ADVERTISEMENT

IPL-2020 | ಕಿಂಗ್ಸ್ ಆಲ್‌ರೌಂಡ್ ಪ್ರದರ್ಶನ; ಆರ್‌ಸಿಬಿಗೆ 97 ರನ್ ಸೋಲು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 18:02 IST
Last Updated 24 ಸೆಪ್ಟೆಂಬರ್ 2020, 18:02 IST
ರಾಹುಲ್‌ ಬ್ಯಾಟಿಂಗ್‌ ವೈಖರಿ (ಟ್ವಿಟರ್ ಚಿತ್ರ)
ರಾಹುಲ್‌ ಬ್ಯಾಟಿಂಗ್‌ ವೈಖರಿ (ಟ್ವಿಟರ್ ಚಿತ್ರ)   

ದುಬೈ: ಆಲ್‌ರೌಂಡ್‌ಪ್ರದರ್ಶನ ತೋರಿದ ಕಿಂಗ್ಸ್‌ ಇಲವೆನ್ ಪಂಜಾಬ್‌ ತಂಡ‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ97 ರನ್‌ ಅಂತರದ ಬಾರೀ ಗೆಲುವು ಸಾಧಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್‌ ಪರ ನಾಯಕ ರಾಹುಲ್‌ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 69 ಎಸೆತಗಳನ್ನು ಎದುರಿಸಿದ ಅವರು14 ಬೌಂಡರಿ ಮತ್ತು 7 ಸಿಕ್ಸರ್ 132 ರನ್‌ ಗಳಿಸಿದರು. ಇದು ಐಪಿಎಲ್‌ನಲ್ಲಿ ಭಾರತದ ಪರ ಗರಿಷ್ಠ ಮೊತ್ತ ಮತ್ತು ಯಾವುದೇ ತಂಡದ ನಾಯಕನಿಂದ ಮೂಡಿ ಬಂದ ಗರಿಷ್ಠ ಸ್ಕೋರ್‌ ಆಗಿದೆ. ಜೊತೆಗೆಇದು ಐಪಿಎಲ್‌ನಲ್ಲಿ ರಾಹುಲ್‌ಗೆ2ನೇ ಶತಕವಾಗಿದ್ದು, ಈ ಬಾರಿ ಐಪಿಎಲ್‌ನಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ.

ಹೀಗಾಗಿ ಪಂಜಾಬ್‌ ಪಡೆ ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಡು 206 ರನ್‌ ಕಲೆಹಾಕಿತು. ಈ ಮೊತ್ತದೆದರು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ADVERTISEMENT

ನಿರಂತರವಾಗಿ ವಿಕೆಟ್‌ ಕಳೆದುಕೊಂಡದ್ದರಿಂದಾಗಿ ಕೇವಲ 109 ರನ್‌ಗಳಿಗೆ ಆಲೌಟ್ ಆಗಬೇಕಾಯಿತು. ಈ ತಂಡದ ಪರ ವಾಷಿಂಗ್ಟನ್‌ ಸುಂದರ್‌ (30), ಎಬಿ ಡಿ ವಿಲಿಯರ್ಸ್‌ (28), ಆ್ಯರನ್‌ ಫಿಂಚ್ (20) ಹಾಗೂ ಶಿವಂ ದುಬೆ (12) ಹೊರತುಪಡಿಸಿ ಉಳಿದವರ್ಯಾರೂ ಎರಡಂಕಿ ಮುಟ್ಟಲಿಲ್ಲ.

ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ, ಮುರುಗನ್‌ ಅಶ್ವಿನ್‌ ತಲಾ ಮೂರು ವಿಕೆಟ್‌ ಪಡೆದರೆ, ಶೇಲ್ಡನ್‌ ಕಾರ್ಟ್ರೆಲ್‌ 2 ವಿಕೆಟ್‌ ಕಬಳಿಸಿದರು.ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ಕೆಎಲ್‌ಗೆ2 ಸಾವಿರ ರನ್
ರಾಹುಲ್‌ ಈ ಪಂದ್ಯದಲ್ಲಿ 2 ರನ್‌ ಗಳಿಸಿದಾಗ ಐಪಿಎಲ್‌ನಲ್ಲಿ 2 ಸಾವಿದ ರನ್‌ ಪೂರೈಸಿದ ಸಾಧನೆ ಮಾಡಿದರು. ಇದರೊಂದಿಗೆ ವೇಗವಾಗಿ 2 ಸಾವಿರ ರನ್‌ ಪೂರೈಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ಇದು ರಾಹುಲ್‌ಗೆ 60ನೇ ಇನಿಂಗ್ಸ್‌.

ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನಕ್ರಿಸ್‌ ಗೇಲ್‌ (48) ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಶಾನ್‌ ಮಾರ್ಸ್ (52)‌ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.