ವೈಭವ್ ಸೂರ್ಯವಂಶಿ ಅವರನ್ನು ಅಭಿನಂದಿಸುತ್ತಿರುವ ಯಶಸ್ವಿ ಜೈಸ್ವಾಲ್
(ಪಿಟಿಐ ಚಿತ್ರ)
ಜೈಪುರ: 'ನಾನು ಬೌಲರ್‌ಗಳು ಯಾರೆಂದು ನೋಡುವುದಿಲ್ಲ. ಚೆಂಡನ್ನು ನೋಡಿ ಅದಕ್ಕೆ ತಕ್ಕಂತೆ ಆಡಲು ಬಯಸುತ್ತೇನೆ' ಎಂದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಗಳಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿರುವ 14ರ ಹರೆಯದ ಪೋರ ವೈಭವ್ ಸೂರ್ಯವಂಶಿ ನುಡಿದ ದಿಟ್ಟ ಮಾತುಗಳಿವು.
ಸೋಮವಾರ ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಗಳಿಸಿದ ವೈಭವ್ ಸೂರ್ಯವಂಶಿ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.
14 ವರ್ಷದ ವೈಭವ್, 38 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಬ್ಬರಿಸಿದರು. ಆ ಮೂಲಕ ರಾಜಸ್ಥಾನ 210 ರನ್‌ಗಳ ಗುರಿಯನ್ನು 15.5 ಓವರ್‌ಗಳಲ್ಲೇ ಬೆನ್ನಟ್ಟಿತು.
'ನಾನು ತುಂಬಾ ಸಂತಸಗೊಂಡಿದ್ದೇನೆ. ಮೂರನೇ ಇನ್ನಿಂಗ್ಸ್‌ನಲ್ಲೇ ನನ್ನ ಮೊದಲ ಐಪಿಎಲ್ ಶತಕ ದಾಖಲಾಯಿತು. ಕಳೆದ ಮೂರು ನಾಲ್ಕು ತಿಂಗಳು ಕಠಿಣವಾಗಿ ಅಭ್ಯಾಸ ಮಾಡುತ್ತಿದ್ದೆ. ಅದಕ್ಕೀಗ ಫಲ ಸಿಕ್ಕಿದೆ' ಎಂದು ಹೇಳಿದ್ದಾರೆ.
'ನಾನು ಮೊದಲೇ ಹೇಳಿದಂತೆ ಐಪಿಎಲ್‌ನಲ್ಲಿ ಶತಕ ಗಳಿಸುವುದು ನನ್ನ ಕನಸಾಗಿತ್ತು. ಇದಕ್ಕಾಗಿ ಕಠಿಣವಾಗಿ ಅಭ್ಯಸಿಸುತ್ತಿದ್ದೆ. ಫಲಿತಾಂಶ ಈಗ ಮೈದಾನದಲ್ಲಿ ಗೋಚರಿಸಿದೆ' ಎಂದು ತಿಳಿಸಿದ್ದಾರೆ.
ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 166 ರನ್‌ಗಳ ಜೊತೆಯಾಟ ಕಟ್ಟಿದ್ದರು. ಈ ಕುರಿತು ಮಾತನಾಡಿದ ವೈಭವ್, 'ಅವರೊಂದಿಗೆ (ಜೈಸ್ವಾಲ್) ಬ್ಯಾಟಿಂಗ್ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಅವರು ಸಲಹೆ ಹಾಗೂ ಧನಾತ್ಮಕ ಮಾತುಗಳನ್ನು ಆಡುವುದರಿಂದ, ನನ್ನ ಬ್ಯಾಟಿಂಗ್ ಸುಲಭವಾಗುತ್ತದೆ' ಎಂದು ಹೇಳಿದ್ದಾರೆ.
'ಐಪಿಎಲ್‌ನಲ್ಲಿ ನಾನು ನೋಡಿ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಇದೂ ಒಂದು' ಎಂದು ಸಹ ಆಟಗಾರ ವೈಭವ್ ಕುರಿತು ಜೈಸ್ವಾಲ್ ಗುಣಗಾನ ಮಾಡಿದ್ದಾರೆ. 'ನಿಜಕ್ಕೂ ಅದ್ಭುತ. ಅವರು ಕಠಿಣವಾಗಿ ಅಭ್ಯ ಸಿಸುತ್ತಾರೆ. ಅವರಿಗೆ ತಮ್ಮದೇ ಆದ ಆಟ ಹಾಗೂ ತಾಳ್ಮೆ ಇದೆ. ಭವಿಷ್ಯದಲ್ಲೂ ಇದೇ ರೀತಿ ನಮ್ಮ ತಂಡದ ಪರ ಅಮೋಘ ಆಟ ಮುಂದುವರಿಸುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.
ರಾಜಸ್ಥಾನದ ತಂಡದ ಉಸ್ತುವಾರಿ ನಾಯಕ ರಿಯಾಗ್ ಪರಾಗ್ ಸಹ ವೈಭವ್ ಆಟವನ್ನು ಕೊಂಡಾಡಿದ್ದಾರೆ. 'ಕಳೆದ ಎರಡು ತಿಂಗಳು ವೈಭವ್ ಜೊತೆ ಕಳೆದಿದ್ದೇನೆ. ಅವರೇನು ಮಾಡಬಲ್ಲರು ಎಂಬುದನ್ನು ಬಲ್ಲೆ. ಗುಜರಾತ್‌ನಂತಹ ವಿಶ್ವದರ್ಜೆಯ ಬೌಲರ್‌ಗಳ ಎದುರು ಇಂತಹ ಅದ್ಭುತ ಆಟವನ್ನು ಮಾತುಗಳಲ್ಲಿ ವಿವರಿಸಲಾಗದು. ನಾವು ಈ ಗೆಲುವಿನ ಹುಡುಕಾಟದಲ್ಲಿದ್ದೆವು' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.