ADVERTISEMENT

IPL 2025 | ರಾಜಸ್ಥಾನ ರಾಯಲ್ಸ್‌ ಜಯಭೇರಿ: ಪಂಜಾಬ್ ಕಿಂಗ್ಸ್‌ಗೆ ಮೊದಲ ಸೋಲು

ಪಿಟಿಐ
Published 5 ಏಪ್ರಿಲ್ 2025, 18:56 IST
Last Updated 5 ಏಪ್ರಿಲ್ 2025, 18:56 IST
<div class="paragraphs"><p>ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್</p></div>

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್

   

(ಚಿತ್ರ ಕೃಪೆ: X/@IPL)

ಮುಲ್ಲನಪುರ: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್  ಅವರ ಆಕರ್ಷಕ ಅರ್ಧಶತಕ ವ್ಯರ್ಥವಾಗಲು ವೇಗಿ ಜೋಫ್ರಾ ಆರ್ಚರ್ ಬಿಡಲಿಲ್ಲ. 

ADVERTISEMENT

206 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ‘ಡಬಲ್ ಆಘಾತ’ ನೀಡಿದ ಜೋಫ್ರಾ (25ಕ್ಕೆ3) ಮಿಂಚಿದರು. ಇದರಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು 50 ರನ್‌ಗಳಿಂದ ಜಯಿಸಿತು.

ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ಸತತ ಎರಡನೇ ಗೆಲುವು ಸಾಧಿಸಿತು. ಶ್ರೇಯಸ್ ಅಯ್ಯರ್ ಬಳಗವು ಮೊದಲ ಸೋಲಿನ ಕಹಿಯುಂಡಿತು. ಟೂರ್ನಿಯಲ್ಲಿ ತನ್ನ ಮೊದಲೆರಡೂ ಪಂದ್ಯಗಳಲ್ಲಿ ಭರ್ಜರಿ ಜಯಸಾಧಿಸಿದ್ದ ಆತಿಥೇಯರು ಇಲ್ಲಿ ಎಡವಿದರು.

ಮಹಾರಾಜ ಯದುವೀಂದ್ರಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ  ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಜೈಸ್ವಾಲ್ (67; 45 ಎಸೆತ) ಮತ್ತು ನಾಯಕ ಸಂಜು ಸ್ಯಾಮ್ಸನ್ (38; 26ಎ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 89 ರನ್‌ ಅಡಿಪಾಯದ ಮೇಲೆ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 205 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್ ಗಳಿಸಿತು. 

ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಪ್ರಿಯಾಂಶ್ ಆರ್ಯ ಮತ್ತು ಕೊನೆ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಅವರ ಸ್ಟಂಪ್‌ ಎಗರಿಸುವಲ್ಲಿ ಜೋಫ್ರಾ ಸಫಲರಾದರು. ಈ ಸಂದರ್ಭದ ಲಾಭ ಪಡೆದ ಉಳಿದ ಬೌಲರ್‌ಗಳೂ ಹಿಡಿತ ಸಾಧಿಸಿದರು. ಇದರಿಂದ ಪಂಜಾಬ್ ಬ್ಯಾಟರ್‌ಗಳು ಒತ್ತಡಕ್ಕೊಳಗಾದರು. ಈ ನಡುವೆಯೂ ಐದನೇ ಕ್ರಮಾಂಕದ ನಿಹಾಲ್ ವಧೇರಾ (62; 41ಎ, 4X4, 6X3) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (30; 21ಎ) ಹೋರಾಟ ಮಾಡಿದರು. ಆದರೂ ತಂಡ ಗೆಲುವಿನತ್ತ ವಾಲಲಿಲ್ಲ.  

ಯಶಸ್ವಿ ಆಟ: ಕಳೆದ ಕೆಲವು ಪಂದ್ಯಗಳಲ್ಲಿ ರನ್ ಬರ ಎದುರಿಸಿದ ಜೈಸ್ವಾಲ್ ಇಲ್ಲಿ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು. 10 ಓವರ್‌ಗಳವರೆಗೂ ಯಶಸ್ವಿ ಮತ್ತು  ಸಂಜು ವಿಕೆಟ್‌ ಪತನಕ್ಕೆ ಆಸ್ಪದ ಕೊಡಲಿಲ್ಲ. ಯಶಸ್ವಿ 3 ಬೌಂಡರಿ ಮತ್ತು 5 ಸಿಕ್ಸರ್ ಎತ್ತಿದರು. ಸಂಜು ಅರ್ಧಡಜನ್ ಬೌಂಡರಿ ಬಾರಿಸಿದರು. 

11ನೇ ಓವರ್‌ನಲ್ಲಿ  ಲಾಕಿ ಫರ್ಗ್ಯುಸನ್ ಅವರು ಈ ಜೊತೆಯಾಟ ಮುರಿದರು. ಸಂಜು ದೊಡ್ಡ ಹೊಡೆತ ಆಡುವ ಯತ್ನದಲ್ಲಿ ಶ್ರೇಯಸ್‌ಗೆ ಕ್ಯಾಚ್ ಆದರು. ಲಾಕಿ ತಮ್ಮ ಇನ್ನೊಂದು ಓವರ್‌ನಲ್ಲಿ ಯಶಸ್ವಿಯನ್ನು ಕ್ಲೀನ್‌ಬೌಲ್ಡ್‌ ಮಾಡುವಲ್ಲಿ ಸಫಲರಾದರು. ಆದರೆ ಇದರಿಂದ ರನ್‌ ಗಳಿಕೆಗೆ ಪೆಟ್ಟು ಬೀಳದಂತೆ ರಿಯಾನ್ ಪರಾಗ್ (ಅಜೇಯ 43) ಕೂಡ ತಂಡಕ್ಕೆ ಬಲ ತುಂಬಿದರು. 

ಸಂಕ್ಷಿಪ್ತ ಸ್ಕೋರು

ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 4ಕ್ಕೆ205 (ಯಶಸ್ವಿ ಜೈಸ್ವಾಲ್ 67, ಸಂಜು ಸ್ಯಾಮ್ಸನ್ 38, ರಿಯಾನ್ ಪರಾಗ್ ಅಜೇಯ 43, ಲಾಕಿ ಫರ್ಗ್ಯುಸನ್ 37ಕ್ಕೆ2)

ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 9ಕ್ಕೆ155 (ಪ್ರಭಸಿಮ್ರನ್ ಸಿಂಗ್ 17, ನಿಹಾಲ್ ವಧೇರಾ 62, ಗ್ಲೆನ್ ಮ್ಯಾಕ್ಸ್‌ವೆಲ್ 30, ಜೋಫ್ರಾ ಆರ್ಚರ್ 25ಕ್ಕೆ3, ಸಂದೀಪ್ ಶರ್ಮಾ 21ಕ್ಕೆ2, ಮಹೀಷ್ ಥೀಕ್ಷಣ 26ಕ್ಕೆ2) ಫಲಿತಾಂಶ: ರಾಜಸ್ಥಾನ ರಾಯಲ್ಸ್ ತಂಡಕ್ಕೆ 50 ರನ್‌ಗಳ ಜಯ.  ಪಂದ್ಯ ಶ್ರೇಷ್ಠ: ಜೋಫ್ರಾ ಆರ್ಚರ್‌

ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ...

2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.

ಚಂಡೀಗಢದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್ ಕಿಂಗ್ಸ್ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲಿನೊಂದಿಗೆ ಎರಡು ಅಂಕ ಮಾತ್ರ ಗಳಿಸಿದ್ದು, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಬಿಸಿಸಿಐನಿಂದ ಹಸಿರು ನಿಶಾನೆ ಗಳಿಸಿರುವ ಸಂಜು ಸ್ಯಾಮ್ಸನ್, ರಾಜಸ್ಥಾನ ತಂಡದ ನಾಯಕತ್ವದ ಜವಾಬ್ದಾರಿ ವಹಿಸುತ್ತಿದ್ದಾರೆ. ಆ ಮೂಲಕ ತಂಡವು ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.