ್ಲಿ 'ಮೊದಲ ಕ್ವಾಲಿಫೈಯರ್' ಹಣಾಹಣಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

2014ರ ಬಳಿಕ ಅಗ್ರಸ್ಥಾನಕ್ಕೇರಿದ ಪಂಜಾಬ್...

ಲೀಗ್ ಹಂತದಲ್ಲಿ ತನ್ನ ಅಭಿಯಾನ ಕೊನೆಗೊಳಿಸಿರುವ ಪಂಜಾಬ್, 14 ಪಂದ್ಯಗಳಲ್ಲಿ ಒಂಬತ್ತು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ ಒಟ್ಟು 19 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಪಂಜಾಬ್‌ ಈ ಹಿಂದೆ 2014ರಲ್ಲಿ ಕೊನೆಯ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಐಪಿಎಲ್ ಲೀಗ್ ಹಂತದಲ್ಲಿ ಇನ್ನೊಂದೇ ಪಂದ್ಯ ಮಾತ್ರ ಬಾಕಿ (ಆರ್‌ಸಿಬಿ vs ಲಖನೌ) ಇರುವಂತೆಯೇ ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಪಂಜಾಬ್, ಅಗ್ರಸ್ಥಾನ ಕಾಯ್ದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಎಲಿಮಿನೇಟರ್‌ನಲ್ಲಿ ಆಡಲಿರುವ ಮುಂಬೈ...

ಮತ್ತೊಂದೆಡೆ ಮುಂಬೈ ತಂಡವು ಈ ಸೋಲಿನಿಂದಾಗಿ ಎಲಿಮಿನೇಟರ್‌ ಪಂದ್ಯವನ್ನು ಆಡಬೇಕಿದೆ. ಹಾರ್ದಿಕ್ ಪಾಂಡ್ಯ ಪಡೆ 14 ಪಂದ್ಯಗಳಲ್ಲಿ ಎಂಟು ಗೆಲುವು, ಆರು ಸೋಲಿನೊಂದಿಗೆ 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನ ಪಡೆದಿದ್ದಾಗ ಮುಂಬೈ ಎಂದಿಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಮುಂಬೈ ತನ್ನೆಲ್ಲ ಐದು ಟ್ರೋಫಿಗಳನ್ನು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದಾಗಲೇ ಗೆದ್ದಿತ್ತು ಎಂಬುದು ಮಹತ್ವದೆನಿಸಿಕೊಳ್ಳುತ್ತದೆ.

ಆರ್‌ಸಿಬಿಗೆ ಕೊನೆಯ ಅವಕಾಶ...

ರಜತ್ ಪಾಟೀದಾರ್ ಪಡೆ ಈ ಬಾರಿಯ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಲಖನೌ ತಂಡವನ್ನು ಎದುರಿಸಲಿದ್ದು, ಆರ್‌ಸಿಬಿಗೆ ಈ ಪಂದ್ಯ ಬಹಳ ಮಹತ್ವದ್ದಾಗಿದೆ.

ಲಖನೌ ವಿರುದ್ಧ ಪಂದ್ಯ ಗೆದ್ದಲ್ಲಿ ಆರ್‌ಸಿಬಿಗೆ ಮೊದಲ ಕ್ವಾಲಿಫೈಯರ್‌ ಸ್ಥಾನ ಖಚಿತವಾಗಲಿದೆ. ಅಲ್ಲದೆ 2016ರ ನಂತರ ಮೊದಲ ಬಾರಿ ಕ್ವಾಲಿಫೈಯರ್‌ 1ಕ್ಕೆ ಅರ್ಹತೆ ಪಡೆಯುವ ಹಾದಿಯಲ್ಲಿದೆ.

ಲಖನೌ ವಿರುದ್ಧ ಗೆದ್ದರೆ ಆರ್‌ಸಿಬಿ ಕೂಡ 19 ಅಂಕಗಳನ್ನು ಗಳಿಸಲಿದೆ. ಅಂದರೆ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನ ನಿರ್ಧಾರವಾಗಲಿದೆ. ಈಗ ಆರ್‌ಸಿಬಿ +0.255 ರನ್‌ರೇಟ್ ಕಾಪಾಡಿಕೊಂಡಿದೆ.

ಇನ್ನೊಂದೆಡೆ ಗುಜರಾತ್ ಟೈಟನ್ಸ್ 14 ಪಂದ್ಯಗಳಲ್ಲಿ ಒಂಬತ್ತು ಗೆಲುವು, ಐದು ಸೋಲಿನೊಂದಿಗೆ 18 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ.

ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಸೋತ ತಂಡ ಕ್ವಾಲಿಫೈಯರ್‌ 2ರಲ್ಲಿ ಎಲಿಮಿನೇಟರ್‌ ಪಂದ್ಯದ ವಿಜೇತರನ್ನು ಎದುರಿಸಬೇಕಾಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ.

ರಜತ್ ಪಾಟೀದಾರ್

ಸೂರ್ಯ ಹಿಮ್ಮೆಟ್ಟಿಸಿದ ಪ್ರಿಯಾಂಶ್, ಇಂಗ್ಲಿಸ್‌...

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಸೂರ್ಯಕುಮಾರ್ ಯಾದವ್ ಅರ್ಧಶತಕದ (57 ರನ್, 39 ಎಸೆತ) ಬಲದಿಂದ ಏಳು ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತು. ರೋಹಿತ್ ಶರ್ಮಾ (24), ಹಾರ್ದಿಕ್ ಪಾಂಡ್ಯ (26), ನಮನ್ ಧಿರ್ (20) ಹಾಗೂ ರಯಾನ್ ರಿಕೆಲ್ಟನ್ (27) ಉಪಯುಕ್ತ ಕಾಣಿಕೆ ನೀಡಿದರು.

ಪಂಜಾಬ್ ಪರ ಅರ್ಷದೀಪ್ ಸಿಂಗ್ ಹಾಗೂ ಕನ್ನಡಿಗ ವೈಶಾಖ ವಿಜಯಕುಮಾರ್ ತಲಾ ಎರಡು ವಿಕೆಟ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಪಂಜಾಬ್ ಮಗದೊಮ್ಮೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಅಮೋಘ ಪ್ರದರ್ಶನದ ಬಲದಿಂದ 18.3 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 62 ರನ್ ಗಳಿಸಿ ಅಬ್ಬರಿಸಿದರು. ಪ್ರಿಯಾಂಶ್ ಹಾಗೂ ಜೋಶ್ ಇಂಗ್ಲಿಸ್ ದ್ವಿತೀಯ ವಿಕೆಟ್‌ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. 42 ಎಸೆತಗಳನ್ನು ಎದುರಿಸಿದ ಜೋಶ್ 73 ರನ್ ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 26 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.