ADVERTISEMENT

IPL 2025 | DC vs RCB: ರಾಹುಲ್‌ – ವಿರಾಟ್ ಪೈಪೋಟಿಗೆ ‘ಡೆಲ್ಲಿ’ ಸಿದ್ಧ

ಪಿಟಿಐ
Published 26 ಏಪ್ರಿಲ್ 2025, 23:54 IST
Last Updated 26 ಏಪ್ರಿಲ್ 2025, 23:54 IST
<div class="paragraphs"><p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅಭ್ಯಾಸ&nbsp;</p></div>

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅಭ್ಯಾಸ 

   

–ಪಿಟಿಐ ಚಿತ್ರ

ನವದೆಹಲಿ: ವಿರಾಟ್ ಕೊಹ್ಲಿ  ಮತ್ತು ಕೆ.ಎಲ್‌. ರಾಹುಲ್ ಅವರ ಮೇಲೆ ಈಗ ಕ್ರಿಕೆಟ್‌ಪ್ರಿಯರ ಕಣ್ಣುಗಳು ನೆಟ್ಟಿವೆ. 

ADVERTISEMENT

ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕನ್ನಡಿಗ ರಾಹುಲ್ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.  ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆರ್‌ಸಿಬಿಯನ್ನು ಸೋಲಿಸಿತ್ತು. ಆಗ ಗೆಲುವಿನ ರೂವಾರಿಯಾಗಿದ್ದ ಕೆ.ಎಲ್. ರಾಹುಲ್ ಅವರು, ‘ಇದು ನನ್ನ ನೆಲ’ ಎಂದು ‘ಕಾಂತಾರ’ ಚಲನಚಿತ್ರದ ದೃಶ್ಯದ ಮಾದರಿಯನ್ನು ಅನುಕರಿಸಿದ್ದರು.  

ಈಗ ಎರಡನೇ ಹಂತದಲ್ಲಿ ಪಂದ್ಯ ನಡೆಯಲಿರುವ ದೆಹಲಿಯು ವಿರಾಟ್ ಅವರ ಜನಿಸಿ, ಕ್ರಿಕೆಟಿಗನಾಗಿ ಬೆಳೆದ ಊರು. ಆದ್ದರಿಂದ ಅವರು, ರಾಹುಲ್ ಮತ್ತು ಡೆಲ್ಲಿ ತಂಡಕ್ಕೆ ‘ತಿರುಗೇಟು’ ನೀಡುವರೇ ಎಂಬ ಕುತೂಹಲ ಗರಿಗೆದರಿದೆ. 

ಈಚೆಗೆ ಬೆಂಗಳೂರಿನಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಹೊಡೆದಿದ್ದರು. ಪಂದ್ಯದಲ್ಲಿ ಆರ್‌ಸಿಬಿ ಜಯಕ್ಕೆ ಮಹತ್ವದ ಕಾಣಿಕೆ ನೀಡಿದ್ದರು. ಅದಕ್ಕೂ ಮುನ್ನ ಮುಲ್ಲನಪುರದಲ್ಲಿ ಪಂಜಾಬ್ ಕಿಂಗ್ಸ್‌ ಎದುರು ಆರ್‌ಸಿಬಿ ಜಯದಲ್ಲಿಯೂ ವಿರಾಟ್ ಮಿಂಚಿದ್ದರು.  ಅಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಮುಂದೆ ವಿರಾಟ್ ಮಾಡಿದ್ದ ‘ಸಂಭ್ರಮದ ನೃತ್ಯ’ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿತ್ತು. 

ಆದ್ದರಿಂದ ಈಗ ತಮ್ಮ ಊರು ಡೆಲ್ಲಿಯಲ್ಲಿಯೂ ವಿರಾಟ್ ಮಿಂಚುವರೇ ಅಥವಾ ಅಕ್ಷರ್ ಪಟೇಲ್ ನಾಯಕತ್ವದ  ಆತಿಥೇಯ ತಂಡವೇ ಮೇಲುಗೈ ಸಾಧಿಸುವುದೇ ಎಂಬ ಚರ್ಚೆಗಳು ಗರಿಗೆದರಿವೆ. 

ಪಟೇಲ್ ಬಳಗವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎಂಟು ಪಂದ್ಯಗಳನ್ನು ಆಡಿ 6ರಲ್ಲಿ ಜಯಿಸಿ, 2ರಲ್ಲಿ ಸೋತಿದೆ. ಆರ್‌ಸಿಬಿ 9 ಪಂದ್ಯ ಆಡಿ 6 ಗೆದ್ದು, 3ರಲ್ಲಿ ಸೋತಿದೆ. ಉಭಯ ತಂಡಗಳೂ ತಲಾ 12 ಅಂಕಗಳನ್ನು ಗಳಿಸಿವೆ. 

ವಿರಾಟ್ ಅಲ್ಲದೇ; ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ಜಿತೇಶ್ ಶರ್ಮಾ, ನಾಯಕ ರಜತ್ ಪಾಟೀದಾರ್  ಹಾಗೂ ಟಿಮ್ ಡೇವಿಡ್ ಅವರು ಉತ್ತಮ ಲಯದಲ್ಲಿದ್ದಾರೆ. ಅವರಿಗೆ ಈಗ ಡೆಲ್ಲಿ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌, ಮುಕೇಶ್ ಕುಮಾರ್, ಸ್ಪಿನ್ನರ್ ಕುಲದೀಪ್ ಯಾದವ್ ದಾಳಿಯನ್ನು ಮೆಟ್ಟಿ ನಿಲ್ಲುವ ಸವಾಲು ಇದೆ. 

ಆರ್‌ಸಿಬಿಯ ಬೌಲಿಂಗ್ ಪಡೆಯೂ ಈಗ ಉತ್ತಮ ಲಯದಲ್ಲಿದೆ. ಕಳೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿ ಆರ್‌ಸಿಬಿಗೆ ಜಯದ ಹಾರ ಹಾಕಿದ್ದ ವೇಗಿ ಜೋಶ್ ಹೇಜಲ್‌ವುಡ್ ಅವರನ್ನು ಎದುರಿಸುವುದು ಡೆಲ್ಲಿ ಬ್ಯಾಟರ್‌ಗಳಿಗೆ ಕಠಿಣ ಸವಾಲಾಗುವ ಸಾಧ್ಯತೆ ಇದೆ. ಸ್ಪಿನ್ನರ್ ಕೃಣಾಲ್ ಪಾಂಡ್ಯ, ಯಶ್ ದಯಾಳ್ ಅವರು ಜೊತೆಯಾಟಗಳನ್ನು ಮುರಿಯುವ ಸಮರ್ಥರು. 

ಡೆಲ್ಲಿ ತಂಡದಲ್ಲಿರುವ ಕರ್ನಾಟಕದ ಜೋಡಿ ರಾಹುಲ್ ಮತ್ತು ಕರುಣ್ ನಾಯರ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ. ಜೇಕ್ ಫ್ರೆಸರ್ ಮೆಕ್‌ಗುರ್ಕ್, ಫಾಫ್ ಡುಪ್ಲೆಸಿ ಅವರ ಪ್ರದರ್ಶನ ಸ್ಥಿರವಾಗಿಲ್ಲ. ಅಭಿಷೇಕ್ ಪೊರೆಲ್ ಉತ್ತಮ ಆರಂಭ ನೀಡಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ವಿಪ್ರಜ್ ನಿಗಮ್, ಟ್ರಿಸ್ಟನ್ ಸ್ಟಬ್ಸ್‌ ಅವರು ಉತ್ತಮವಾಗಿ ಆಡುತ್ತಿದ್ದಾರೆ. 

ಪಂದ್ಯ ಆರಂಭ: ರಾತ್ರಿ 7.30

‌ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್‌ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.