ADVERTISEMENT

IPL 2025: ಡೆಲ್ಲಿಗೆ 'ಹ್ಯಾಟ್ರಿಕ್' ಗೆಲುವು; ಚೆನ್ನೈಗೆ ಸತತ 3ನೇ ಸೋಲು

2010ರ ಬಳಿಕ ಚೆಪಾಕ್‌ನಲ್ಲಿ ಗೆಲುವು ದಾಖಲಿಸಿದ ಡೆಲ್ಲಿ

ಪಿಟಿಐ
Published 5 ಏಪ್ರಿಲ್ 2025, 17:57 IST
Last Updated 5 ಏಪ್ರಿಲ್ 2025, 17:57 IST
<div class="paragraphs"><p>ಕೆ.ಎಲ್. ರಾಹುಲ್&nbsp;</p></div>

ಕೆ.ಎಲ್. ರಾಹುಲ್ 

   

(ಚಿತ್ರ ಕೃಪೆ: X/@IPL)

ಚೆನ್ನೈ: ಕನ್ನಡಿಗ ಕೆ.ಎಲ್. ರಾಹುಲ್ ಚೆಂದದ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು  ಜಯದ ‘ಹ್ಯಾಟ್ರಿಕ್’ ಸಂಭ್ರಮ ಆಚರಿಸಿತು. ಡೆಲ್ಲಿ ತಂಡವು 15 ವರ್ಷಗಳ ನಂತರ ಚೆನ್ನೈನಲ್ಲಿ ಸಾಧಿಸಿದ ಗೆಲುವು ಇದಾಗಿದೆ.

ADVERTISEMENT

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 25 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು. ಚೆನ್ನೈ ತಂಡಕ್ಕೆ ಇದು ಸತತ ಮೂರನೇ ಸೋಲು. 

ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿಯೇ ಖಲೀಲ್ ಅಹಮದ್ ಎಸೆತವನ್ನು ಆಡುವ ಆತುರದಲ್ಲಿ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರು ಅಶ್ವಿನ್‌ಗೆ ಕ್ಯಾಚಿತ್ತರು. ಇನ್ನೊಂದು ಬದಿಯಲ್ಲಿದ್ದ ರಾಹುಲ್ ಇನಿಂಗ್ಸ್‌ ಕಟ್ಟುವ ಹೊಣೆಯನ್ನು ತಮ್ಮ ಮೇಲೆ ಎಳೆದುಕೊಂಡರು. ಅವರಿಗೆ ಅಭಿಷೇಕ್ ಪೊರೆಲ್  ಉತ್ತಮ ಜೊತೆ ನೀಡಿದರು. ರಾಹುಲ್ (77; 51ಎ, 4X6, 6X3) ಮತ್ತು ಅಭಿಷೇಕ್ (33; 20ಎ, 4X4, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ  6 ವಿಕೆಟ್‌ಗಳಿಗೆ 183 ರನ್‌ ಪೇರಿಸಿತು. 

ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಆರಂಭ ಚೆನ್ನಾಗಿರಲಿಲ್ಲ. 41 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ವಿಪ್ರಜ್ ನಿಗಮ್ (27ಕ್ಕೆ2) ಮತ್ತು ಮುಕೇಶ್ ಕುಮಾರ್ (36ಕ್ಕೆ1) ಅವರ ದಾಳಿಯ ಮುಂದೆ ತಂಡದ ರನ್‌ ಗಳಿಕೆ ವೇಗ ಕುಸಿಯಿತು. ಮಧ್ಯಮ ಕ್ರಮಾಂಕದಲ್ಲಿ ವಿಜಯಶಂಕರ್ (ಔಟಾಗದೇ 69; 54ಎ, 4X5, 6X1) ಮತ್ತು ಅನುಭವಿ ಮಹೇಂದ್ರಸಿಂಗ್ ಧೋನಿ (ಔಟಾಗದೇ 30; 26ಎ, 4X1, 6X1) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಡೆಲ್ಲಿ ಬೌಲರ್‌ಗಳು ಬಿಗಿ ಹಿಡಿತ ಸಾಧಿಸಿದರು. ಇದರಿಂದಾಗಿ ಚೆನ್ನೈ ಬಳಗಕ್ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 158 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. 

ರಾಹುಲ್ ಬ್ಯಾಟಿಂಗ್: ಹೋದ ವರ್ಷ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್ ಈ ಸಲ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಡುತ್ತಿದ್ದಾರೆ. ವಿಕೆಟ್‌ಕೀಪರ್ ಬ್ಯಾಟರ್ ರಾಹುಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಹುಲ್ ಆಡಿರಲಿಲ್ಲ. ಅವರು ‘ಪಿತೃತ್ವ ರಜೆ’ ಪಡೆದಿದ್ದರು. ವಿಶಾಖಪಟ್ಟಣದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಎದುರು 15 ರನ್ ಗಳಿಸಿದ್ದರು. 

ಆದರೆ ಈ ಪಂದ್ಯದಲ್ಲಿ ಅವರು ಚೆಂದದ ಬ್ಯಾಟಿಂಗ್ ತೋರಿಸಿದರು.  ಈ ತಿಂಗಳ 18ರಂದು 33 ವಸಂತ ಪೂರೈಸಲಿರುವ ರಾಹುಲ್, ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು. ಅವರಿಗೆ  ಒಟ್ಟಾರೆ ಐಪಿಎಲ್‌ನಲ್ಲಿ ಇದು 39ನೇಯದ್ದು.

ಅಭಿಷೇಕ್ ಅವರಿಗೆ ಎರಡನೇ ಓವರ್‌ನಲ್ಲಿ ಜೀವದಾನ ಲಭಿಸಿತು. ಇದರ ಲಾಭವನ್ನು ಪಡೆದ ಅವರು ಇನಿಂಗ್ಸ್‌ಗೆ ಬಲ ತುಂಬಿದರು. ಸ್ಪಿನ್ನರ್ ರವೀಂದ್ರ ಜಡೇಜ ಓವರ್‌ನಲ್ಲಿ ಅಭಿಷೇಕ್ ಔಟಾದರು. ಆಗ ರಾಹುಲ್ ಜೊತೆಗೂಡಿದ ನಾಯಕ ಅಕ್ಷರ್ ಪಟೇಲ್ (21; 14ಎ) ಅವರೂ ರನ್‌ ವೇಗ ನಿರ್ವಹಿಸಿದರು.  ಅವರ ನಂತರ ಸಮೀರ್ ರಿಜ್ವಿ (20 ;15ಎ) ಕೂಡ  ಒಂದಿಷ್ಟು ಹೊತ್ತು ರಾಹುಲ್‌ಗೆ ಜೊತೆ ನೀಡಿದರು. ಕೊನೆ ಓವರ್‌ನಲ್ಲಿ ರಾಹುಲ್ ಅವರು ಮಹೀಷ ಪಥಿರಾಣ ಎಸೆತ ಆಡುವ ಭರದಲ್ಲಿ ವಿಕೆಟ್‌ಕೀಪರ್ ಧೋನಿಗೆ ಕ್ಯಾಚಿತ್ತರು.

ಟ್ರಿಸ್ಟನ್ ಸ್ಟಬ್ಸ್‌ 12 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗುಳಿದರು. 200ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಅವರು ತಂಡದ ಮೊತ್ತ ಹೆಚ್ಚಲು ಕಾರಣರಾದರು.

ಸಂಕ್ಷಿಪ್ತ ಸ್ಕೋರು

ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 6ಕ್ಕೆ183 (ಕೆ.ಎಲ್. ರಾಹುಲ್ 77, ಅಭಿಷೇಕ್ ಪೊರೆಲ್ 33, ಅಕ್ಷರ್ ಪಟೇಲ್ 21, ಸಮೀರ್ ರಿಜ್ವಿ 20, ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 24, ಖಲೀಲ್ ಅಹಮದ್ 25ಕ್ಕೆ2, ರವೀಂದ್ರ ಜಡೇಜ 19ಕ್ಕೆ1, ನೂರ್ ಅಹಮದ್ 36ಕ್ಕೆ1, ಮಥೀಷ ಪಥಿರಾಣ 31ಕ್ಕೆ1)

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 5ಕ್ಕೆ158 (ವಿಜಯ ಶಂಕರ್ ಔಟಾಗದೇ 69, ಶಿವಂ ದುಬೆ 18, ಮಹೇಂದ್ರಸಿಂಗ್ ಧೋನಿ ಔಟಾಗದೇ 30, ವಿಪ್ರಜ್ ನಿಗಮ್ 27ಕ್ಕೆ2, ಮಿಚೆಲ್ ಸ್ಟಾರ್ಕ್ 27ಕ್ಕೆ1, ಮುಕೇಶ್ ಕುಮಾರ್ 36ಕ್ಕೆ1) ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 25 ರನ್‌ಗಳ ಜಯ. ಪಂದ್ಯಶ್ರೇಷ್ಠ: ಕೆ.ಎಲ್. ರಾಹುಲ್.

ಪಂದ್ಯ ವೀಕ್ಷಿಸಿದ ಧೋನಿ ಅಪ್ಪ ಅಮ್ಮ

ಚೆನ್ನೈ (ಪಿಟಿಐ): ಮಹೇಂದ್ರಸಿಂಗ್ ಧೋನಿ ಅವರ ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಿಕಾ ದೇವಿ ಅವರು ಶನಿವಾರ  ಚೆಪಾಕ್‌ನಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಿದರು.  ಧೋನಿ 2008ರಿಂದಲೂ ಚೆನ್ನೈ ತಂಡಕ್ಕೆ ಆಡುತ್ತಿದ್ದಾರೆ. ಆದರೆ ಇದೇ ಮೊದಲ ಸಲ ಧೋನಿ ಆಡಿದ ಪಂದ್ಯವನ್ನು ಅವರ ತಂದೆ ತಾಯಿ ವೀಕ್ಷಿಸಲು ಆಗಮಿಸಿದ್ದರು. ಧೋನಿಯವರ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಕೂಡ  ಈ ಸಂದರ್ಭದಲ್ಲಿ ಹಾಜರಿದ್ದರು.  ಗಾಯಗೊಂಡಿರುವ ಋತುರಾಜ್ ಗಾಯಕವಾಡ್ ಅವರು ಈ ಪಂದ್ಯದಿಂದ ವಿಶ್ರಾಂತಿ ಪಡೆಯುವರು. ಅವರ ಬದಲಿಗೆ ಧೋನಿ ನಾಯಕತ್ವ ವಹಿಸುವರು ಎಂಬ ಮಾತುಗಳು ಶುಕ್ರವಾರ ಕೇಳಿಬಂದಿದ್ದವು. ಆದರೆ ಋತುರಾಜ್ ಅವರು ಆಡಿದರು. ನಾಯಕತ್ವವನ್ನು ವಹಿಸಿದರು.  ಟಾಸ್ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಋತುರಾಜ್ ‘ನನ್ನ ಮೊಣಕೈ ಗಾಯವು ಶಮನವಾಗಿದೆ. ಫಿಟ್ ಆಗಿದ್ದೇನೆ’ ಎಂದರು.  ರಾಂಚಿಯ ಧೋನಿ ಅವರಿಗೆ ಈ ಟೂರ್ನಿಯು ಕೊನೆಯದ್ದು ಎನ್ನಲಾಗಿದೆ. 43 ವರ್ಷದ ಧೋನಿ ಕೆಲವು ವರ್ಷಗಳ ಹಿಂದೆಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಐಪಿಎಲ್‌ನಿಂದಲೂ ಅವರು ಶೀಘ್ರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್...

2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ (ಶನಿವಾರ) ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.

ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅತ್ತ ಚೆನ್ನೈ, ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲಿನೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಚೆನ್ನೈ ತಂಡವನ್ನು ಋತುರಾಜ್ ಗಾಯಕವಾಡ್ ಮುನ್ನಡೆಸುತ್ತಿದ್ದಾರೆ. ಈ ಮೊದಲು ಋತುರಾಜ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.

ಸಿಎಸ್‌ಕೆ ತಂಡದಲ್ಲಿ ಡೆವೊನ್ ಕಾನ್ವೆ ಹಾಗೂ ಮುಖೇಶ್ ಚೌಧರಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಡೆಲ್ಲಿ ತಂಡದಲ್ಲಿ ಸಮೀರ್ ರಿಜ್ವಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.