ಶುಭಮನ್ ಗಿಲ್
ಹೈದರಾಬಾದ್: ವೇಗಿ ಮೊಹಮ್ಮದ್ ಸಿರಾಜ್ (17ಕ್ಕೆ4) ಅವರ ಪರಿಣಾಮಕಾರಿ ದಾಳಿಯ ಬಳಿಕ ನಾಯಕ ಶುಭಮನ್ ಗಿಲ್ (ಔಟಾಗದೇ 61; 43ಎ, 4x9)) ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಐಪಿಎಲ್‌ನ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಏಳು ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
2022ರ ಆವೃತ್ತಿಯ ಚಾಂಪಿಯನ್ ಗುಜರಾತ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಮತ್ತೊಂದೆಡೆ ಸತತ ನಾಲ್ಕು ಪಂದ್ಯಗಳನ್ನು ಸೋತ ಹಾಲಿ ರನ್ನರ್ಸ್ ಅಪ್ ತಂಡವು ಕೊನೆಯ ಸ್ಥಾನದಲ್ಲಿ ಮುಂದುವರಿಯಿತು.
ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 152 ರನ್ ಗಳಿಸಿತ್ತು. ಗುರಿಯನ್ನು ಬೆನ್ನಟ್ಟಿದ ಗುಜರಾತ್ 20 ಎಸೆತಗಳು ಇರುವಂತೆ ಮೂರು ವಿಕೆಟ್‌ಗೆ 153 ರನ್ ಗಳಿಸಿ ಸಂಭ್ರಮಿಸಿತು.
ಗುಜರಾತ್ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. 16 ರನ್ ಗಳಿಸುವಷ್ಟರಲ್ಲಿ ಸಾಯಿ ಸುದರ್ಶನ್ (5) ಮತ್ತು ಜೋಸ್ ಬಟ್ಲರ್ (0) ಅವರು ಪೆವಿಲಿಯನ್ ಸೇರಿದರು. ಆದರೆ, ಮತ್ತೊಂದೆಡೆ ತಾಳ್ಮೆಯಿಂದ ಆಡಿದ ಗಿಲ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ವಾಷಿಂಗ್ಟನ್ ಸುಂದರ್ (49;29ಎ, 4x5, 6x2) ಅವರೊಂದಿಗೆ 90 (56ಎ) ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ವಾಷಿಂಗ್ಟನ್ ಔಟಾದ ಬಳಿಕ ಗಿಲ್ ಅವರನ್ನು ಸೇರಿಕೊಂಡ ಶರ್ಫೇನ್ ರುದರ್‌ಫೋರ್ಡ್ (ಔಟಾಗದೇ 35;16ಎ, 4x6, 6x1) ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 47 (21ಎ) ರನ್ ಸೇರಿಸಿದರು.
ಮಿಂಚಿದ ಸಿರಾಜ್: ಇದಕ್ಕೂ ಮೊದಲು ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರ ಲಾಭ ಪಡೆದ ಸಿರಾಜ್ ತಮ್ಮ ತವರೂರಿನ ಅಂಗಳದಲ್ಲಿ ಮಿಂಚಿದರು. ಅವರ ಬಿರುಗಾಳಿ ವೇಗದ ಬೌಲಿಂಗ್‌ನಿಂದ ಸನ್‌ರೈಸರ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದರು.
ಮೊದಲ ಓವರ್‌ನಲ್ಲಿಯೇ ಸಿರಾಜ್ ಎಸೆತ ಆಡುವ ಭರದಲ್ಲಿ ಟ್ರಾವಿಸ್ ಹೆಡ್ (8) ಅವರು ಸಾಯಿ ಸುದರ್ಶನ್‌ಗೆ ಕ್ಯಾಚ್ ಆದರು. ಟೂರ್ನಿಯ ಆರಂಭದಿಂದಲೂ ವೈಫಲ್ಯ ಅನುಭವಿಸಿದ್ದ ಅಭಿಷೇಕ್ ಶರ್ಮಾ (18; 16ಎ) ತಾಳ್ಮೆಯಿಂದ ಆಡಿ ಆಟಕ್ಕೆ ಕುದುರಿಕೊಳ್ಳುವ ಪ್ರಯತ್ನ ಮಾಡಿದರು. ಅವರೊಂದಿಗೆ ಇಶಾನ್ ಕಿಶನ್ (17; 14ಎ) ಕೂಡ ಇನಿಂಗ್ಸ್‌ಗೆ ಬಲ ತುಂಬಲು ಯತ್ನಿಸಿದರು. ಅಭಿಷೇಕ್ ಅವರ ವಿಕೆಟ್ ಪಡೆದು ಈ ಜೊತೆಯಾಟ ವನ್ನೂ ಸಿರಾಜ್ ಮುರಿದರು.
8ನೇ ಓವರ್‌ನಲ್ಲಿ ಕನ್ನಡಿಗ
ಪ್ರಸಿದ್ಧಕೃಷ್ಣ ಹಾಕಿದ ಎಸೆತಕ್ಕೆ ಇಶಾನ್ ಕ್ಲೀನ್‌ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ನಿತೀಶ್ ರೆಡ್ಡಿ (31; 34ಎ, 4X3) ಮತ್ತು ಹೆನ್ರಿಚ್ ಕ್ಲಾಸನ್ (27; 19ಎ, 4X2, 6X1) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಆದರೆ ಸನ್‌ರೈಸರ್ಸ್ ತಂಡದ ಹೆಗ್ಗುರುತಾದ ಬೀಸಾಟದ ಛಾಯೆ ಕಾಣಲಿಲ್ಲ. ತಂಡವು 100ರ ಗಡಿ ಮುಟ್ಟಿದಾಗ 14 ಓವರ್ ಅಂತ್ಯವಾಗಿತ್ತು. ಕೊನೆಯ ಹಂತದಲ್ಲಿ ನಾಯಕ ಕಮಿನ್ಸ್ (22; 9ಎಸೆತ) ಆರ್ಭಟಿಸಿದರು. 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 8ಕ್ಕೆ152 (ನಿತೀಶ್ ಕುಮಾರ್ ರೆಡ್ಡಿ 31, ಹೆನ್ರಿಚ್ ಕ್ಲಾಸನ್ 27, ಪ್ಯಾಟ್ ಕಮಿನ್ಸ್ ಔಟಾಗದೇ 22, ಅನಿಕೇತ್ ವರ್ಮಾ 18, ಮೊಹಮ್ಮದ್ ಸಿರಾಜ್ 17ಕ್ಕೆ4, ಪ್ರಸಿದ್ಧಕೃಷ್ಣ 25ಕ್ಕೆ2, ಸಾಯಿಕಿಶೋರ್ 24ಕ್ಕೆ2). ಗುಜರಾತ್ ಟೈಟನ್ಸ್: 16.4 ಓವರ್‌ಗಳಲ್ಲಿ 3ಕ್ಕೆ 153 (ಶುಭಮನ್ ಗಿಲ್ ಔಟಾಗದೇ 61, ವಾಷಿಂಗ್ಟನ್ ಸುಂದರ್ 49, ಶೆರ್ಫೆನ್ ರುದರ್‌ಫೋರ್ಡ್ ಔಟಾಗದೇ 35; ಮೊಹಮ್ಮದ್ ಶಮಿ 28ಕ್ಕೆ 2).
ಫಲಿತಾಂಶ: ಗುಜರಾತ್ ಟೈಟನ್ಸ್‌ಗೆ ಏಳು ವಿಕೆಟ್ ಜಯ. ಪಂದ್ಯದ ಆಟಗಾರ: ಮೊಹಮ್ಮದ್ ಸಿರಾಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.