ವೈಭವ್ ಸೂರ್ಯವಂಶಿ
ಚಿತ್ರಗಳು: ಪಿಟಿಐ, ರಾಯಿಟರ್ಸ್
ಜೈಪುರ: ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.
ಸೂರ್ಯವಂಶಿ ವಯಸ್ಸು ಶನಿವಾರಕ್ಕೆ 14 ವರ್ಷ 23 ದಿನಗಳು. ಹಾಗಾಗಿ, ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅತಿ ಕಿರಿಯ ಕ್ರಿಕೆಟಿಗ ಎನಿಸಿಕೊಂಡರು.
ಸೂರ್ಯವಂಶಿಗೆ ಮಧ್ಯಮ ವೇಗಿ ಸಂದೀಪ್ ಶರ್ಮಾ ಬದಲು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಲಾಗಿತ್ತು.
ಮೊದಲ ಎಸೆತದಲ್ಲೇ ಸಿಕ್ಸರ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ರಾಯಲ್ಸ್ ಪರ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಜೊತೆ ಸೂರ್ಯವಂಶಿ ಇನಿಂಗ್ಸ್ ಆರಂಭಿಸಿದರು. ತಾವೆದುರಿಸಿದ ಮೊದಲ ಎಸೆತವನ್ಣೇ ಸಿಕ್ಸರ್‌ಗೆ ಅಟ್ಟಿದ ಈ ಪೋರ, ಕ್ರೀಡಾಂಗಣದಲ್ಲಿ ನೆರದಿದ್ದವರು ಹುಬ್ಬೇರುವಂತೆ ಮಾಡಿದರು.
ನಂತರ ಆವೇಶ್ ಖಾನ್ ಬೌಲಿಂಗ್‌ನಲ್ಲಿಯೂ ಸಿಕ್ಸರ್, ಬೌಂಡರಿ ಸಿಡಿಸಿದರು.
ಶಾರ್ದೂಲ್, ಆವೇಶ್ ಮಾತ್ರವಲ್ಲದೆ ದಿಗ್ವೇಶ್ ರಾಠಿ, ರವಿ ಬಿಷ್ಣೋಯಿ ಅವರಂತಹ ಅತ್ಯುತ್ತಮ ಸ್ಪಿನ್ನರ್‌ಗಳ ಎದುರೂ ಲೀಲಾಜಾಲಾವಾಗಿ ಬ್ಯಾಟ್ ಬೀಸಿ ರಂಜಿಸಿದರು.
ಕೇವಲ 20 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 34 ರನ್ ಕಲೆಹಾಕಿದ್ದ ವೇಳೆ ಔಟಾದರು.
ಏಡನ್ ಮರ್ಕ್ರಂ ಎಸೆದ ಇನಿಂಗ್ಸ್‌ನ 9ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಚೆಂಡಿನ ಗತಿ ಅಂದಾಜಿಸಲು ವಿಫಲವಾಗಿ ಸ್ಟಂಪ್ ಔಟ್ ಆದರು.
ಭಾವುಕನಾದ ಬಾಲಕನಿಗೆ ಧೈರ್ಯ ಹೇಳಿದ ನೆಟ್ಟಿಗರು
ಪದಾರ್ಪಣೆ ಪಂದ್ಯದಲ್ಲೇ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದ ಸೂರ್ಯವಂಶಿ, ಕ್ರಿಕೆಟ್ ಜಗತ್ತಿನಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ. ಆದಾಗ್ಯೂ ಅವರು, ಔಟಾಗಿ ಡಗೌಟ್‌ನತ್ತ ತೆರಳುವಾಗ ಭಾವುಕರಾದರು. ಆ ಸಂದರ್ಭದ ವಿಡಿಯೊಗಳು, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, 'ಚೆನ್ನಾಗಿ ಆಡಿದ್ದೀಯ ಅಳಬೇಡ', 'ಎಂಥಾ ಮುಗ್ಧತೆ, ಎಷ್ಟು ಮುದ್ದಾಗಿದೆ', 'ನೀನು ಚಾಂಪಿಯನ್', 'ಭವಿಷ್ಯ ನಿನ್ನದೇ', 'ಇದು ಆರಂಭವಷ್ಟೇ, ನಿಮಗೆ ಉಜ್ವಲ ಭವಿಷ್ಯವಿದೆ', 'ಹಲವು ಅನುಭವಿ ಆಟಗಾರರಿಗಿಂತ ಎಷ್ಟೋ ಉತ್ತಮ ಇನಿಂಗ್ಸ್ ಆಡಿದ್ದೀಯ' ಎಂಬಿತ್ಯಾದಿ ಹೇಳಿಕೆಗಳ ಮೂಲಕ ಧೈರ್ಯ ತುಂಬಿದ್ದಾರೆ.
ಮತ್ತೊಬ್ಬರು, 'ಅಂತಹ ಅದ್ಭುತ ಇನಿಂಗ್ಸ್ ಆಡಿದ ನಂತರವೂ ಸೂರ್ಯವಂಶಿ ಅಳುತ್ತಿದ್ದದ್ದು ಬಹುಶಃ ಮನೆಗೆ ಹೋಗಿ ಹೋಂ ವರ್ಕ್ ಮಾಡಬೇಕು ಎಂಬ ಕಾರಣಕ್ಕಿರಬಹುದು' ಎಂದು ಚಟಾಕಿ ಹಾರಿಸಿದ್ದಾರೆ.
ಕ್ರಿಕೆಟ್ ದಿಗ್ಗಜರು ಸೂರ್ಯವಂಶಿ ಆಟಕ್ಕೆ ಮೆಚ್ಚುಗೆ ಸೂಚಿಸಿ, ಬೆನ್ನುತಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.