ಆರ್‌ಸಿಬಿಯ ವಿರಾಟ್ ಕೊಹ್ಲಿ ಹಾಗೂ ಸಿಎಸ್‌ಕೆಯ ಎಂ.ಎಸ್.ಧೋನಿ
ಪಿಟಿಐ ಚಿತ್ರಗಳು
ಚೆನ್ನೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಎದುರು ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಚೆನ್ನೈನಲ್ಲಿ ಭಾರಿ ಸವಾಲು ಕಾದಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಹೇಳಿದ್ದಾರೆ.
ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಶುಕ್ರವಾರ ಕಣಕ್ಕಿಳಿಯಲಿದೆ. ಬೆಂಗಳೂರು ಪಡೆ, ಅಲ್ಲಿನ ಪಿಚ್‌ಗೆ ತಕ್ಕಂತೆ ತಂಡದ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ವಾಟ್ಸನ್ ಎಚ್ಚರಿಸಿದ್ದಾರೆ.
ಜಿಯೊ ಸ್ಟಾರ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 'ಸಿಎಸ್‌ಕೆ ಹೊಂದಿರುವ ಬೌಲಿಂಗ್ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಚೆಪಾಕ್‌ಗೆ ಹೋಗುವುದು ಆರ್‌ಸಿಬಿ ಪಾಲಿಗೆ ದೊಡ್ಡ ಸವಾಲು. ಸಿಎಸ್‌ಕೆ ತಂಡದ ಸಾಮರ್ಥ್ಯಗಳನ್ನು ಮೀರಲು ಆರ್‌ಸಿಬಿಯು, ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಆದರೆ, ತಪ್ಪುಗಳಾಗದಂತೆ ನೋಡಿಕೊಳ್ಳಿ, ಚೆಪಾಕ್ ಕ್ರೀಡಾಂಗಣ ಕೋಟೆ ಇದ್ದಂತೆ' ಎಂದು ಹೇಳಿದ್ದಾರೆ.
2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ವಾಟ್ಸನ್, ನಂತರ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರು, ಅತ್ಯುತ್ತಮ ಸ್ಪಿನ್ನರ್‌ಗಳನ್ನು ಹೊಂದಿರುವುದೇ ತವರು ಕ್ರೀಡಾಂಗಣಲ್ಲಿ ಸಿಎಸ್‌ಕೆ ಬಲಿಷ್ಠವಾಗಿ ಕಾಣಲು ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ಚೆನ್ನೈನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದಕ್ಕೆ ತಕ್ಕಂತೆ ಸಿಎಸ್‌ಕೆ ತಂಡ ಕಟ್ಟಲಾಗಿದೆ. ಮುಂಬೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜ ಮತ್ತು ನೂರ್ ಅಹ್ಮದ್ ಅವರನ್ನು ನೋಡಿ. ಈ ಪಿಚ್‌ಗೆ ತಕ್ಕಂತೆ ಆಡುವ ಆಟಗಾರರು ಅವರು' ಎಂದು ಶ್ಲಾಘಿಸಿದ್ದಾರೆ.
'ಸಿಎಸ್‌ಕೆ ಪರ ಆಡಿದ ಮೊದಲ ಪಂದ್ಯದಲ್ಲೇ ಪರಿಣಾಮಕಾರಿ ಪ್ರದರ್ಶನ ನೀಡಿರುವುದು ನೂರ್ ಅಹ್ಮದ್ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ' ಎಂದಿದ್ದಾರೆ.
ನೂರ್ ಅಹ್ಮದ್, ಮುಂಬೈ ಎದುರು 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಅಶ್ವಿನ್, 4 ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಜಡೇಜ ವಿಕೆಟ್ ಪಡೆಯದಿದ್ದರೂ, ಮೂರು ಓವರ್‌ಗಳಲ್ಲಿ 21ರನ್ ಮಾತ್ರ ಬಿಟ್ಟುಕೊಟ್ಟಿದ್ದರು.
ಸಿಎಸ್‌ಕೆ ಹಾಗೂ ಆರ್‌ಸಿಬಿ, ಜಯದ ಓಟ ಮುಂದುವರಿಸುವ ತವಕದಲ್ಲಿವೆ. ನಾಳೆ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.