ADVERTISEMENT

RCB Final | 4ನೇ ಬಾರಿ ಫೈನಲ್‌ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮೇ 2025, 2:09 IST
Last Updated 30 ಮೇ 2025, 2:09 IST
<div class="paragraphs"><p>ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್</p></div>

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್

   

(ಪಿಟಿಐ ಚಿತ್ರ)

ಚಂಡೀಗಡ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್‌ಗೆ ಪ್ರವೇಶಿಸಿದೆ.

ADVERTISEMENT

ಇದೀಗ ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಕಣಕ್ಕಿಳಿಯಲಿದೆ.

ಚಂಡೀಗಡದಲ್ಲಿ ನಡೆದ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ (21ಕ್ಕೆ 3), ಸುಯಶ್ ಶರ್ಮಾ (17ಕ್ಕೆ 3), ಯಶ್ ದಯಾಳ್ (26ಕ್ಕೆ 2) ಸೇರಿದಂತೆ ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ 14.1 ಓವರ್‌ಗಳಲ್ಲೇ 101 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಹಾಗೂ ರೊಮರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಗಳಿಸಿದರು.

ಪಂಜಾಬ್ ಪರ ಮಾರ್ಕಸ್ ಸ್ಟೋಯಿನಿಸ್ ಗರಿಷ್ಠ 26 ರನ್ ಗಳಿಸಿದರು. ಪ್ರಿಯಾಂಶ್ ಆರ್ಯ (7), ಪ್ರಭಸಿಮ್ರನ್ (18), ಜೋಶ್ ಇಂಗ್ಲಿಸ್ (4), ನಾಯಕ ಶ್ರೇಯಸ್ ಅಯ್ಯರ್ (2), ನೇಹಲ್ ವಧೇರಾ (8) ಹಾಗೂ ಶಶಾಂಕ್ ಸಿಂಗ್ (3) ವೈಫಲ್ಯವನ್ನು ಕಂಡರು.

ಈ ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ ಫಿಲ್ ಸಾಲ್ಟ್ ಬಿರುಸಿನ ಅರ್ಧಶತಕದ (56*) ಬಲದಿಂದ ಕೇವಲ 10 ಓವರ್‌ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸಾಲ್ಟ್ 27 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಅಜೇಯರಾಗುಳಿದರು. ವಿರಾಟ್ ಕೊಹ್ಲಿ (12), ಮಯಂಕ್ ಅಗರವಾಲ್ (19) ಹಾಗೂ ನಾಯಕ ರಜತ್ ಪಾಟೀದಾರ್ (15*) ಉಪಯುಕ್ತ ಕಾಣಿಕೆ ನೀಡಿದರು.

ಆರ್‌ಸಿಬಿ 4ನೇ ಸಲ ಫೈನಲ್‌ ಸಾಧನೆ...

ಐಪಿಎಲ್‌ನಲ್ಲಿ ಒಂದೂ ಬಾರಿಯೂ ಆರ್‌ಸಿಬಿ ಕಪ್ ಗೆದ್ದಿಲ್ಲ. ಆದರೆ ನಾಲ್ಕನೇ ಸಲ ಫೈನಲ್‌ಗೇರಿದ ಸಾಧನೆ ಮಾಡಿದೆ. ಈ ಹಿಂದೆ 2009, 2011 ಹಾಗೂ 2016ನೇ ಸಾಲಿನಲ್ಲೂ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಮೂರು ಬಾರಿಯೂ ರನ್ನರ್ ಅಪ್ ಆಗಿತ್ತು. ಇದೀಗ ಐಪಿಎಲ್ 18ನೇ ಆವೃತ್ತಿಯಲ್ಲೂ ಮಗದೊಮ್ಮೆ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿ ನಿರೀಕ್ಷೆ ಗರಿಗೆದರಿದೆ.

ಫಿಲ್ ಸಾಲ್ಟ್

ಪಂಜಾಬ್‌ಗೆ ಇನ್ನೊಂದು ಅವಕಾಶ...

ಈ ಸೋಲಿನ ಹೊರತಾಗಿಯೂ ಶ್ರೇಯಸ್ ಅಯ್ಯರ್ ಮುಂದಾಳತ್ವದ ಪಂಜಾಬ್ ಕಿಂಗ್ಸ್‌ಗೆ ಫೈನಲ್ ಪ್ರವೇಶಿಸಲು ಇನ್ನೊಂದು ಅವಕಾಶ ಇರಲಿದೆ. ಶುಕ್ರವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಜಯಿಸುವ ತಂಡವನ್ನು ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಎದುರಿಸಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯವು ಭಾನುವಾರ (ಜೂನ್ 1) ನಡೆಯಲಿದೆ.

ಇಂದು (ಶುಕ್ರವಾರ) ನಡೆಯಲಿರುವ ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಬೃಹತ್ ಗೆಲುವು...

ಇದು ಐಪಿಎಲ್ ಪ್ಲೇ-ಆಫ್‌ನಲ್ಲಿ ದಾಖಲಾದ ಬೃಹತ್ ಗೆಲುವು (ಎಸೆತ ಅಂತರದಲ್ಲಿ) ಆಗಿದೆ. ಆರ್‌ಸಿಬಿ ಗೆಲುವಿನ ನಗೆ ಬೀರಿದಾಗ ಇನ್ನು 60 ಎಸೆತಗಳು ಬಾಕಿ ಇತ್ತು. 2024ರ ಫೈನಲ್‌ನಲ್ಲಿ 57 ಎಸೆತಗಳು ಬಾಕಿ ಇರುವಾಗಲೇ ಎಸ್‌ಆರ್‌ಎಚ್ ವಿರುದ್ಧ ಕೆಕೆಆರ್ ಗೆಲುವು ಸಾಧಿಸಿತ್ತು.

ಇನ್ನು 100 ಅಥವಾ ಅದಕ್ಕಿಂತಲೂ ಹೆಚ್ಚು ರನ್‌ಗಳ ಗುರಿಯನ್ನು ವೇಗದಲ್ಲಿ ಬೆನ್ನಟ್ಟಿದ ದಾಖಲೆಯೂ ಆರ್‌ಸಿಬಿ ಹೆಸರಲ್ಲೇ ಇದೆ. 2015ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಒಡ್ಡಿದ 112 ರನ್ ಗುರಿಯನ್ನು 9.4 ಓವರ್‌ಗಳಲ್ಲಿ ಬೆನ್ನಟ್ಟಿತ್ತು.

14.1 ಓವರ್‌ಗಳಲ್ಲಿ ಪಂಜಾಬ್ ಆಲೌಟ್...

ಆರ್‌ಸಿಬಿ ದಾಳಿಗೆ ತತ್ತರಿಸಿದ ಪಂಜಾಬ್ 14.1 ಓವರ್‌ಗಲ್ಲೇ 101 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಐಪಿಎಲ್ ಪ್ಲೇ-ಆಫ್‌ನಲ್ಲಿ ದಾಖಲಾದ ಮೂರನೇ ಕನಿಷ್ಠ ಮೊತ್ತವಾಗಿದೆ. 2010ರಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್‌ನಲ್ಲಿ ಆರ್‌ಸಿಬಿ ವಿರುದ್ಧವೇ ಡೆಕ್ಕನ್ ಚಾರ್ಜರ್ಸ್ 82 ರನ್‌ಗಳಿಗೆ ಆಲೌಟ್ ಆಗಿತ್ತು.

ಹಾಗೆಯೇ ಐಪಿಎಲ್ ಪ್ಲೇ-ಆಫ್‌ನಲ್ಲಿ ಎದುರಾಳಿ ತಂಡವನ್ನು 15 ಓವರ್‌ನೊಳಗೆ ಆಲೌಟ್ ಮಾಡಿದ ಮೊದಲ ತಂಡವೆಂಬ ಖ್ಯಾತಿಗೂ ಆರ್‌ಸಿಬಿ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.