ADVERTISEMENT

ಭಾರತೀಯ ಕೋಟಾದಲ್ಲಿ IPL ಹರಾಜಿಗೆ ಆಸೀಸ್ ಆಟಗಾರ ಎಂಟ್ರಿ: ಹೇಗೆ...?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 5:24 IST
Last Updated 10 ಡಿಸೆಂಬರ್ 2025, 5:24 IST
<div class="paragraphs"><p>&nbsp; ನಿಖಿಲ್ ಚೌಧರಿ</p></div>

  ನಿಖಿಲ್ ಚೌಧರಿ

   

ಚಿತ್ರ:@wyd_ismail

ಇಂಡಿಯನ್ ಪ್ರೀಮಿಯರ್ ಲೀ‌ಗ್ 2026ರ ಮಿನಿ ಹರಾಜಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಐಪಿಎಲ್ ಸಮಿತಿ ನಿನ್ನೆ (ಮಂಗಳವಾರ) ಹರಾಜಿನಲ್ಲಿ ಭಾಗಿಯಾಗಲಿರುವ 350 ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಚ್ಚರಿ ಎಂಬಂತೆ ಆಸ್ಟ್ರೇಲಿಯಾ ಪರ ಆಡುವ ಆಟಗಾರನೊಬ್ಬ ಭಾರತೀಯರ ಕೋಟಾದಲ್ಲಿ ಸ್ಥಾನ ಪಡೆದಿದ್ದಾರೆ.

ADVERTISEMENT

ದೆಹಲಿಯಲ್ಲಿ ಜನಿಸಿ, ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುತ್ತಿರುವ ನಿಖಿಲ್ ಚೌಧರಿ ಹೆಸರನ್ನು ಭಾರತೀಯ ಆಟಗಾರರ ಕೋಟಾದಡಿಯಲ್ಲಿ ಅಂತಿಮ ಪಟ್ಟಿಗೆ ಸೇರಿಸಲಾಗಿದೆ. ನಿಖಿಲ್, ಸದ್ಯ ಆಸ್ಟ್ರೇಲಿಯಾದಲ್ಲಿ ಲಿಸ್ಟ್ ಎ ಹಾಗೂ ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಹೊಬಾರ್ಟ್ ಹರಿಕೇನ್ಸ್ ಪರ ಅಡುತ್ತಾರೆ.

ನಿಖಿಲ್ ಚೌದರಿ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ ಮೂಲಕ ದೇಶೀಯ ಆಟಗಾರನಾಗಿ ಹರಾಜಿಗೆ ಪ್ರವೇಶಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಚರ್ಚೆಯ ವಿಷಯವಾಗಿದೆ.

ಬಿಸಿಸಿಐ ನಿಯಮ ಏನಿದೆ?

ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವವರೆಗೆ ಯಾವುದೇ ಭಾರತೀಯ ಆಟಗಾರ ವಿದೇಶಿ ಲೀಗ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ನಿಯಮವಿದೆ. ನಿಖಿಲ್ ಬಿಬಿಎಲ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಬ್ಯಾಟಿಂಗ್ ಆಲ್‌ರೌಂಡರ್ ಆಗಿರುವ ಅವರು, ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ನಲ್ಲಿ ಟ್ಯಾಸ್ಮೇನಿಯಾವನ್ನು ಪ್ರತಿನಿಧಿಸುತ್ತಾರೆ. ಕಳೆದ ತಿಂಗಳು ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧ ನಿಖಿಲ್ 184 ಎಸೆತಗಳಲ್ಲಿ 163 ರನ್ ಗಳಿಸಿದ್ದರು.

ನಿಖಿಲ್ ಚೌಧರಿ ಯಾರು?

ದೆಹಲಿಯಲ್ಲಿ ಜನಿಸಿದ್ದ ನಿಖಿಲ್, ಎರಡು ವರ್ಷದ ಮಗು ಇರುವಾಗಲೇ ಹೆತ್ತವರ ಜೊತೆ ಪಂಜಾಬ್‌ಗೆ ವಲಸೆ ಹೋಗುತ್ತಾರೆ. ಅಲ್ಲಿ ಅವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಭಾರತ ತಂಡದ ಪರ ಆಡುವ ಕನಸು ಹೊಂದಿದ್ದ ಇವರು, 2017ರಲ್ಲಿ ವಿಜಯ್ ಹಜಾರೆ ಟ್ರೋಫಿ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದರು.

2020ರಲ್ಲಿ ಕೋವಿಡ್–19ನಿಂದಾಗಿ ಲಾಕ್‌ಡೌನ್ ಆದಾಗ ಸಂಬಂಧಿಕರನ್ನು ಭೇಟಿ ಮಾಡಲು ಆಸ್ಟ್ರೇಲಿಯಾಕ್ಕೆ ತೆರಳಿದ ಅವರು ಅಲ್ಲಿಯೇ ಸಿಲುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ಆಸ್ಟ್ರೇಲಿಯಾದಲ್ಲೇ ಅವರು ಕ್ಲಬ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರ ಉತ್ತಮ ಪ್ರದರ್ಶನದಿಂದಾಗಿ ಅಲ್ಲಿನ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡರು. ಆದರೆ, ಅವರು ಭಾರತದಿಂದ ನಿವೃತ್ತಿ ಹೊಂದಿಲ್ಲ ಎಂಬುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.