ADVERTISEMENT

IPL-2020: ನೈಟ್ ರೈಡರ್ಸ್‌ಗೆ ಮೊದಲ ಗೆಲುವು

ಪಿಟಿಐ
Published 26 ಸೆಪ್ಟೆಂಬರ್ 2020, 20:45 IST
Last Updated 26 ಸೆಪ್ಟೆಂಬರ್ 2020, 20:45 IST
ಶುಭಮನ್‌ ಗಿಲ್ ಬ್ಯಾಟಿಂಗ್ ವೈಖರಿ (ಟ್ವಿಟರ್‌ ಚಿತ್ರ)
ಶುಭಮನ್‌ ಗಿಲ್ ಬ್ಯಾಟಿಂಗ್ ವೈಖರಿ (ಟ್ವಿಟರ್‌ ಚಿತ್ರ)   

ಅಬುಧಾಬಿ: ಕಡಿಮೆ ಮೊತ್ತ ದಾಖಲಾದ ಪಂದ್ಯದಲ್ಲಿಕರ್ನಾಟಕದ ಮನೀಷ್ ಪಾಂಡೆ (51; 38 ಎಸೆತ; 3 ಬೌಂಡರಿ, 2 ಸಿಕ್ಸರ್) ಮತ್ತು ಪಂಜಾಬ್‌ನ ಶುಭಮನ್ ಗಿಲ್ (ಔಟಾಗದೆ 70; 62 ಎ, 5 ಬೌಂ, 2 ಸಿ) ಅರ್ಧಶತಕ ಗಳಿಸಿದರು. ಆದರೆ ಸಂಘಟಿತ ಹೋರಾಟದ ಫಲ ಶುಭಮನ್ ಗಿಲ್ ಪ್ರತಿನಿಧಿಸುವ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಲಭಿಸಿತು. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿಕೋಲ್ಕತ್ತ ಏಳು ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಗಳಿಸಿತು.

ಮೊದಲ ಪಂದ್ಯದಲ್ಲಿ ಸೋತ ತಂಡಗಳ ಮುಖಾಮುಖಿಗೆಶೇಖ್ ಝಯೀದ್ ಕ್ರೀಡಾಂಗಣ ವೇದಿಕೆಯಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡ ಕಳೆದುಕೊಂಡದ್ದು ಕೇವಲ ನಾಲ್ಕು ವಿಕೆಟ್‌. ಆದರೆ ಗಳಿಸಿದ ಮೊತ್ತ 142. ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ್ತ ಆರು ರನ್ ಗಳಿಸುವಷ್ಟರಲ್ಲಿ ಸುನಿಲ್ ನಾರಾಯಣ್ ವಿಕೆಟ್ ಕಳೆದುಕೊಂಡರೂ ಶುಭಮನ್ ಗಿಲ್ ಮತ್ತು ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿದರು.

10 ಎಸೆತಗಳ ಅಂತರದಲ್ಲಿ ರಾಣಾ ಮತ್ತು ನಾಯಕ ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಾಗ ಕೋಲ್ಕತ್ತ ಪಾಳಯದಲ್ಲಿ ಆತಂಕ ಮೂಡಿದ್ದು ನಿಜ. ಆದರೆ ಗಿಲ್ ಜೊತೆಗೂಡಿದ ಏಯಾನ್ ಮಾರ್ಗನ್ ನಾಲ್ಕನೇ ವಿಕೆಟ್‌ಗೆ 92 ರನ್‌ ಸೇರಿಸಿ ಸುಲಭ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ತಂಡ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.

ADVERTISEMENT

ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ವಾರ್ನರ್: ಜಾನಿ ಬೆಸ್ಟೊ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಡೇವಿಡ್‌ ವಾರ್ನರ್ ಹೈದರಾಬಾದ್ ಪರ ಆಕ್ರಮಣಕಾರಿ ಆಟವಾಡಿದರು. ಬೆಸ್ಟೊ ನಾಲ್ಕನೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಬೌಲ್ಡ್‌ ಆದರು. ಆಗ ಕ್ರೀಸ್‌ಗೆ ಬಂದ ಪಾಂಡೆ ಅವರ ಬ್ಯಾಟಿಂಗ್ ಬಲದಿಂದ ತಂಡ ಗೌರವಾರ್ಹ ಮೊತ್ತ ಗಳಿಸಿತು.

ಹತ್ತನೇ ಓವರ್‌ನಲ್ಲಿ ವಾರ್ನರ್ (36; 30ಎ, 2ಬೌಂ 1ಸಿ) ವಿಕೆಟ್‌ ಕಳೆದುಕೊಂಡರು. ಪಾಂಡೆ ಜೊತೆಗೂಡಿದ ವೃದ್ಧಿಮಾನ್ ಸಹಾ (30; 31, 1ಬೌಂ, 1ಸಿ) ತಾಳ್ಮೆಯಿಂದ ಆಡಿ ಮೂರನೇ ವಿಕೆಟ್‌ಗೆ 62 ರನ್ ಸೇರಿಸಿದರು. 35 ಎಸೆತಗಳಲ್ಲಿ ಪಾಂಡೆ ಅರ್ಧಶತಕ ಗಳಿಸಿದರು. 18ನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ರಾಜಸ್ಥಾನದ ಕಮಲೇಶ್‌ಗೆ ಇದು ಐಪಿಎಲ್‌ನಲ್ಲಿ ಪದಾರ್ಪಣೆಯ ಪಂದ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.