ಪ್ಯಾಟ್ ಕಮಿನ್ಸ್
ಹೈದರಾಬಾದ್: ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಇಲ್ಲಿನ ಉಪ್ಪಳದ ರಾಜೀವಗಾಂಧಿ ಅಂತರ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಮಳೆಯು ನಿರಾಸೆ ಮೂಡಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವೇಗಿ ಪ್ಯಾಟ್ ಕಮಿನ್ಸ್ ಅವರ ದಾಳಿಗೆ ಆರಂಭದಲ್ಲೇ ಕುಸಿಯಿತು. ಕೆಳ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ನೆರವಿನಿಂದ ಎದುರಾಳಿ ತಂಡಕ್ಕೆ 134 ರನ್‌ಗಳ ಸಾಧಾರಣ ಗುರಿ ನೀಡಿತ್ತು.
ಡೆಲ್ಲಿ ತಂಡದ ಇನಿಂಗ್ಸ್ ಮುಗಿಯು ತ್ತಿದ್ದಂತೆ ಮಳೆ ಆರಂಭವಾಯಿತು. ರಾತ್ರಿ 11 ಗಂಟೆಯವರೆಗೂ ಹವಾಮಾನ ಪರಿಸ್ಥಿತಿ ಸುಧಾರಿಸದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಯಿತು. ಇದರೊಂದಿಗೆ ಹಾಲಿ ರನ್ನರ್ ಅಪ್ ಹೈದರಾಬಾದ್ ತಂಡದ ಪ್ಲೇ ಆಫ್ ಕನಸು ಕೂಡ ಭಗ್ನಗೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಹೊರಬಿದ್ದಿವೆ.
ಇದಕ್ಕೂ ಮುನ್ನ ಕಮಿನ್ಸ್ (4–0–19–3) ದಾಳಿಯಿಂದಾಗಿ ಡೆಲ್ಲಿ ತಂಡವು 29 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.
ಅಗ್ರ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಕಮಿನ್ಸ್ ಮೂರು ಓವರ್‌ಗಳಲ್ಲಿ ಮೂರು ವಿಕೆಟ್ ಗಳಿಸಿದರು. ಅದೂ ಪ್ರತಿಯೊಂದು ಓವರ್‌ನ ಮೊದಲ ಎಸೆತದಲ್ಲಿ ಅವರು ವಿಕೆಟ್ ಪಡೆದರು. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಕರುಣ್ ನಾಯರ್, ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಫಫ್ ಡುಪ್ಲೆಸಿ (3 ರನ್) ಮತ್ತು ಮೂರನೇ ಓವರ್‌ನ ಪ್ರಥಮ ಎಸೆತದಲ್ಲಿ ಅಭಿಷೇಕ್ ಪೊರೆಲ್ (8 ರನ್) ಅವರ ವಿಕೆಟ್ ಗಳಿಸಿದರು. ಈ ಮೂವರು ಬ್ಯಾಟರ್‌ಗಳ ಕ್ಯಾಚ್‌ಗಳನ್ನು ವಿಕೆಟ್‌ಕೀಪರ್ ಇಶಾನ್ ಕಿಶನ್ ಅವರೇ ಪಡೆದಿದ್ದು ವಿಶೇಷ.
ಈ ವೇಳೆ ಕೆ.ಎಲ್. ರಾಹುಲ್ ಮತ್ತು ನಾಯಕ ಅಕ್ಷರ್ ಪಟೇಲ್ ಅವರು ಡೆಲ್ಲಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಹರ್ಷಲ್ ಪಟೇಲ್ ಅವರ ಎಸೆತದಲ್ಲಿ ಅಕ್ಷರ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಫೀಲ್ಡರ್ ಕಮಿನ್ಸ್‌ಗೆ ಕ್ಯಾಚ್ ಆದರು. ಇದಾಗಿ ಕೆಲವು ನಿಮಿಷಗಳ ನಂತರ ಜಯದೇವ್ ಉನದ್ಕತ್ ಅವರ ಓವರ್‌ನಲ್ಲಿ ರಾಹುಲ್ ಅವರೂ ಕೀಪರ್ ಇಶಾನ್‌ಗೆ ಕ್ಯಾಚ್ ಆದರು.
ಆಗ ಕ್ರೀಸ್‌ಗೆ ಬಂದ ಟ್ರಿಸ್ಟನ್ ಸ್ಟಬ್ಸ್ (41; 36ಎ, 4X4) ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಅವರು 6ನೇ ವಿಕೆಟ್ ಜೊತೆಯಾಟದಲ್ಲಿ ವಿಪ್ರಜ್ ನಿಗಂ (18) ಜೊತೆಗೆ 33 ರನ್ ಸೇರಿಸಿದರು. ವಿಪ್ರಜ್ ರನ್‌ಔಟ್ ಆಗಿ ಹೊರನಡೆದಾಗ ತಂಡವು 6 ವಿಕೆಟ್‌ಗಳಿಗೆ 62 ರನ್ ಗಳಿಸಿತ್ತು. ಬಳಿಕ ಆಶುತೋಷ್ ಶರ್ಮಾ (41; 26ಎ, 4X2, 6X3) ಇನಿಂಗ್ಸ್ ಚಿತ್ರಣವನ್ನೇ ಬದಲಿಸಿದರು. 7ನೇ ವಿಕೆಟ್ ಜೊತೆಯಾಟದಲ್ಲಿ ಸ್ಟಬ್ಸ್ ಮತ್ತು ಶರ್ಮಾ ಅವರು 66 ರನ್ ಸೇರಿಸಿದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 133 ರನ್ ಗಳಿಸಲು ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 133 (ಕೆ.ಎಲ್. ರಾಹುಲ್ 10, ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 41, ಆಶುತೋಷ್ ಶರ್ಮಾ 41, ವಿಪ್ರಜ್ ನಿಗಂ 18, ಜಯದೇವ್ ಉನದ್ಕತ್ 19ಕ್ಕೆ3, ಜಯದೇವ್ ಉನದ್ಕತ್ 13ಕ್ಕೆ1) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್. ಫಲಿತಾಂಶ: ಪಂದ್ಯ ರದ್ದು, ಉಭಯ ತಂಡಳಿಗೆ ತಲಾ ಒಂದು ಅಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.