ADVERTISEMENT

IPL-2020 | KXIP vs RR: ಸಹಸ್ರ ಸಿಕ್ಸರ್‌ ಸರದಾರ 'ಕ್ರಿಸ್ ಗೇಲ್'

ಶತಕ ತಪ್ಪಿಸಿಕೊಂಡ ಗೇಲ್: ಕಿಂಗ್ಸ್ ಇಲೆವನ್ ಪಂಜಾಬ್ ಹೋರಾಟದ ಮೊತ್ತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 3:57 IST
Last Updated 31 ಅಕ್ಟೋಬರ್ 2020, 3:57 IST
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ವೈಖರಿ–ಪಿಟಿಐ ಚಿತ್ರ
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ವೈಖರಿ–ಪಿಟಿಐ ಚಿತ್ರ   

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಒಂದು ಸಾವಿರ ಸಿಕ್ಸರ್‌ ಗಳಿಸಿದ ದಾಖಲೆ ಮಾಡಿದ ಕ್ರಿಸ್ ಗೇಲ್ ಶುಕ್ರವಾರ ಕೇವಲ ಒಂದು ರನ್ ಅಂತರದಿಂದ ಶತಕ ದಾಖಲಿಸುವುದನ್ನು ತಪ್ಪಿಸಿಕೊಂಡರು.20-20 ಕ್ರಿಕೆಟ್ ಮಾದರಿಯಲ್ಲಿಸಾವಿರ ಸಿಕ್ಸರ್ ಸಿಡಿಸಿದ ದಾಖಲೆ ಬರೆದರು.

ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ನಡೆದ ಪಂದ್ಯದಲ್ಲಿ ಎಂಟು ಸಿಕ್ಸರ್‌ಗಳನ್ನು ಸಿಡಿಸಿದ ಗೇಲ್ ಒಟ್ಟು 1000 ಸಿಕ್ಸರ್ ಸಿಡಿಸಿದ ಏಕೈಕ ಆಟಗಾರನಾದರು. ಕೇವಲ 63 ಎಸೆತಗಳಲ್ಲಿ 99 ರನ್ ಗಳಿಸಿದ ಅವರ ಬಲದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 185 ರನ್‌ಗಳ ಮೊತ್ತ ಪೇರಿಸಿತು.

ರಾಯಲ್ಸ್‌ ವೇಗಿ ಜೋಫ್ರಾ ಆರ್ಚರ್ ಹಾಕಿದ ಕೊನೆಯ ಓವರ್‌ನ ನಾಲ್ಕನೇ ಎಸೆತ ಯಾರ್ಕರ್‌ಗೆ ಕ್ಲೀನ್ ಬೌಲ್ಡ್ ಆಗುವ ಮುನ್ನ ಕ್ರಿಸ್ ಗೇಲ್, 41ನೇ ವಯಸ್ಸಿನಲ್ಲಿಯೂ ತಾವು ’ಯುನಿವರ್ಸ್ ಬಾಸ್‘ ಎಂದು ತೋರಿಸಿಕೊಟ್ಟರು.

ADVERTISEMENT

ಜೋಫ್ರಾ ಹಾಕಿದ ಮೊದಲ ಓವರ್‌ನಲ್ಲಿ ಮನದೀಪ್ ಸಿಂಗ್ ಔಟಾದಾಗ ಕ್ರೀಸ್‌ಗೆ ಬಂದ ಗೇಲ್, ನಾಯಕ ರಾಹುಲ್‌ ಜೊತೆಗೂಡಿ ಎರಡನೇ ವಿಕೆಟ್‌ಗೆ 120 ರನ್‌ ಸೇರಿಸಿದರು.

ಇದರಲ್ಲೂ ಗೇಲ್ ಅವರದ್ದೇ ಶರವೇಗದ ಆಟ. ರಾಹುಲ್ ಅವರದ್ದು ಶಾಂತಚಿತ್ತದ ಆಟ. 33 ಎಸೆತಗಳಲ್ಲಿ ಗೇಲ್ ಅರ್ಧಶತಕ ಪೂರೈಸಿದರು. ಅದರಲ್ಲಿ ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳಿದ್ದವು.

15ನೇ ಓವರ್‌ನಲ್ಲಿ ರಾಹುಲ್ (46; 41ಎ)ಬೀಸು ಹೊಡೆತವೊಂದರಲ್ಲಿ ರಾಹುಲ್ ತೆವಾಟಿಯಾಗೆ ಬೌಂಡರಿಗೆರೆಯ ಬಳಿ ಕ್ಯಾಚ್ ಆದರು. ಬೆನ್ ಸ್ಟೋಕ್ಸ್‌ ವಿಕೆಟ್ ಗಳಿಸಿ ಮುಗುಳ್ನಕ್ಕರು. ಕ್ರೀಸ್‌ಗೆ ಬಂದ ನಿಕೊಲಸ್ ಪೂರನ್ ತಮ್ಮ ತವರಿನ ಗೆಳೆಯ ಗೇಲ್ ಜೊತೆಗೆ ಪಟಪಟನೆ 41 ರನ್‌ಗಳನ್ನು ಸೇರಿಸಿದರು. ಆದರೆ 18ನೇ ಓವರ್‌ನಲ್ಲಿ ಅವರೂ ಸ್ಟೋಕ್ಸ್‌ಗೆ ವಿಕೆಟ್ ಕೊಟ್ಟರು.

ಆದರೆ ಕ್ರಿಸ್ ಗೇಲ್ ಸಿಡಿಲಬ್ಬರ ಮಾತ್ರ ನಿಂತಿರಲಿಲ್ಲ. ಐಪಿಎಲ್‌ನಲ್ಲಿ ಏಳನೇ ಶತಕ ದಾಖಲಿಸುವತ್ತ ದಾಪುಗಾಲಿಟ್ಟಿದ್ದರು.

93 ರನ್‌ನಲ್ಲಿದ್ದ ಗೇಲ್ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇನ್ನೊಂದು ರನ್ ಬೇಕಿದ್ದಾಗ ಬೌಲ್ಡ್ ಆದಾಗ, ಹತಾಶೆಯಿಂದ ಬ್ಯಾಟ್‌ ಬೀಸಿ ನೆಲಕ್ಕೆ ಒಗೆದರು.

ಅದು ದೂರ ಹೋಗಿಬಿತ್ತು. ಆಗ ತಮ್ಮೆದುರಿಗೆ ಬಂದ ಜೋಫ್ರಾ ಕೈಕುಲುಕಿ ಅಭಿನಂದಿಸಿದರು. ಇನ್ನೊಂದು ಬದಿ ಯಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ ತಂದು ಗೇಲ್‌ಗೆ ಕೊಟ್ಟರು. ತಮ್ಮ ಹೆಲ್ಮೆಟ್‌ ಅನ್ನು ಬ್ಯಾಟ್‌ ಹಿಡಿಕೆಗೆ ಸಿಕ್ಕಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ ಗೇಲ್, ಕೆಲವೇ ನಿಮಿಷಗಳ ನಂತರ ತಮ್ಮ ಸಹ ಆಟಗಾರರೊಂದಿಗೆ ನಗುತ್ತ ಹರಟೆ ಹೊಡೆದರು.

ಐಪಿಎಲ್‌ನಲ್ಲಿ ಎರಡು ಬಾರಿ 99 ರನ್‌ಗಳಿಸಿ ಔಟಾದ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಅವರದ್ದಾಯಿತು!

ರಾಜಸ್ಥಾನ–ಪಂಜಾಬ್‌ ಸ್ಕೋರ್‌

ಕಿಂಗ್ಸ್ ಇಲೆವನ್‌ ಪಂಜಾಬ್‌ 4ಕ್ಕೆ 185 (20 ಓವರ್‌ಗಳಲ್ಲಿ)

ಕೆ.ಎಲ್‌.ರಾಹುಲ್‌ ಸಿ ರಾಹುಲ್‌ ತೆವಾಟಿಯಾ ಬಿ ಬೆನ್‌ ಸ್ಟೋಕ್ಸ್ 46

ಮನದೀಪ್‌ ಸಿಂಗ್ ಸಿ ಬೆನ್‌ ಸ್ಟೋಕ್ಸ್ ಬಿ ಜೋಫ್ರಾ ಆರ್ಚರ್‌ 00

ಕ್ರಿಸ್‌ ಗೇಲ್‌ ಬಿ ಜೋಫ್ರಾ ಆರ್ಚರ್‌ 99

ನಿಕೋಲಸ್‌ ಪೂರನ್‌ ಸಿ ರಾಹುಲ್‌ ತೆವಾಟಿಯಾ ಬಿ ಬೆನ್‌ ಸ್ಟೋಕ್ಸ್ 22

ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗದೆ 06

ದೀಪಕ್‌ ಹೂಡಾ ಔಟಾಗದೆ 01

ಇತರೆ (ಲೆಗ್‌ಬೈ 1,ವೈಡ್‌ 8, ನೋಬಾಲ್‌ 2) 11

ವಿಕೆಟ್‌ ಪತನ: 1–1 (ಮನದೀಪ್‌ ಸಿಂಗ್‌, 0.6), 2–121 (ಕೆ.ಎಲ್‌.ರಾಹುಲ್‌, 14.4), 3–162 (ನಿಕೋಲಸ್‌ ಪೂರನ್‌, 17.6), 4–184 (ಕ್ರಿಸ್‌ ಗೇಲ್‌, 19.4)

ಬೌಲಿಂಗ್‌: ಜೋಫ್ರಾ ಆರ್ಚರ್‌ 4–0–26–2, ವರುಣ್ ಆ್ಯರನ್‌ 4–0–47–0, ಕಾರ್ತಿಕ್‌ ತ್ಯಾಗಿ 4–0–47–0, ಶ್ರೇಯಸ್‌ ಗೋಪಾಲ್‌ 1–0–10–0, ಬೆನ್ ಸ್ಟೋಕ್ಸ್ 4–0–32–2, ರಾಹುಲ್‌ ತೆವಾಟಿಯಾ 3–0–22–0

ರಾಜಸ್ಥಾನ ರಾಯಲ್ಸ್

ರಾಬಿನ್‌ ಉತ್ತಪ್ಪ ಸಿ ನಿಕೋಲಸ್‌ ಪೂರನ್‌ ಬಿ ಮುರುಗನ್‌ ಅಶ್ವಿನ್‌ 30

ಬೆನ್ ಸ್ಟೋಕ್ಸ್ ಸಿ ದೀಪಕ್‌ ಹೂಡಾ ಬಿಕ್ರಿಸ್‌ ಜೋರ್ಡಾನ್‌ 50

ಸಂಜು ಸ್ಯಾಮ್ಸನ್‌

ಸ್ಟೀವನ್‌ ಸ್ಮಿತ್‌

ಇತರೆ

ವಿಕೆಟ್‌ ಪತನ: 1–60 (ಬೆನ್‌ ಸ್ಟೋಕ್ಸ್, 5.3),

ಬೌಲಿಂಗ್‌: ಅರ್ಷದೀಪ್‌ ಸಿಂಗ್‌ , ಮೊಹಮ್ಮದ್‌ ಶಮಿ, ಮುರುಗನ್‌ ಅಶ್ವಿನ್‌ 4–0–43–1,ಕ್ರಿಸ್‌ ಜೋರ್ಡಾನ್‌ , ರವಿ ಬಿಷ್ಣೋಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.