ADVERTISEMENT

IPL 2025 | ಹೆಚ್ಚು ಸಲ '0': ಡಿಕೆ, ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ ರೋಹಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2025, 5:30 IST
Last Updated 24 ಮಾರ್ಚ್ 2025, 5:30 IST
<div class="paragraphs"><p>ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ, ಗ್ಲೆನ್‌ ಮ್ಯಾಕ್ಸ್‌ವೆಲ್‌</p></div>

ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ, ಗ್ಲೆನ್‌ ಮ್ಯಾಕ್ಸ್‌ವೆಲ್‌

   

ಪಿಟಿಐ ಚಿತ್ರಗಳು

ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್‌ ಶರ್ಮಾ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್‌ ಎನಿಸಿಕೊಂಡರು.

ADVERTISEMENT

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಹಾಗೂ ಮುಂಬೈ ತಂಡಗಳು ಭಾನುವಾರ ರಾತ್ರಿ ಸೆಣಸಾಟ ನಡೆಸಿದವು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಪರ ಇನಿಂಗ್ಸ್ ಆರಂಭಿಸಿದ ರೋಹಿತ್‌ ಶರ್ಮಾ, ಮೊದಲ ಓವರ್‌ನಲ್ಲೇ ಔಟಾದರು. ಚೆನ್ನೈ ವೇಗಿ ಖಲೀಲ್‌ ಅಹ್ಮದ್‌ ಎಸೆದ ಓವರ್‌ ಮೊದಲ ಮೂರು ಎಸೆತಗಳಲ್ಲಿ ರನ್‌ ಗಳಿಸಲು ವಿಫಲವಾದ ಅವರು, ನಾಲ್ಕನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಅವರು ಮಿಡ್‌ ವಿಕೆಟ್‌ನತ್ತ ಬಾರಿಸಿದ ಚೆಂಡನ್ನು ಶಿವಂ ದುಬೆ ಹಿಡಿದರು.

ಇದರೊಂದಿಗೆ, ಐಪಿಎಲ್‌ನಲ್ಲಿ 18ನೇ ಸಲ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ ಅಪಖ್ಯಾತಿಗೊಳಗಾದರು. ಆಸ್ಟ್ರೇಲಿಯಾದ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಭಾರತದ ದಿನೇಶ್‌ ಕಾರ್ತಿಕ್‌ ಸಹ ಇಷ್ಟೇ ಸಲ ಸೊನ್ನೆ ಸುತ್ತಿದ್ದು, ಮೂವರೂ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ತಲಾ 16 ಸಲ ಶೂನ್ಯಕ್ಕೆ ಔಟಾಗಿರುವ ಪಿಯೂಷ್‌ ಚಾವ್ಲಾ ಹಾಗೂ ಸುನಿಲ್‌ ನಾರಾಯಣ್‌, ನಂತರದ ಸ್ಥಾನಗಳಲ್ಲಿ ಇದ್ದಾರೆ.

ಐಪಿಎಲ್‌ನಲ್ಲಿ ಹೆಚ್ಚು ಸಲ ಸೊನ್ನೆ ಸುತ್ತಿದವರು

  • ರೋಹಿತ್ ಶರ್ಮಾ: 253 ಇನಿಂಗ್ಸ್‌ಗಳಲ್ಲಿ 18 ಸಲ

  • ಗ್ಲೆನ್‌ ಮ್ಯಾಕ್ಸ್‌ವೆಲ್‌: 129 ಇನಿಂಗ್ಸ್‌ಗಳಲ್ಲಿ 18 ಸಲ

  • ದಿನೇಶ್ ಕಾರ್ತಿಕ್‌: 234 ಇನಿಂಗ್ಸ್‌ಗಳಲ್ಲಿ 18 ಸಲ

  • ಪಿಯೂಚ್‌ ಚಾವ್ಲಾ: 92 ಇನಿಂಗ್ಸ್‌ಗಳಲ್ಲಿ 16 ಸಲ

  • ಸುನಿಲ್‌ ನಾರಾಯಣ್‌: 111 ಇನಿಂಗ್ಸ್‌ಗಳಲ್ಲಿ 16 ಸಲ

  • ರಶೀದ್‌ ಖಾನ್‌: 60 ಇನಿಂಗ್ಸ್‌ಗಳಲ್ಲಿ 15 ಸಲ

  • ಮನದೀಪ್‌ ಸಿಂಗ್‌: 98 ಇನಿಂಗ್ಸ್‌ಗಳಲ್ಲಿ 15 ಸಲ

  • ಮನೀಷ್‌ ಪಾಂಡೆ: 159 ಇನಿಂಗ್ಸ್‌ಗಳಲ್ಲಿ 14 ಸಲ

  • ಅಂಬಟಿ ರಾಯುಡು: 187 ಇನಿಂಗ್ಸ್‌ಗಳಲ್ಲಿ 14 ಸಲ

ಮತ್ತೆ ಮೊದಲ ಪಂದ್ಯದಲ್ಲಿ ಸೋಲು
ಚೆನ್ನೈ ಎದುರಿನ ಪಂದ್ಯದಲ್ಲಿ ಮುಂಬೈ ಪಡೆ 4 ವಿಕೆಟ್‌ ಅಂತರದ ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಈ ತಂಡ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 155 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಚೆನ್ನೈ, 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್‌ ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ, ಮುಂಬೈ ತಂಡ ಸತತ 13ನೇ ಆವೃತ್ತಿಯನ್ನು ಸೋಲಿನೊಂದಿಗೆ ಆರಂಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.